ADVERTISEMENT

ಚನ್ನಪಟ್ಟಣ: ಇಂದಿನಿಂದ ಬಿಸಿಲೇಶ್ವರಿ ದೇವಿ ಜಾತ್ರೆ ಸಂಭ್ರಮ

ರಾಜ್ಯದ ನಾನಾ ಭಾಗಗಳಲ್ಲಿ ಈ ದೇವರ ಒಕ್ಕಲು ಮನೆತನದವರು

ಎಚ್.ಎಂ.ರಮೇಶ್
Published 31 ಮಾರ್ಚ್ 2024, 5:04 IST
Last Updated 31 ಮಾರ್ಚ್ 2024, 5:04 IST
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಬಿಸಿಲೇಶ್ವರಿ ದೇವಸ್ಥಾನ
ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಇತಿಹಾಸ ಪ್ರಸಿದ್ಧ ಬಿಸಿಲೇಶ್ವರಿ ದೇವಸ್ಥಾನ   

ಚನ್ನಪಟ್ಟಣ: ಇತಿಹಾಸ ಪ್ರಸಿದ್ಧ ಹುಣಸನಹಳ್ಳಿ ಬಿಸಿಲೇಶ್ವರಿ ದೇವಿ ಜಾತ್ರಾ ಮಹೋತ್ಸವ ಭಾನುವಾರದಿಂದ (ಮಾ.31) ಆರಂಭಗೊಂಡು ಐದು ದಿನಗಳ ಕಾಲ ನಡೆಯಲಿದೆ.

ಈ ಭಾಗದಲ್ಲಿ ಅತಿದೊಡ್ಡ ಗ್ರಾಮ ಹಬ್ಬ ಬಿಸಿಲಮ್ಮ ದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಯುಗಾದಿಗೂ ಒಂದು ವಾರ ಮೊದಲು ಆರಂಭಗೊಳ್ಳುವ ಜಾತ್ರೆಯಲ್ಲಿ ಕೊಂಡ, ರಥೋತ್ಸವ, ಸಿಡಿ, ಮುತ್ತಿನ ಪಲ್ಲಕ್ಕಿ ಉತ್ಸವ, ಹೆಬ್ಬಾರೆ ಉತ್ಸವ, ವಸಂತೋತ್ಸವ ನಡೆಯುತ್ತದೆ. ರಾಜ್ಯದ ನಾನಾ ಭಾಗಗಳಲ್ಲಿ ಈ ದೇವರ ಒಕ್ಕಲು ಮನೆತನದವರಿದ್ದು, ಸಾವಿರಾರು ಮಂದಿ ಭಕ್ತರು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹಲವು ಪವಾಡಗಳ ಶಕ್ತಿದೇವತೆ ಎಂದು ಹೆಸರಾಗಿರುವ ಈ ಭಾಗದ ಭಕ್ತರ ಇಷ್ಟಾರ್ಥ ಈಡೇರಿಸುವ ದೇವತೆ ಎಂದು ಪ್ರಸಿದ್ಧವಾಗಿರುವ ಬಿಸಿಲಮ್ಮ ದೇವಿ ದೇವಸ್ಥಾನವನ್ನು ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಇದನ್ನು ಇತ್ತೀಚಿಗೆ ಜೀರ್ಣೋದ್ಧಾರ ಮಾಡಲಾಗಿದೆ. ಹಳೆ ಗೋಪುರ ಒಡೆದು ಹೊಸ ಗೋಪುರ ನಿರ್ಮಾಣ ಮಾಡಲಾಗಿದೆ. ದೇವಸ್ಥಾನದ ಒಳಾಂಗಣವನ್ನು ವಿಶಾಲ ಮಾಡಲಾಗಿದೆ.

