ADVERTISEMENT

ಬಮೂಲ್‌ ಚುನಾವಣೆ: ಟಿಕೆಟ್‌ಗೆ ಪೈಪೋಟಿ

ಆಕಾಂಕ್ಷಿಗಳಿಂದ ಮುಖಂಡರ ಭೇಟಿ: ‘ಮೈತ್ರಿ’ ಬಗ್ಗೆಯೂ ಕುತೂಹಲ

ಆರ್.ಜಿತೇಂದ್ರ
Published 25 ಏಪ್ರಿಲ್ 2019, 20:00 IST
Last Updated 25 ಏಪ್ರಿಲ್ 2019, 20:00 IST
   

ರಾಮನಗರ: ಜಿಲ್ಲೆಯಲ್ಲಿ ಮತ್ತೊಂದು ಚುನಾವಣೆಯು ಕಾವು ಪಡೆಯುತ್ತಿದ್ದು, ಬಮೂಲ್‌ ನಿರ್ದೇಶಕ ಸ್ಥಾನಕ್ಕೆ ಏರಲು ಸಾಕಷ್ಟು ಪೈಪೋಟಿ ನಡೆದಿದೆ.

ಬಮೂಲ್‌ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಮೇ 12ರಂದು ಚುನಾವಣೆಯು ನಿಗದಿಯಾಗಿದೆ. ಒಟ್ಟು 13 ಕ್ಷೇತ್ರಗಳ ಪೈಕಿ ಜಿಲ್ಲೆಯಲ್ಲಿ 5 ಕ್ಷೇತ್ರಗಳಿಂದ ನಿರ್ದೇಶಕರ ಆಯ್ಕೆ ಆಗಲಿದೆ. ಕನಕಪುರ ಹೊರತುಪಡಿಸಿ ಉಳಿದ ನಾಲ್ಕು ಸ್ಥಾನಗಳಿಗೆ ತೀವ್ರ ಹಣಾಹಣಿ ಏರ್ಪಡುವ ಸಾಧ್ಯತೆ ಇದೆ. ಇಲ್ಲಿಯೂ ‘ಮೈತ್ರಿ’ ಧರ್ಮ ಪಾಲನೆಯಾಗಲಿದೆಯೇ ಎಂಬ ಕುತೂಹಲ ಮೂಡಿದೆ.

ರಾಮನಗರ ಕ್ಷೇತ್ರದಿಂದ ಹಾಲಿ ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಬಮೂಲ್ ಚುನಾವಣೆಯಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಸೋಲಿಲ್ಲದ ಸರದಾರನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಈ ಬಾರಿ ಅವರಿಗೆ ಡಿ.ಕೆ. ಸಹೋದರರಿಂದ ವಿರೋಧ ವ್ಯಕ್ತವಾಗಿದೆ.

ADVERTISEMENT

ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದ ಸಂದರ್ಭ ಆದ ಒಳ ಒಪ್ಪಂದದಂತೆ ಕೆಎಂಎಫ್ ಅಧ್ಯಕ್ಷ ಸ್ಥಾನವನ್ನು ಮತ್ತೊಬ್ಬರಿಗೆ ಹಸ್ತಾಂತರ ಮಾಡದ ಕಾರಣ ನಾಗರಾಜು ಡಿ.ಕೆ. ಶಿವಕುಮಾರ್‌ ಕೆಂಗಣ್ಣಿಗೆ ಗುರಿಯಾಗಿದ್ದರು. ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲು ಸರ್ಕಾರ ಮುಂದಾದಾಗ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆಯನ್ನೂ ತಂದರು. ನಂತರದ ಬೆಳವಣಿಗೆಯಲ್ಲಿ ಅವರು ಜೆಡಿಎಸ್ ಸೇರಿದ್ದರು.

