ADVERTISEMENT

ರಾಮನಗರ | ಸ್ನಾತಕೋತ್ತರ ಕೇಂದ್ರ ನಿರ್ಮಾಣ ಶೀಘ್ರ: ಅಶ್ವತ್ಥನಾರಾಯಣ

ರಾಜ್ಯ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ: ಸಾಧನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 16:48 IST
Last Updated 27 ಜುಲೈ 2020, 16:48 IST
ರಾಜ್ಯ ಸರ್ಕಾರದ ಸಾಧನೆಯ ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು
ರಾಜ್ಯ ಸರ್ಕಾರದ ಸಾಧನೆಯ ಹೊತ್ತಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಬಿಡುಗಡೆ ಮಾಡಿದರು   

ರಾಮನಗರ: ಜಿಲ್ಲೆಯಲ್ಲಿ ₹50 ಕೋಟಿ ವೆಚ್ಚದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಕ್ಯಾಂಪಸ್ ನಿರ್ಮಾಣ ಆಗಲಿದ್ದು, ಜಿಲ್ಲೆಯ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆಎಂದು ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ ಬಣ್ಣಿಸಿದರು.

ರಾಜ್ಯ ಬಿಜೆಪಿ ಸರ್ಕಾರದ ಒಂದು ವರ್ಷ ಆಡಳಿತ ಪೂರ್ಣಗೊಳಿಸಿರುವ ಹಿನ್ನಲೆಯಲ್ಲಿ ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸಾಧನ ಸಮಾರಂಭದಲ್ಲಿ ಬೆಂಗಳೂರು ವಿ.ವಿ.ಯ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌‌ಗಳ ಕ್ಯಾಂಪಸ್‌ಗೆ ಶಂಕುಸ್ಥಾಪನೆನೆರವೇರಿಸಿ ಅವರು ಮಾತನಾಡಿದರು. ವಿವಿ ಕ್ಯಾಂಪಸ್ ನಿರ್ಮಾಣಕ್ಕೆ ಜಿಲ್ಲೆಯಲ್ಲಿ ಎರಡು ಎಕರೆ ಜಾಗವನ್ನು ಹಸ್ತಾಂತರಿಸಲಾಗಿದೆ. ಇನ್ನು 10 ಎಕರೆ ಜಾಗಕ್ಕೆ ವಿ.ವಿ.ಯು ಬೇಡಿಕೆ ಸಲ್ಲಿಸಿದೆ. ಅದನ್ನು ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾ ಕೇಂದ್ರದಲ್ಲಿ ನೂತನ ಆಸ್ಪತ್ರೆ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದ್ದು, ಅದಕ್ಕೆ ಚಾಲನೆ ನೀಡುವ ಜೊತೆಗೆ ಅಗತ್ಯ ಸೇವೆ ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ರಾಜೀವ್ ಆರೋಗ್ಯ ವಿಶ್ವವಿದ್ಯಾಲಯದ ಕ್ಯಾಂಪಸ್‌ ನಿರ್ಮಾಣಕ್ಕಿರುವ ಕಾನೂನು ತೊಡಕುಗಳನ್ನು ಶೀಘ್ರ ಬಗೆಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಲ್ತ್ ಸಿಟಿ, ಸ್ಮಾರ್ಟ್ ಸಿಟಿ, ಆಹಾರ ಸಂಸ್ಕರಣಾ ಘಟಕ, ಸಿಲ್ಕ್ ಪಾರ್ಕ್ ಸೇರಿದಂತೆ ವಿವಿಧ ಯೋಜನೆಗಳು ಜಿಲ್ಲೆಯಲ್ಲಿ ಸಾಕಾರಗೊಳ್ಳಲಿವೆಎಂದರು.

ADVERTISEMENT

ಉತ್ತಮ ಆಡಳಿತ: ಇದೇ ಸಂದರ್ಭ ಸಚಿವರು ಕಳೆದೊಂದು ವರ್ಷದಲ್ಲಿನ ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದಿದ್ದರಿಂದಾಗಿ ಉದ್ಯಮಗಳ ಸಂಖ್ಯೆ ಹೆಚ್ಚಲಿದ್ದು, ಭ್ರಷ್ಟಾಚಾರ ಮತ್ತು ಮಧ್ಯವರ್ತಿಗಳ ಹಾವಳಿ ತಪ್ಪಲಿದೆ. ರಾಜಕೀಯ ಪಿತ್ತೂರಿಗಳನ್ನು ನಡೆಸುತ್ತಿರುವ ನಮ್ಮ ಸ್ನೇಹಿತರು ಈ ಕಾಯ್ದೆ ಬಗ್ಗೆ ಅಪಪ್ರಚಾರ ಮಾಡುವುದನ್ನು ನಿಲ್ಲಸಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯೂ ರೈತರ ಪರವಾಗಿಯೇ ಇದೆ ಎಂದರು.