ADVERTISEMENT

ಸ್ಥಳ ಪುರಾಣ: ಹುಣಸನಹಳ್ಳಿಯಲ್ಲಿ ನೆಲೆಸಿರುವ ಬಿಸಿಲೇಶ್ವರಿ ದೇವಿ ಹಾಗೂ ಕನಕಪುರ ತಾಲ್ಲೂಕಿನ ಕಬ್ಬಾಳು ಗ್ರಾಮದಲ್ಲಿ ನೆಲೆಸಿರುವ ಕಬ್ಬಾಳಮ್ಮ ಅಕ್ಕ ತಂಗಿಯರು. ಹಿರಿಯಳಾದ ಕಬ್ಬಾಳಮ್ಮನಿಗೆ ಮಕ್ಕಳಿರಲಿಲ್ಲ. ಆದರೆ, ಬಿಸಿಲಮ್ಮಗೆ 8 ಮಂದಿ ಗಂಡು ಮಕ್ಕಳಿದ್ದರು. ಮಕ್ಕಳಿಲ್ಲದ ಕಬ್ಬಾಳಮ್ಮ ತನ್ನ ತಂಗಿ ಮಕ್ಕಳನ್ನು ನೋಡಲು ಆಗಾಗ ಹುಣಸನಹಳ್ಳಿಗೆ ಆಸೆಯಿಂದ ಬರುತ್ತಿದ್ದಳು ಎನ್ನುವ ಪ್ರತೀತಿ ಇದೆ.

ಕಬ್ಬಾಳಮ್ಮ ತನ್ನ ಮಕ್ಕಳನ್ನು ನೋಡಲು ಬರುವುದು ಬಿಸಿಲಮ್ಮಗೆ ಸುತಾರಾಂ ಇಷ್ಟವಿರಲಿಲ್ಲ. ಬಂಜೆಯಾಗಿರುವ ಕಬ್ಬಾಳಮ್ಮನ ಕಣ್ಣು ತಾಗಿದರೆ ತನ್ನ ಮಕ್ಕಳಿಗೆ ಕೆಡುಕು ಉಂಟಾಗಬಹುದು ಎಂದೇ ನಂಬಿದ್ದ ಬಿಸಿಲಮ್ಮ ತನ್ನ ಮಕ್ಕಳನ್ನು ಬಚ್ಚಿಡುತ್ತಿದ್ದಳು. ಯಥಾ ಪ್ರಕಾರ ತನ್ನ ತಂಗಿ ಮಕ್ಕಳನ್ನು ನೋಡಲು ಕಬ್ಬಾಳಮ್ಮ ಒಂದು ಮಂಗಳವಾರ ಹುಣಸನಹಳ್ಳಿಗೆ ಬಂದಳು. ಅದನ್ನು ಕಂಡ ಬಿಸಿಲಮ್ಮ ಬಂಜೆಯಾದ ಕಬ್ಬಾಳಮ್ಮ ಮಕ್ಕಳಮ್ಮ ನೋಡಿದರೆ ಎಲ್ಲಿ ಕೇಡಾಗುವುದೋ ಎಂದರಿತು ತನ್ನ ಏಳು ಮಕ್ಕಳನ್ನು ಪಂಜರವೊಂದರಲ್ಲಿ ಕೂಡಿಹಾಕಿದಳಂತೆ. ಎಂಟನೇ ಮಗ ಸಿಡಿರಣ್ಣ ಮಾತ್ರ ಆಡವಾಡಲು ತೆರಳಿದ್ದನಂತೆ.

ಮನೆಗೆ ಬಂದ ಕಬ್ಬಾಳಮ್ಮ ಮಕ್ಕಳ ಬಗ್ಗೆ ವಿಚಾರಿಸಿದಾಗ ಎಲ್ಲರೂ ಆಟವಾಡಲು ಹೋಗಿದ್ದಾರೆ ಎಂದು ಬಿಸಿಲಮ್ಮ ಸುಳ್ಳು ಹೇಳಿದಳಂತೆ. ತನ್ನ ತಂಗಿ ಬಗ್ಗೆ ಅನುಮಾನಗೊಂಡ ಕಬ್ಬಾಳಮ್ಮ ತನ್ನ ದಿವ್ಯದೃಷ್ಟಿಯಿಂದ ಮಕ್ಕಳು ಪಂಜರದಲ್ಲಿರುವುದನ್ನು ಅರಿತು ಉಗ್ರಳಾಗಿ ಆಟವಾಡಲು ಹೋಗಿರುವ ಮಕ್ಕಳು ಉಳಿಯಲಿ, ಪಂಜರದಲ್ಲಿರುವ ಮಕ್ಕಳು ಕಲ್ಲಾಗಲಿ ಎಂದು ಶಾಪ ಕೊಟ್ಟಳಂತೆ. ಅದರಂತೆ 7 ಮಂದಿ ಕಲ್ಲಾಗಿ ಹೋದರು. ಆಟವಾಡಲು ಹೋಗಿದ್ದ ಸಿಡಿರಣ್ಣ ಮಾತ್ರ ಉಳಿದನು ಎಂದು ಗ್ರಾಮದ ಹಿರಿಯರು ತಿಳಿಸುತ್ತಾರೆ.

