ADVERTISEMENT

'ಬಿಜೆಪಿ ಸಂಸದರಿಗೆ ನೈತಿಕತೆ ಇಲ್ಲ'

ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2020, 15:19 IST
Last Updated 22 ಸೆಪ್ಟೆಂಬರ್ 2020, 15:19 IST
ಸುದ್ದಿಗೋಷ್ಠಿಯಲ್ಲಿ ಆರ್. ಧ್ರುವನಾರಾಯಣ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಆರ್. ಧ್ರುವನಾರಾಯಣ ಮಾತನಾಡಿದರು   

ರಾಮನಗರ: 'ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾಗಿರುವ ರಾಜ್ಯಸಭೆ ಸದಸ್ಯೆ ನಿರ್ಮಲಾ ಸೀತಾರಾಮನ್, 25 ಬಿಜೆಪಿ ಸಂಸದರಿಂದ ಕರ್ನಾಟಕಕ್ಕೆ ಸಿಕ್ಕಿರುವ ಕೊಡುಗೆ ಶೂನ್ಯ. ಅವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ಯಾವ ನೈತಿಕತೆ ಇಲ್ಲ’ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷಆರ್. ಧ್ರುವನಾರಾಯಣ ವಾಗ್ದಾಳಿ ನಡೆಸಿದರು.

"ನೆರೆ ಹಾವಳಿ ಪರಿಹಾರ, ಜಿಎಸ್‍ಟಿ ಹಣ ಸೇರಿದಂತೆ ಅನೇಕ ವಿಚಾರಗಳಲ್ಲಿ ಕೇಂದ್ರ ಸರ್ಕಾರ ಕರ್ನಾಟಕದ ಬಗೆಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಕೇಂದ್ರದಿಂದ ರಾಜ್ಯಕ್ಕೆ ಇದುವರೆಗೂ ಬರಬೇಕಾದ ತೆರಿಗೆಯ ₨13,672 ಕೋಟಿ ಬಿಡುಗಡೆ ಮಾಡಿಲ್ಲ’ ಎಂದು ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

"ನಮ್ಮ ಜನರ ತೆರಿಗೆ ಹಣ ನಮಗೆ ವಾಪಾಸ್ ನೀಡಲು ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವರು ಹೇಳುತ್ತಾರೆ. ಕಳೆದ ವರ್ಷ ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾದ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಸೂಕ್ತ ಪರಿಹಾರ ನೀಡಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೇಳಲು ಧ್ವನಿ ಇಲ್ಲವಾ ಬಿಜೆಪಿಯ ಸಂಸದರಿಗೆ ರಾಜ್ಯದ ಮೇಲೆ ಅಭಿಮಾನವಿದ್ದರೆ, ವಿತ್ತ ಸಚಿವರು ಮತ್ತು ಪ್ರಧಾನಿಯವರ ಬಳಿ ಹೋರಾಟ ಮಾಡಿ ರಾಜ್ಯದ ಪಾಲು ತರಲಿ’ ಎಂದು ಆಗ್ರಹಿಸಿದರು.

ADVERTISEMENT

"ಕೋವಿಡ್ ಪರಿಸ್ಥಿತಿ ನಿರ್ವಹಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿಫಲವಾಗಿವೆ. ಸರ್ಕಾರ ಮಾಡಬೇಕಾದ ಕೆಲಸವನ್ನು ಕಾಂಗ್ರೆಸ್‌ ಆರೋಗ್ಯ ಹಸ್ತ ಹೆಸರಿನಲ್ಲಿ ಮಾಡುತ್ತಿದೆ. ರಾಜ್ಯದಲ್ಲಿ ಸಚಿವರ ನಡುವೆ ಸಮನ್ವಯವಿಲ್ಲ. ಮುಖ್ಯಮಂತ್ರಿಗಳಿಗೆ ಇವರ ಮೇಲೆ ನಿಯಂತ್ರಣವಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ" ಎಂದರು.

"ಕೊರೊನಾವನ್ನು ಆರಂಭದಲ್ಲಿಯೇ ತಡೆಗಟ್ಟಬಹುದಾಗಿತ್ತು. ಜನವರಿಯಲ್ಲಿಯೇ ಕೊರೊನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡರೂ ಸಹ ಮಾರ್ಚ್‍ವರೆಗೂ ವಿಮಾನ ಹಾರಾಟ ನಿಯಂತ್ರಿಸಲಿಲ್ಲ. ಆ ಮೇಲೆ ಲಾಕ್ ಡೌನ್ ಘೋಷಣೆ ಮಾಡಿದರು" ಎಂದು ವ್ಯಂಗ್ಯವಾಡಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲಾ, ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಂಗಾಧರ್ , ಮುಖಂಡರಾದ ಇಕ್ಬಾಲ್ ಹುಸೇನ್, ವಿ.ಎಚ್. ರಾಜು, ನಿಜಾಮುದ್ದೀನ್ ಷರೀಫ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.