ADVERTISEMENT

ನರೇಗಾ ಯೋಜನೆ ಅಡಿ ನಿರ್ಮಾಣ: ಸಿದ್ಧವಾಯ್ತು ಸುಂದರ ಕ್ರೀಡಾಂಗಣ

ಶ್ರಮಿಸಿದವರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2021, 4:25 IST
Last Updated 16 ಏಪ್ರಿಲ್ 2021, 4:25 IST
ಕೂನಗಲ್‌ ಶಾಲೆ ಆವರಣದಲ್ಲಿ ನಿರ್ಮಾಣಗೊಂಡ ಕ್ರೀಡಾಂಗಣದ ಪಕ್ಷಿನೋಟ
ಕೂನಗಲ್‌ ಶಾಲೆ ಆವರಣದಲ್ಲಿ ನಿರ್ಮಾಣಗೊಂಡ ಕ್ರೀಡಾಂಗಣದ ಪಕ್ಷಿನೋಟ   

ರಾಮನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಗ್ರಾಮೀಣ ಶಾಲೆಗಳಲ್ಲಿ ಕ್ರೀಡಾಂಗಣಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಮುಂದಾಗಿದೆ. ಈ ಯೋಜನೆಯ ಅಂಗವಾಗಿ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂನಗಲ್ ಸರ್ಕಾರ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು ಆವರಣದಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ ಎಲ್ಲರ ಗಮನ ಸೆಳೆಯುತ್ತಿದೆ.

ಸರ್ಕಾರಿ ಶಾಲೆಗೆ ಸೇರಿದ ಜಮೀನನ್ನು ಬಳಸಿಕೊಂಡು ಕೇವಲ ₹ 5 ಲಕ್ಷ ವೆಚ್ಚದಲ್ಲಿ ಈ ಕ್ರೀಡಾಂಗಣವನ್ನು ವಿನ್ಯಾಸಗೊಳಿಸಲಾಗಿದೆ. ಶಾಲೆಯೊಂದರ ವಿದ್ಯಾರ್ಥಿಗಳ ಕ್ರೀಡಾಭ್ಯಾಸಕ್ಕೆ ಬೇಕಾದ ಸೌಕರ್ಯಗಳಿವೆ. ಗುಂಪು ಕ್ರೀಡೆಗಳಾದ ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್‌, ಕೊಕ್ಕೊ ಅಂಗಣಗಳಿವೆ. ಜೊತೆಗೆ ಅಥ್ಲೆಟಿಕ್‌ ಅಭ್ಯಾಸಕ್ಕೆ ಅನುಕೂಲ ಆಗುವಂತೆ 100 ಮೀ. ಓಟದ ಟ್ರ್ಯಾಕ್‌, ಲಾಂಗ್‌ ಜಂಪ್‌ ಅಂಕಣ ಇದೆ. ಜೊತೆಗೆ ಕ್ರೀಡಾಂಗಣಕ್ಕೆ ಹೊಂದಿಕೊಂಡಂತೆ ಸಮುದಾಯ ಶೌಚಾಲಯ ಸಹ ನಿರ್ಮಾಣ ಆಗಿದೆ. ಇದರೊಟ್ಟಿಗೆ ನರೇಗಾ ಅಡಿ ಶಾಲೆಗೆ ಮಳೆನೀರು ಸಂಗ್ರಹ ವ್ಯವಸ್ಥೆ ಸಹ ಮಾಡಲಾಗಿದೆ.

‘ಜಮೀನು ಹೊಂದಿರುವ ಶಾಲೆಗಳಲ್ಲಿ ನರೇಗಾ ಅಡಿ ಉತ್ತಮವಾದ ಕ್ರೀಡಾಂಗಣಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ, ವಿದ್ಯಾರ್ಥಿಗಳಿಗೆ ಉತ್ತಮ ಕ್ರೀಡಾಂಗಣ ದೊರೆಯಲಿದೆ. ಹಳ್ಳಿಗಳಿಂದಲೂ ಕ್ರೀಡಾ ಪ್ರತಿಭೆಗಳು ಅರಳಲು ಅನುಕೂಲ ಆಗಲಿದೆ’ ಎನ್ನುತ್ತಾರೆ ರಾಮನಗರ ತಾ.ಪಂ ಇಒ ಶಿವಕುಮಾರ್.

ADVERTISEMENT

ಸಿಇಒ ಮೆಚ್ಚುಗೆ: ಕೂನಗಲ್‌ ಸರ್ಕಾರಿ ಶಾಲೆ ಕ್ರೀಡಾಂಗಣವನ್ನು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಮೆಚ್ಚಿದ್ದು, ಬುಧವಾರ ಅಧಿಕಾರಿಗಳ ಜೊತೆ ಭೇಟಿ ನೀಡಿದರು. ಇದರ ನಿರ್ಮಾಣಕ್ಕೆ ಕಾರಣವಾದ ಪಿಡಿಒ, ಎಂಜಿನಿಯರ್‌ ಸೇರಿದಂತೆ ಹಲವರನ್ನುಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.