ADVERTISEMENT

ರಾಮನಗರ : ಬಂದ್‌ಗೆ ವಿವಿಧ ಸಂಘಟನೆ, ಪಕ್ಷಗಳ ಬೆಂಬಲ

ತೈಲಬೆಲೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಖಂಡಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2018, 14:42 IST
Last Updated 9 ಸೆಪ್ಟೆಂಬರ್ 2018, 14:42 IST

ರಾಮನಗರ : ತೈಲಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡುತ್ತಿರುವ ಎನ್‍ಡಿಎ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಇದೇ10ರಂದು ನಡೆಯುವ ಭಾರತ್ ಬಂದ್ ಗೆ ಜಿಲ್ಲೆಯಲ್ಲಿ ರಾಜಕೀಯ ಪಕ್ಷಗಳು, ರೈತ, ಕನ್ನಡಪರ ಹಾಗೂ ಕಾರ್ಮಿಕ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ.

ಕಾಂಗ್ರೆಸ್, ಜೆಡಿಎಸ್, ಬಹುಜನ ಸಮಾಜವಾದಿ, ಆರ್‌ಪಿಐ, ಸಿಪಿಎಂ ಪಕ್ಷಗಳು, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಜಯಕರ್ನಾಟಕ, ಕರ್ನಾಟಕ ರಕ್ಷಣಾ ವೇದಿಕೆ, ರೈತಸಂಘ ಹಾಗೂ ಹಸಿರು ಸೇನೆ, ಲಾರಿ ಮತ್ತು ಟೆಂಪೊ ಮಾಲೀಕರು, ಚಾಲಕರು, ವಾಣಿಜ್ಯೋದ್ಯಮಿಗಳ ಸಂಘ ಹಾಗೂ ಜವಳಿ ವರ್ತಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿವೆ.

ಬಸ್ ಸಂಚಾರ ಸ್ಥಗಿತ

ADVERTISEMENT

ಭಾರತ್ ಬಂದ್ ಹಿನ್ನೆಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಬಸ್ ಸಂಚಾರ ದಿನಪೂರ್ತಿ ಬಂದ್ ಆಗಲಿದೆ. ಸರ್ಕಾರಿ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಸಾರಿಗೆ ಇಲಾಖೆ ನಿರ್ಧರಿಸಿದ್ದರೆ, ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಸ್ ಸಂಚಾರ ಬಂದ್ ಮಾಡಲು ತೀರ್ಮಾನಿಸಿದೆ.

ಬಸ್ ಸಂಚಾರ ಬಂದ್ ಹಿನ್ನೆಲೆಯಲ್ಲಿ ಸುಗಮ ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ನಿಚ್ಚಳವಾಗಿದ್ದು, ದಿನನಿತ್ಯದ ವಹಿವಾಟಿನ ಮೇಲೆ ಪರಿಣಾಮ ಬೀರಲಿದೆ. ಚಿತ್ರಮಂದಿರಗಳು ಚಲನಚಿತ್ರ ಪ್ರದರ್ಶನ ರದ್ದುಪಡಿಸಲಿವೆ.

ಅಂಗಡಿ-ಮುಂಗಟ್ಟುಗಳು ಬಂದ್ ಆಗಲಿವೆ. ಜನಸಾಮಾನ್ಯರಿಗೆ ಅಗತ್ಯ ವಸ್ತುಗಳು ಸಿಗುವುದು ಅನುಮಾನ. ಸರ್ಕಾರಿ ಕಚೇರಿಗಳ ಕೆಲಸ-ಕಾರ್ಯಗಳಲ್ಲೂ ವ್ಯತ್ಯಯ ಉಂಟಾಗಲಿದೆ. ಬಂದ್ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಹೋಗುವವರು ಭಾನುವಾರವೇ ಪ್ರಯಾಣ ಕೈಗೊಂಡಿದ್ದರು. ಬ್ಯಾಂಕ್ ಎಟಿಎಂಗಳಲ್ಲೂ ಸೋಮವಾರ ಹಣ ಸಿಗುವ ಅನುಮಾನವಿದೆ.

ಮುಂಜಾಗ್ರತೆಯಾಗಿ ಬಂದ್ ಮುನ್ನಾ ದಿನವೇ ಬಹುತೇಕರು ವಾಹನಗಳಿಗೆ ಪೆಟ್ರೋಲ್ ತುಂಬಿಸಿಕೊಳ್ಳುತ್ತಿತ್ತು ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.