ಕಲ್ಲಾಗಿರುವ ಏಳು ಮಂದಿ ಮಕ್ಕಳಿಗೆ ಇಂದಿಗೂ ದೇವಸ್ಥಾದ ಒಳಗಿನ ಪ್ರಾಂಗಣದಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಕಲ್ಲಾಗಿರುವ ಮಕ್ಕಳಿಗೆ ನೆರಳಿಲ್ಲ. ಎಲ್ಲಿ ಕಲ್ಲಾಗಿದ್ದರೋ ಅದೇ ತೆರೆದ ಜಾಗದಲ್ಲಿ ಅವುಗಳನ್ನು ಪ್ರತಿಷ್ಟಾಪಿಸಲಾಗಿದ್ದು, ಬಿಸಿಲು ಮಳೆಯಲ್ಲಿಯೇ ಇಂದಿಗೂ ಅವುಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಆಟವಾಡಲು ಹೋಗಿ ಜೀವ ಉಳಿಸಿಕೊಂಡಿರುವ ಸಿಡಿರಣ್ಣಗೆ ಮಠ ಮನೆಯಲ್ಲಿ ಪೂಜೆ. ಸಿಡಿರಣ್ಣ ಈಗಲೂ ಪ್ರತಿವರ್ಷ ಕಬ್ಬಾಳಮ್ಮ ಜಾತ್ರೆಯಲ್ಲಿಯೂ ಪಾಲ್ಗೊಳ್ಳುವುದು ವಾಡಿಕೆಯಾಗಿದೆ.

ಬಿಸಿಲಮ್ಮ ದೇವಿಗೆ ಹರಕೆ ಹೊತ್ತರೆ ಎಲ್ಲ ಕಷ್ಟ ಕಾರ್ಪಣ್ಯ ನಾಶವಾಗುತ್ತದೆ. ಪೂಜೆ ಸಲ್ಲಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಸಿಡಿರಣ್ಣಗೆ ಹರಕೆ ಹೊತ್ತು ಹಣ ಕಟ್ಟಿಸಿದರೆ ಕಳ್ಳರು ಸಿಗುತ್ತಾರೆ. ಕಳ್ಳತನವಾಗಿರುವ ಹಣ, ಚಿನ್ನ ಎಲ್ಲವೂ ಮತ್ತೆ ಲಭಿಸುತ್ತದೆ. ಕಾಣೆಯಾಗಿರುವ ಮಕ್ಕಳು ಮತ್ತೆ ಸಿಗುತ್ತಾರೆ ಎನ್ನುವುದು ಇಲ್ಲಿಯ ಜನರ ನಂಬಿಕೆ.

ಜಾತ್ರಾ ವಿಶೇಷ: ಭಾನುವಾರ ಯಳವಾರ ಮತ್ತು ಹೋಮ ಹವನ ನಡೆಯಲಿದೆ. ಭಾನುವಾರ ಸಂಜೆ ಹುಣಸನಹಳ್ಳಿ, ಕೋಡಂಬಹಳ್ಳಿ, ಕೊಂಡಾಪುರ, ಹುಚ್ಚಯ್ಯನದೊಡ್ಡಿ ಸೇರಿದಂತೆ ಹಲವು ಗ್ರಾಮಗಳಿಂದ ಕೊಂಡಕ್ಕೆ ಸೌದೆ ಹಾಕುವ ಕಾರ್ಯಕ್ರಮ ನಡೆಯಲಿದೆ.

