ADVERTISEMENT

ರಾಮನಗರ ಮೇಲಿನ ಅವಲಂಬನೆ ಕಡಿತ: ರೇಷ್ಮೆ ಇಲಾಖೆ ನಿರ್ದೇಶಕಿ ರೋಹಿಣಿ ಸಿಂಧೂರಿ

ಉತ್ತರ ಕರ್ನಾಟಕದಲ್ಲಿ ಸ್ವಯಂಚಾಲಿತ ರೇಷ್ಮೆ ನೂಲುವ ಯಂತ್ರಗಳ ಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2020, 13:20 IST
Last Updated 14 ಜನವರಿ 2020, 13:20 IST
ಧಾರವಾಡದ ರಾಯಾಪುರದಲ್ಲಿರುವ ರೇಷ್ಮೆ ಇಲಾಖೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರೋಹಿಣಿ ಸಿಂಧೂರಿ ಮಾತನಾಡಿದರು. ರಜಿತ್ ರಂಜನ್ ಒಖಾಂಡಿಯಾರ್, ಡಾ. ಸುಭಾಸ ವಿ.ನಾಯ್ಕ್ ಇದ್ದಾರೆ.
ಧಾರವಾಡದ ರಾಯಾಪುರದಲ್ಲಿರುವ ರೇಷ್ಮೆ ಇಲಾಖೆಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ರೋಹಿಣಿ ಸಿಂಧೂರಿ ಮಾತನಾಡಿದರು. ರಜಿತ್ ರಂಜನ್ ಒಖಾಂಡಿಯಾರ್, ಡಾ. ಸುಭಾಸ ವಿ.ನಾಯ್ಕ್ ಇದ್ದಾರೆ.   

ಧಾರವಾಡ: ‘ಸ್ವಯಂಚಾಲಿತ ರೇಷ್ಮೆ ನೂಲುವ ಯಂತ್ರಗಳ (ಎಆರ್‌ಎಂ) ಹೆಚ್ಚು ಸ್ಥಾಪನೆಯಿಂದಾಗಿ ರಾಮನಗರ ಹಾಗೂ ಶಿಡ್ಲಘಟ್ಟದ ಮೇಲಿನ ಉತ್ತರ ಕರ್ನಾಟಕ ರೈತರ ಅವಲಂಬನೆಯನ್ನು ತಗ್ಗಿಸಲು ಚಿಂತನೆ ನಡೆದಿದೆ’ ಎಂದು ರೇಷ್ಮೆ ಇಲಾಖೆ ನಿರ್ದೇಶಕಿ ರೋಹಿಣಿ ಸಿಂಧೂರಿ ಹೇಳಿದರು.

ರೇಷ್ಮೆ ತಾಂತ್ರಿಕ ಸೇವಾ ಕೇಂದ್ರ, ಕೇಂದ್ರ ರೇಷ್ಮೆ ಮಂಡಳಿ ಹಾಗೂ ಕೇಂದ್ರ ರೇಷ್ಮೆ ತಂತ್ರಜ್ಞಾನ ಸಂಶೋಧನಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನೂಲುವವರ ಮತ್ತು ರೈತರ ಮೇಳದಲ್ಲಿ ಪಾಲ್ಗೊಂಡು ಮಂಗಳವಾರ ಅವರು ಮಾತನಾಡಿದರು.

‘ಈ ಬಾರಿ 15 ಎಆರ್‌ಎಂಗಳನ್ನು ನೀಡುಲಾಗುತ್ತಿದ್ದು, ಇದರಲ್ಲಿ ಉತ್ತರ ಕರ್ನಾಟಕಕ್ಕೆ ಐದು ನೀಡಲಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಫಲವತ್ತಾದ ಜಮೀನುಗಳಲ್ಲಿ ಬೆಳೆದ ರೇಷ್ಮೆ ಗುಣಮಟ್ಟ ಉತ್ತಮವಾಗಿದೆ. ಹೀಗಾಗಿ ಗುಣಮಟ್ಟದ ರೇಷ್ಮೆ ಗೂಡುಗಳು ಇಲ್ಲ ಲಭ್ಯವಿದೆ. ಇದಕ್ಕೆ ಇಲ್ಲೇ ಮಾರುಕಟ್ಟೆ ಸೃಷ್ಟಿಸುವುದು ಇಲಾಖೆಯ ಚಿಂತನೆ’ ಎಂದರು.