ಮುಖ್ಯಮಂತ್ರಿ ಯಡಿಯೂರಪ್ಪ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ.ಅತಿವೃಷ್ಠಿ, ಅನಾವೃಷ್ಠಿ, ಚುನಾವಣೆ ಹಾಗು ಕೋವಿಡ್-19 ನಂತಹ ಸವಾಲುಗಳನ್ನು ಸರ್ಕಾರ ಸಮರ್ಥವಾಗಿ ನಿರ್ವಹಿಸಿದೆ. ಸ್ಥಿರವಾದ ಆಡಳಿತದ ಮೂಲಕ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆತಿದೆ ಎಂದರು. ಆರ್ಥಿಕ ಮುಗ್ಗಟ್ಟು ಇದ್ದರೂ ರಾಜ್ಯದ 1.25 ಲಕ್ಷ ವಸತಿ ಫಲಾನುಭವಿಗಳಿಗೆ ತಲಾ ₨5 ಲಕ್ಷ. ಪರಿಹಾರ ನೀಡಲಾಗಿದೆ. ಬೆಳೆನಾಶ, ಬಡ ಕುಟುಂಬಗಳು ಸೇರಿ ಈವರೆಗು ₨6,308 ಕೋಟಿ ಅತಿವೃಷ್ಠಿ ಸಮಯದಲ್ಲಿ ನೀಡಲಾಗಿದೆ ಎಂದು ಶ್ಲಾಘಿಸಿದರು.

ಇದೇ ವೇಳೆ ನಿರಂತರ ಇ-ಸ್ವತು ಖಾತಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಗುಂಡ್ಲುಪೇಟೆ ಶಾಸಕ ಎಸ್.ನಿರಂಜನ ಕುಮಾರ್, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಅನೂಪ್ ಶೆಟ್ಟಿ, ಕೆಡಿಪಿ ಸದಸ್ಯ ಎಂ.ರುದ್ರೇಶ್ ಇದ್ದರು.

ಜಿಲ್ಲಾಸ್ಪತ್ರೆ ಕಾಮಗಾರಿ ವೀಕ್ಷಣೆ

ಜಿಲ್ಲಾ ಕೇಂದ್ರದಲ್ಲಿ ₹63 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 250 ಹಾಸಿಗೆಗಳ ಸುಸುಜ್ಜಿತ ಆಸ್ಪತ್ರೆಯ ಕಾಮಗಾರಿಯನ್ನು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಪರಿಶೀಲನೆ ನಡೆಸಿದರು.

ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಮುರಳಿ, ಡಾ. ಶ್ರೀರಾಮ ಅವರನ್ನು ಕರೆದುಕೊಂಡು ಬಂದಿದ್ದ ಅವರು, ಇಡೀ ಆಸ್ಪ್ರತ್ರೆಯನ್ನು ಸುತ್ತುಹಾಕಿದರು. 6 ತಿಂಗಳಲ್ಲಿ ಕಾಮಗಾರಿ ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಣಿಪಾಲ್ ಆಸ್ಪತ್ರೆಯ ತಜ್ಞರು ಹೊಸ ಆಸ್ಪತ್ರೆಗಳನ್ನು ಸಿದ್ಧಪಡಿಸುವುದರಲ್ಲಿ ಪರಿಣಿತಿ ಹೊಂದಿದ್ದು, ಇಂತಹ ಆಸ್ಪತ್ರೆ ನಿರ್ಮಾಣಕ್ಕೆ ಅವರ ಸೇವೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.

ಜಾಗತಿಕ ಗುಣಮಟ್ಟದ ಎಲ್ಲ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ಇರುತ್ತವೆ. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಪರಿಕರಗಳನ್ನು ಅಳವಡಿಸಲಾಗುವುದು. ಬೆಂಗಳೂರು- ಮೈಸೂರು ರಸ್ತೆಯ ಆಯಕಟ್ಟಿನಲ್ಲಿರುವ ಈ ಆಸ್ಪತ್ರೆಯನ್ನು ಅಂತರಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ರೂಪಿಸಲಾಗುವುದು. ಇದಕ್ಕೆ ಸಂಬಂಧಿಸಿ ತಜ್ಞ ವೈದ್ಯರ ಜತೆ ನಿರಂತರವಾಗಿ ಮಾತುಕತೆ ನಡೆಸಲಾಗುತ್ತದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.