ಸೋಮವಾರ ಮುಂಜಾನೆ ಕೊಂಡ ಹಾಯುವುದು, ಸಂಜೆ ರಥೋತ್ಸವ ನಡೆಯಲಿದೆ. ಮಂಗಳವಾರ ಸಿಡಿ ಕಾರ್ಯಕ್ರಮ ನಡೆಯಲಿದೆ. ಸಿಡಿಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳ ಭಕ್ತರು, ಬೇರೆ ಬೇರೆ ಜಿಲ್ಲೆಯ ಭಕ್ತರು ಭಾಗವಹಿಸುತ್ತಾರೆ. ಸಿಡಿರಣ್ಣ ಸಿಡಿಯಾಡುವ ಸಂದರ್ಭದಲ್ಲಿ ನೂರಾರು ಭಕ್ತರು ನೆರೆಯುತ್ತಾರೆ. ತಮ್ಮ ಮಕ್ಕಳಿಗೆ ಹರಕೆ ಹೊತ್ತು ಸಿಡಿಯಾಡಿಸಿದರೆ ಮಕ್ಕಳಿಗೆ ಇರುವ ದೋಷ ಪರಿಹಾರವಾಗುತ್ತದೆ ಎಂಬುದು ಇಲ್ಲಿಯ ನಂಬಿಕೆ.

ಬಿಸಿಲೇಶ್ವರಿ ದೇವಿಯ ಮೂರ್ತಿ

ಹಾಗೆಯೇ ಭಕ್ತರು ದೇವರಿಗೆ ಹಣ್ಣು ಜವನ ಎಸೆಯುತ್ತಾರೆ. ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ಅನ್ನಪೂರ್ಣೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ. ಅಂದು ರಾತ್ರಿ ಉಯ್ಯಾಲೆ, ಮುತ್ತಿನ ಪಲ್ಲಕ್ಕಿ ಕಾರ್ಯಕ್ರಮ ನಡೆಯಲಿದೆ. ಬುಧವಾರ ವಸಂತೋತ್ಸವ, ರಾತ್ರಿ ಮುತ್ತಿನ ಉಯ್ಯಾಲೆ, ಗುರುವಾರ ದೇವರನ್ನು ಕರಗದ ಮನೆಗೆ ಬಿಜಯ ಮಾಡಿಸುವ ಕಾರ್ಯಕ್ರಮ ನಡೆಯಲಿದೆ.

ಕಲ್ಲಾಗಿರುವ ಬಿಸಿಲೇಶ್ವರಿ ದೇವಿಯ 7 ಮಂದಿ ಮಕ್ಕಳು

ಹಿರಿಸತ್ತಿಗೆಯಮ್ಮ ವೃತ್ತಾಂತ

ತಾಲ್ಲೂಕಿನ ಕೋಡಂಬಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಹಿರಿಸತ್ತಿಗೆಯಮ್ಮ ದೇವತೆಗೂ ಬಿಸಿಲೇಸ್ವರಿ ಜಾತ್ರಾ ಮಹೋತ್ಸವಕ್ಕೂ ಬಿಡಿಸಲಾಗದ ನಂಟಿದೆ. ಇದು ಅನಾದಿಕಾಲದಿಂದಲೂ ನಡೆದು ಕೊಂಡು ಬಂದಿದೆ. ಬಿಸಿಲಮ್ಮನಿಗೆ ಸಂಬಂಧದಲ್ಲಿ ಓರಗಿತ್ತಿ (ಹಿರಿಯ ಸತಿ ಅಥವಾ ತನ್ನ ಗಂಡನ ಮೊದಲ ಸತಿ) ಆಗಬೇಕಾದ ಹಿರಿಸತ್ತಿಗೆಯಮ್ಮ ದೇವರು ಕೊಂಡದ ದಿನ ಹುಣಸನಹಳ್ಳಿಗೆ ಮೆರವಣಿಗೆಯಲ್ಲಿ ಬರಲೇಬೇಕು. ಅದು ಬಂದ ನಂತರವೇ ಕೊಂಡ ಮಹೋತ್ಸವ ನೆರವೇರಲಿದೆ. ಇಲ್ಲದಿದ್ದರೆ ಕೊಂಡ ನಡೆಯುವುದೇ ಇಲ್ಲ. ಈಕೆ ನಮ್ಮ ಮನೆ ಮಗಳು ಎಂಬ ನಂಬಿಕೆ ಇದೆ ಎಂದು ಹಿರಿಸತ್ತಿಗೆಯಮ್ಮ ದೇವಿಯನ್ನು ಪೂಜಿಸುವ ನಿವೃತ್ತ ಶಿಕ್ಷಕರಾದ ಕೆ.ನಾಗಣ್ಣ ಜನಾರ್ಧನ್ ಸ್ವಾಮಿ ಕಾಂತರಾಜು ತಿಳಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.