ADVERTISEMENT

ರಾಮನಗರ: ಮಾರುಕಟ್ಟೆಗೆ ಅವರೆಕಾಯಿ ಲಗ್ಗೆ – ಬೆಲೆ ಕುಸಿತ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2018, 13:26 IST
Last Updated 11 ಡಿಸೆಂಬರ್ 2018, 13:26 IST
ಹಳೆ ಬಸ್ ನಿಲ್ದಾಣದಲ್ಲಿ ರಸ್ತೆ ಬದಿಯಲ್ಲಿ ಮಾರಾಟಕ್ಕಿರುವ ಅವರೆಕಾಯಿ
ಹಳೆ ಬಸ್ ನಿಲ್ದಾಣದಲ್ಲಿ ರಸ್ತೆ ಬದಿಯಲ್ಲಿ ಮಾರಾಟಕ್ಕಿರುವ ಅವರೆಕಾಯಿ   

ರಾಮನಗರ: ಜಿಲ್ಲಾ ಕೇಂದ್ರದಲ್ಲಿ ಈಗ ಅವರೆಕಾಯಿ ಮಾರಾಟ ಹೆಚ್ಚಾಗಿ ನಡೆಯುತ್ತಿದ್ದು, ಬೆಲೆಯೂ ಕುಸಿದಿದೆ.

ಬೆಂಗಳೂರು–ಮೈಸೂರು ರಸ್ತೆ ಪಕ್ಕದಲ್ಲಿ, ಎಪಿಎಂಸಿ ಮಾರುಕಟ್ಟೆ ಆಸುಪಾಸು, ಹಳೆ ಬಸ್‌ ನಿಲ್ದಾಣ ಮತ್ತು ಬಡಾವಣೆಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಅವರೆಕಾಯಿ ಮಾರಾಟ ನಡೆಯುತ್ತಿದೆ.

ಸ್ಥಳೀಯವಾಗಿ ಅವರೆಕಾಯಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ. ಇಲ್ಲಿಗೆ ಹುಣಸೂರು, ಕೊಳ್ಳೇಗಾಲ, ಮೈಸೂರು ಜಿಲ್ಲೆಯ ನಂಜನಗೂಡು, ಎಚ್.ಡಿ. ಕೋಟೆ, ಗುಂಡ್ಲುಪೇಟೆ ಭಾಗದಿಂದಲೇ ಹೆಚ್ಚಾಗಿ ಅವರೆಕಾಯಿ ಪೂರೈಕೆಯಾಗುತ್ತಿದೆ. ಒಂದು ಕೆ.ಜಿ ಅವರೆಕಾಯಿಯ ಬೆಲೆ ₹16 ರಿಂದ ₹20 ಇದೆ.

ADVERTISEMENT

‘ಪ್ರಸ್ತುತ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಅವರೆ ಕಾಯಿ ಬರುತ್ತಿದ್ದು, ಸಂಜೆ ವೇಳೆಗೆ ಮಾರಾಟವಾಗದೆ ಉಳಿಯುತ್ತಿದೆ’ ಎನ್ನುತ್ತಾರೆ ತರಕಾರಿ ಮಾರಾಟಗಾರ ಎಸ್. ಶ್ರೀನಿವಾಸ್.

ಜಿಲ್ಲೆಯಲ್ಲಿ ಮಾಗಡಿ ತಾಲ್ಲೂಕಿನಿಂದ ಅವರೆಕಾಯಿ ಬರಲು ಇನ್ನು ಹದಿನೈದು ದಿನ ಬೇಕು. ಚಿತ್ರದುರ್ಗ, ಆಂಧ್ರಪ್ರದೇಶದಿಂದ ಅವರೆಕಾಯಿ ಹೆಚ್ಚಾಗಿ ಬರುತ್ತಿರುವುದರಿಂದ ಈ ಬಾರಿ ಅವರೆಕಾಯಿಗೆ ಉತ್ತಮ ಬೆಲೆ ಇಲ್ಲ ಎಂದು ತಿಳಿಸಿದರು.

ಅವರೆಕಾಯಿಯ ಬೆಲೆ ಕಳೆದ ವರ್ಷಗಳಿಗಿಂತ ಕಡಿಮೆ ಇದ್ದರೂ ಗ್ರಾಹಕರು ಖರೀದಿಸುತ್ತಿಲ್ಲ. ಜತೆಗೆ ತರಕಾರಿಗಳ ವ್ಯಾಪಾರವೂ ಈಚಿನ ದಿನಗಳಲ್ಲಿ ಸರಿಯಾಗಿ ನಡೆಯುತ್ತಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.