ರಾಮನಗರ ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಭೂಮಿಪೂಜೆ ನೆರವೇರಿಸಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ. ಹೇಮಂತ್ ಕುಮಾರ್, ಉಪಾಧ್ಯಕ್ಷೆ ಜ್ಯೋತಿ ಹಾಗೂ ಸದಸ್ಯರು ಇದ್ದಾರೆ
ರಾಮನಗರ: ‘ಸಂವಿಧಾನ ಶಿಲ್ಪಿ ಹಾಗೂ ಶೋಷಿತರ ಪಾಲಿನ ಸೂರ್ಯ ಡಾ. ಬಿ.ಆರ್. ಅಂಬೇಡ್ಕರ್ ಅವರ ಭವನವನ್ನು ತಾಲ್ಲೂಕಿನ ಪ್ರತಿ ಗ್ರಾಮದಲ್ಲಿ ನಿರ್ಮಾಣ ಮಾಡುವುದು ನನ್ನ ಗುರಿಯಾಗಿದೆ. ಈ ಭವನಗಳು ಸಮುದಾಯದ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಹೇಳಿದರು.
ತಾಲ್ಲೂಕಿನ ಕೈಲಾಂಚ ಹೋಬಳಿಯ ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡ್ಡರದೊಡ್ಡಿ ಗ್ರಾಮದಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಗ್ರಾಮ ಮಟ್ಟದ ಭವನಗಳನ್ನು ತಮ್ಮ ಮನೆಗಳಂತೆ ನೋಡಿಕೊಳ್ಳಬೇಕು. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಮೇಲ್ವಿಚಾರಣೆ ಮಾಡಬೇಕು’ ಎಂದರು.
‘ಅಂಬೇಡ್ಕರ್ ಅವರ ಸಂವಿಧಾನದ ಕಾರಣದಿಂದಾಗಿ ನಾವೆಲ್ಲರೂ ಇಂದು ಈ ಸ್ಥಿತಿಯಲ್ಲಿದ್ದೇವೆ. ಇಲ್ಲದಿದ್ದರೆ, ನಮ್ಮ ಪರಿಸ್ಥಿತಿಯನ್ನು ಊಹಿಸಿಕೊಳ್ಳಲು ಸಹ ಸಾಧ್ಯವಾಗುತ್ತಿರಲಿಲ್ಲ. ನೂರಾರು ವರ್ಷಗಳಿಂದ ಅವಕಾಶ ವಂಚಿತರಾದವರಿಗೆ ಸಂವಿಧಾನದತ್ತವಾಗಿ ಹಲವು ಸೌಲಭ್ಯಗಳನ್ನು ಕೊಟ್ಟರು. ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಾವು ಸ್ವಾವಲಂಬಿಗಳಾಗಿ ಬದುಕಲು ಬುನಾದಿ ಹಾಕಿದರು’ ಎಂದು ತಿಳಿಸಿದರು.
‘ಸಮ ಬಾಳು ಮತ್ತು ಸಮ ಪಾಲು ಅಂಬೇಡ್ಕರ್ ಅವರ ಆಶಯವಾಗಿತ್ತು. ಅದು ಈಡೇರಬೇಕಾದರೆ, ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು. ಈ ನಿಟ್ಟಿನಲ್ಲಿ ನಮ್ಮೆಲ್ಲರ ಮೇಲೆ ಮಹತ್ತರವಾದ ಜವಾಬ್ದಾರಿಗಳಿವೆ. ಅವುಗಳನ್ನು ನಿರ್ವಹಿಸುವ ಮೂಲಕ ಶೋಷಿತ ಹಾಗೂ ಹಿಂದುಳಿದ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸಬೇಕು. ಆ ಮೂಲಕ, ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ. ಹೇಮಂತ್ ಕುಮಾರ್, ಉಪಾಧ್ಯಕ್ಷೆ ಜ್ಯೋತಿ, ಸದಸ್ಯರಾದ ಕುಮಾರ್ ಡಿ, ರವಿಕುಮಾರ್, ಚಂದ್ರಗಿರಿ, ಪೂರ್ಣಿಮಾ ಯಶೋಧಮ್ಮ, ಪಿಡಿಒ ಶಿವಕುಮಾರ್, ಕಾರ್ಯದರ್ಶಿ ಜಯರಾಮಯ್ಯ, ಬಿಲ್ ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ಮುನಿಶೆಟ್ಟಿ, ಮುಖಂಡರಾದ ನವೀನ್, ಸುರೇಶ್, ಚಿಕ್ಕ ವೆಂಕಟಯ್ಯ, ವೆಂಕಟೇಶ್, ದೊಡ್ಡ ವೆಂಕಟಸ್ವಾಮಿ, ಚಿನ್ನಸ್ವಾಮಿ, ಬಾಲಾಜಿ ಹಾಗೂ ಗ್ರಾಮಸ್ಥರು ಇದ್ದರು.
ನೀತಿ ಸಂಹಿತೆ ಉಲ್ಲಂಘನೆ
ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗವು ಉಪ ಚುನಾವಣೆಗೆ ಅಧಿಸೂಚನೆ ಹೊರಡಿಸಿರುವುದರಿಂದ ಜ. 16ರಿಂದ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಕಾಮಗಾರಿ ಉದ್ಘಾಟನೆ ಸೇರಿದಂತೆ ರಾಜಕೀಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಮಾಡುವಂತಿಲ್ಲ. ಅಧಿಕಾರಿಗಳು ಸಹ ಪಾಲ್ಗೊಳ್ಳುವಂತಿಲ್ಲ. ಇದರ ನಡುವೆಯೇ ಅಂಬೇಡ್ಕರ್ ಭವನಕ್ಕೆ ಭೂಮಿಪೂಜೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.