ADVERTISEMENT

‘ರೇಷ್ಮೆ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ಪ್ರತಿ ಜಿಲ್ಲೆಗೂ ಒಂದೊಂದು ರೈತರು ಹಾಗೂ ಉತ್ಪಾದಕರ ಸಂಘವನ್ನು ಸ್ಥಾಪಿಸುವ ಯೋಜನೆ ಇದೆ. ಆ ಮೂಲಕ ಆ ಭಾಗದ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಒದಗಿಸುವ ಯೋಜನೆಯೂ ಇಲಾಖೆಯಲ್ಲಿದೆ’ ಎಂದರು.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಕಾರ್ಯದರ್ಶಿ ರಜಿತ್ ರಂಜನ್ ಒಖಾಂಡಿಯಾರ್ ಮಾತನಾಡಿ, ‘ಚೀನಾದಿಂದ 10ಸಾವಿರ ಟನ್ ರೇಷ್ಮೆ ಆಮದು ಆಗುತ್ತಿತ್ತು. ಅದು ಈಗ 2 ಸಾವಿರ ಟನ್‌ಗೆ ತಗ್ಗಿದೆ. ಮುಂದಿನ ಎರಡು ವರ್ಷಗಳಲ್ಲಿ ನಮ್ಮ ದೇಶಕ್ಕೆ ಬೇಕಾದ ರೇಷ್ಮೆಯನ್ನು ನಾವೇ ಉತ್ಪಾದಿಸುವಷ್ಟು ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಗುರಿ ಇದೆ. ಹೀಗಾಗಿ ಮುಂದಿನ ಒಂದು ವರ್ಷದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ 14 ಎಆರ್‌ಎಂಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ’ ಎಂದರು.

ಸರ್ಕಾರದ ವಿವಿಧ ಯೋಜನೆಗಳಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೇಷ್ಮೆ ಹೊಲಗಳಿಗೆ ಪರಿಹಾರ ನೀಡುತ್ತಿಲ್ಲ, ಪ್ರಕೃತಿ ವಿಕೋಪದ ಪರಿಹಾರದಲ್ಲಿ ರೇಷ್ಮೆ ಬೆಳೆಯನ್ನು ಪರಿಗಣಿಸಿಯೇ ಇಲ್ಲ, ರೇಷ್ಮೆ ಗೂಡಿನ ಮನೆ ನಿರ್ಮಾಣ ಮಾಡಿದ್ದರೂ ಅದಕ್ಕೆ ಸಬ್ಸಿಡಿ ಹಣ ಬಿಡುಗಡೆಯಾಗಿಲ್ಲ ಎಂದು ರೈತರು ತಮ್ಮ ಅಹವಾಲು ಸಲ್ಲಿಸಿದರು. ಅದರಂತೆಯೇ ರೀಲರ್‌ಗಳು ರೈತರು ನೀಡುವ ಗೂಡುಗಳ ಗುಣಮಟ್ಟದಲ್ಲಿ ಸ್ಥಿರತೆ ಇಲ್ಲ, ಜತೆಗೆ ಕೈಗಾರಿಕೆಗೆ ಪ್ರೋತ್ಸಾಹಧನವನ್ನು ಸರ್ಕಾರ ನೀಡಬೇಕು ಎಂದು ಬೇಡಿಕೆ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರೋಹಿಣಿ ಸಿಂಧೂರಿ, ‘ರೇಷ್ಮೆ ಮನೆಗೆ ಸಬ್ಸಿಡಿ ಬೇಡಿಕೆ ರಾಜ್ಯದಲ್ಲಿ ಒಟ್ಟು ₹180ಕೋಟಿ ಇದೆ. ಆದರೆ ಸರ್ಕಾರ ಇದಕ್ಕಾಗಿ ನೀಡಿರುವುದು ₹33ಕೋಟಿ ಮಾತ್ರ. ಭೂಸ್ವಾಧೀನ ಪ್ರಕ್ರಿಯೆ, ಪರಿಹಾರ ಹಾಗೂ ಇನ್ನಿತರ ವಿಷಯಗಳ ಕುರಿತು ಸರ್ಕಾರ ಮಟ್ಟದಲ್ಲಿ ಚರ್ಚಿಸಲಾಗುವುದು’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.