ಇದೀಗ ನಾಗರಾಜು ಮತ್ತೆ ನಿರ್ದೇಶಕ ಹುದ್ದೆಯ ಆಕಾಂಕ್ಷಿಯಾಗಿದ್ದಾರೆ. ಅವರ ವಿರುದ್ಧ ಜೆಡಿಎಸ್‌ ಮುಖಂಡ ಶಿವಲಿಂಗಯ್ಯ ಸ್ಪರ್ಧೆಗೆ ಉತ್ಸಾಹ ತೋರಿದ್ದಾರೆ. ಸದ್ಯ ನಾಗರಾಜು ಕೂಡ ಜೆಡಿಎಸ್‌ನಲ್ಲೇ ಇರುವ ಕಾರಣ ಪಕ್ಷದ ವರಿಷ್ಠದ ನಡೆ ಕುತೂಹಲ ಕೆರಳಿಸಿದೆ. ಕೆಎಂಎಫ್‌ ಹಾಲಿ ಅಧ್ಯಕ್ಷರಿಗೆ ಟಿಕೆಟ್‌ ತಪ್ಪಿಸಲು ಶಿವಕುಮಾರ್ ಪ್ರಭಾವ ಬೀರಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಾಗಡಿಯಲ್ಲೂ ಕುತೂಹಲ: ಬಮೂಲ್ ಪ್ರಸಕ್ತ ವರ್ಷದಿಂದ 12 ನಿರ್ದೇಶಕ ಸ್ಥಾನಗಳನ್ನು 13ಕ್ಕೆ ಏರಿಕೆ ಮಾಡಿದ್ದು, ಕುದೂರು ಕ್ಷೇತ್ರವು ಹೊಸತಾಗಿ ರಚನೆಯಾಗಿದೆ.

ಕುದೂರು, ತಿಪ್ಪಸಂದ್ರ, ಸೋಲೂರು ಹೋಬಳಿಗಳನ್ನು ಒಳಗೊಂಡ ಕುದೂರು ಕ್ಷೇತ್ರ, ಹಾಗೂ ಕಸಬಾ ಮತ್ತು ಮಾಡಬಾಳ್ ಹೋಬಳಿಗಳನ್ನು ಒಳಗೊಂಡ ಮಾಗಡಿ ಕ್ಷೇತ್ರದ ಮೇಲೆ ಮೈತ್ರಿ ಪಕ್ಷಗಳ ಮುಖಂಡರ ಕಣ್ಣು ಬಿದ್ದಿದೆ.

ಮಾಗಡಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ನರಸಿಂಹಮೂರ್ತಿ ಐದನೇ ಬಾರಿಗೆಚುನಾವಣೆ ಎದುರಿಸುವ ಉತ್ಸಾಹದಲ್ಲಿ ಇದ್ದಾರೆ. ಕಾಂಗ್ರೆಸ್‌ ಮುಖಂಡ ಎಚ್.ಸಿ. ಬಾಲಕೃಷ್ಣ ಸಹೋದರನಾದ ಜಿ.ಪಂ.ಸದಸ್ಯ ಎಚ್.ಎನ್. ಅಶೋಕ್ ಸಹ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಜೆಡಿಎಸ್‌ ಪಾಳಯದಲ್ಲಿ ಪೂಜಾರಿಪಾಳ್ಯ ಕೃಷ್ಣಮೂರ್ತಿ ಮತ್ತು ಬೋರ್‌ವೆಲ್‌ ನರಸಿಂಹಯ್ಯ ನಡುವೆ ಪೈಪೋಟಿ ಇದೆ.

ಕುದೂರು ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಕೆಇಬಿ ರಾಜಣ್ಣ, ಎಂ.ಕೆ. ಧನಂಜಯ ಹಾಗೂ ಶಿವಪ್ರಸಾದ್ ಹೆಸರು ಚಾಲ್ತಿಯಲ್ಲಿ ಇವೆ. ಜೆಡಿಎಸ್‌ನಿಂದ ಸಂತೋಷ್, ಬ್ಯಾಡ್ರಹಳ್ಳಿ ರಾಜು ಮತ್ತು ಕನ್ನಸಂದ್ರ ಮಂಜುನಾಥ್ ನಡುವೆ ಪೈಪೋಟಿ ಏರ್ಪಟ್ಟಿದೆ.

