ADVERTISEMENT

ನಟಿ ರನ್ಯಾ ರಾವ್‌ಗೆ ಭೂಮಿ ಕೊಟ್ಟಿದ್ದೇ ಬಿಜೆಪಿ ಸರ್ಕಾರ: ಶಾಸಕ ಬಾಲಕೃಷ್ಣ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:14 IST
Last Updated 10 ಮಾರ್ಚ್ 2025, 14:14 IST
<div class="paragraphs"><p>ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ</p></div>

ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ

   

ರಾಮನಗರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊನೆಯ ಬಜೆಟ್ ಇದು ಎನ್ನುತ್ತಿರುವ ಬಿಜೆಪಿಯವರಿಗೆ, ಮನಬಂದಂತೆ ಮಾತನಾಡುವುದೇ ತೆವಲಾಗಿದೆ. ಇದು ಕೊನೆಯ ಬಜೆಟ್‌ ಹೌದೋ, ಅಲ್ಲವೋ ಎಂಬುದನ್ನು ನಮ್ಮ ಹೈಕಮಾಂಡ್ ತೀರ್ಮಾನಿಸಲಿದೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.

ತಾಲ್ಲೂಕಿನ ಅಕ್ಕೂರು ಗ್ರಾಮದಲ್ಲಿ ಸೋಮವಾರ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲೀಗ ನಮ್ಮ ಯಜಮಾನಿಕೆ ನಡೆಯುತ್ತಿದೆ. ಮುಂದಿನ ಮೂರು ವರ್ಷವಲ್ಲದೆ, ನಂತರದ ಐದು ವರ್ಷವೂ ಯಜಮಾನಿಕೆ ಮುಂದುವರಿಯಲಿದೆ. ಆಗ ಯಜಮಾನ ಯಾರಾಗಬೇಕೆಂಬುದರ ನಿರ್ಧಾರವನ್ನು ಹೈಕಮಾಂಡ್ ನಿರ್ಧರಿಸಲಿದೆ’ ಎಂದರು.

ADVERTISEMENT

‘ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಹೇಳುವಂತೆ, ನಮ್ಮ ಇಂಡಿಯಾ ಮಿತ್ರಪಕ್ಷವಾದ ತಮಿಳುನಾಡಿನ ಡಿಎಂಕೆ ಸರ್ಕಾರದಿಂದ ನಾವ್ಯಾಕೆ ಯಾಕೆ ಒಪ್ಪಿಗೆ ಪಡೆಯಬೇಕು? ಸಚಿವರಾಗಿರುವ ಇವರು ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿದರೆ ಯೋಜನೆ ಶುರುವಾಗುವುದಿಲ್ಲವೇ?’ ಎಂದು ಮೇಕೆದಾಟು ಯೋಜನೆ ಕುರಿತ ಕುಮಾರಸ್ವಾಮಿ ಹೇಳಿಗೆ ಕಿಡಿಕಾರಿದರು.

‘ಚುನಾವಣೆ ಸಂದರ್ಭದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು ಈ ಮಾತನ್ನು ಜನರಿಗೆ ಹೇಳಿರಲಿಲ್ಲವಲ್ಲ. ನನಗೆ ಅಧಿಕಾರ ಕೊಟ್ಟರೆ 24 ಗಂಟೆಯಲ್ಲಿ ನೀರು ತರುತ್ತೇನೆ ಎಂದಿದ್ದರು. ಅಧಿಕಾರಕ್ಕೇರಿದ ಅವರು ನೀರು ತಂದಿದ್ದಾರೆಯೇ? ಮಾಜಿ ಮುಖ್ಯಮಂತ್ರಿಯೂ ಆಗಿರುವ ಅವರು ಇಂತಹ ಸಣ್ಣ ಹೇಳಿಕೆಗಳನ್ನು ಕೊಡಬಾರದು’ ಎಂದು ವ್ಯಂಗ್ಯವಾಡಿದರು.

‘ರನ್ಯಾಗೆ ಭೂಮಿ ಕೊಟ್ಟಿದ್ದೇ ಬಿಜೆಪಿ’

‘ಚಿನ್ನ ಕಳ್ಳಸಾಗಣೆ ಮಾಡುವಾಗ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ಗೆ ಕೆಐಎಡಿಬಿಯಿಂದ ಭೂಮಿ ಕೊಟ್ಟಿದ್ದೇ ಬಿಜೆಪಿ ಸರ್ಕಾರ. ನಟಿ ವಿಷಯದಲ್ಲಿ ನಮ್ಮ ಸರ್ಕಾರದ ವಿರುದ್ದ ಆರೋಪ ಮಾಡುವ ನೈತಿಕತೆ ಬಿಜೆಪಿಯವರಿಗಿಲ್ಲ. ಸಹಾಯ ಕೇಳಿಕೊಂಡು  ಬರುವುವರಲ್ಲಿ ಯಾರು ಕಳ್ಳರು, ಒಳ್ಳೆಯವರು ಎಂದು ಗೊತ್ತಾಗುವುದಿಲ್ಲ. ಸಿಕ್ಕಿಬಿದ್ದಾಗಲೇ ನಿಜ ಬಂಡವಾಳ ಗೊತ್ತಾಗುತ್ತದೆ. ರನ್ಯಾ ರಾವ್ ಪ್ರಕರಣದಲ್ಲಿ ಬಿಜೆಪಿ ಅನಗತ್ಯವಾಗಿ ರಾಜಕೀಯ ಮಾಡುತ್ತಿದೆ. ಅವರಿಗೆ ಅಭಿವೃದ್ಧಿಗಿಂತ ಕ್ಷುಲ್ಲಕ ರಾಜಕಾರಣ ಮಾಡುವುದರಲ್ಲೇ ಹೆಚ್ಚು ಆಸಕ್ತಿವು’ ಎಂದು ನಟಿ ರನ್ಯಾ ರಾವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಬಿಜೆಪಿಯವರ ಆರೋಪ ಕುರಿತ ಪ್ರಶ್ನೆಗೆ ಬಾಲಕೃಷ್ಣ ಪ್ರತಿಕ್ರಿಯಿಸಿದರು.

ಮೇಕೆದಾಟು ಯೋಜನೆಗೆ ಇಂಡಿಯಾ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ಸರ್ಕಾರದಿಂದ ಒಪ್ಪಿಗೆ ಕೊಡಿಸಿ ಎನ್ನುವ ಎಚ್.ಡಿ. ಕುಮಾರಸ್ವಾಮಿ, ಗೋವಾದಲ್ಲಿರುವ ಅವರ ಮಿತ್ರಪಕ್ಷದಿಂದ ಮಹದಾಯಿ ಯೋಜನೆಗೆ ಅನುಮತಿ ಕೊಡಿಸಲಿ
ಎಚ್.ಸಿ. ಬಾಲಕೃಷ್ಣ, ಮಾಗಡಿ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.