ಚನ್ನಪಟ್ಟಣದಲ್ಲಿ ರಂಗಿನ ರಾಜಕೀಯ

ಚನ್ನಪಟ್ಟಣ ತಾಲ್ಲೂಕಿನಲ್ಲಿ ಜೆಡಿಎಸ್‌ ಮುಖಂಡರಾದ ಲಿಂಗೇಶ್‌ಕುಮಾರ್ ಮತ್ತು ಜಯಮುತ್ತು ನಡುವೆ ತೀವ್ರ ಪೈಪೋಟಿ ಇದೆ. ಒಬ್ಬರಿಗೆ ಅನಿತಾರ ಆಶೀರ್ವಾದ ಇದ್ದರೆ, ಮತ್ತೊಬ್ಬರು ಪಕ್ಷ ಸಂಘಟನೆಗೆ ದುಡಿದ ಶ್ರಮವನ್ನೇ ಬಂಡವಾಳವಾಗಿಸಿ ಟಿಕೆಟ್‌ ಕೇಳಿದ್ದಾರೆ. ತಾಲ್ಲೂಕಿನಲ್ಲಿ 124 ಎಂಪಿಸಿಎಸ್‌ಗಳು ಮತ ಚಲಾವಣೆಯ ಅಧಿಕಾರ ಹೊಂದಿದ್ದು, ಅವುಗಳ ಬೆಂಬಲ ಪಡೆಯಲು ಈಗಾಗಲೇ ಪೈಪೋಟಿ ನಡೆದಿದೆ. ಈ ಇಬ್ಬರು ಮುಖಂಡರ ನಡುವಿನ ರಾಜಕೀಯ ಸಾಕಷ್ಟು ಸುದ್ದಿ ಮಾಡುತ್ತಿದೆ.

ಸಿ.ಎಂ. ಬಳಿಗೆ ದೌಡಾಯಿಸಿದ ನಾಗರಾಜು

ಟಿಕೆಟ್‌ ಕೈ ತಪ್ಪುವ ಸಾಧ್ಯತೆ ಕಾಣುತ್ತಲೇ ಪಿ. ನಾಗರಾಜು ಮುಖ್ಯಮಂತ್ರಿ ಬಳಿಗೆ ದೌಡಾಯಿಸಿದ್ದು, ತಮಗೇ ‘ಆಶೀರ್ವಾದ’ ಸಿಗುವುದನ್ನು ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ.

ಜೆಡಿಎಸ್‌ನ ಮುಖಂಡರೊಂದಿಗೆ ಬುಧವಾರ ಬೆಂಗಳೂರಿನಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಶಾಸಕಿ ಅನಿತಾರನ್ನು ಭೇಟಿ ಮಾಡಿದ ಅವರು ಚುನಾವಣೆಯಲ್ಲಿ ಬೆನ್ನಿಗೆ ನಿಲ್ಲುವಂತೆ ಕೋರಿದ್ದಾರೆ. ಇದಕ್ಕೆ ಇಬ್ಬರಿಂದಲೂ ಸಹಮತ ವ್ಯಕ್ತವಾಯಿತು ಎನ್ನಲಾಗಿದೆ.

ಮುಖಂಡರಾದ ಎಚ್.ಸಿ.ರಾಜಣ್ಣ, ಪ್ರಾಣೇಶ್, ಬಿಡಿಸಿಸಿ ಬ್ಯಾಂಕ್ ನಿದೇರ್ಶಕ ಅಶ್ವಥ್, ಶಂಕರಪ್ಪ, ಎಪಿಎಂಸಿ ಅಧ್ಯಕ್ಷ ದೊರೆಸ್ವಾಮಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಟಿ.ಕೆ.ಶಂತಪ್ಪ ಸೇರಿದಂತೆ ಹಲವರು ಈ ಸಂದರ್ಭ ಇದ್ದರು ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.