ADVERTISEMENT

ಬಿಎಸ್‌ಎನ್‌ಎಲ್‌ ಸೇವೆ ಸ್ಥಗಿತ: ಗ್ರಾಹಕರ ಪರದಾಟ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮೂರು ದಿನದಿಂದ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2019, 11:39 IST
Last Updated 20 ಫೆಬ್ರುವರಿ 2019, 11:39 IST
ರಾಮನಗರದ ಬಿಎಸ್‌ಎನ್‌ಎಲ್‌ ಕಚೇರಿಯ ಗೇಟಿಗೆ ಬುಧವಾರ ಬೀಗ ಹಾಕಲಾಗಿತ್ತು
ರಾಮನಗರದ ಬಿಎಸ್‌ಎನ್‌ಎಲ್‌ ಕಚೇರಿಯ ಗೇಟಿಗೆ ಬುಧವಾರ ಬೀಗ ಹಾಕಲಾಗಿತ್ತು   

ರಾಮನಗರ: ಕಳೆದ ಮೂರು ದಿನದಿಂದ ಬಿಎಸ್‌ಎನ್‌ಎಲ್‌ ನೌಕರರು ಮುಷ್ಕರ ನಡೆಸುತ್ತಿದ್ದು, ಸೇವೆಗಳ ವ್ಯತ್ಯಯದಿಂದಾಗಿ ಗ್ರಾಹಕರು ಪರದಾಡುವಂತಾಗಿದೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಎಸ್‌ಎನ್‌ಎಲ್‌ ನೌಕರರು ಮುಷ್ಕರ ನಡೆಸಿದ್ದಾರೆ. ಇದರಿಂದಾಗಿ ಜಿಲ್ಲೆದಾದ್ಯಂತ ಕಂಪನಿಯ ಸ್ಥಿರ ದೂರವಾಣಿ, ಅಂತರ್ಜಾಲ ಸೇವೆಗಳು ದೊರಕುತ್ತಿಲ್ಲ. ಬುಧವಾರ ಮೊಬೈಲ್‌ ಟವರ್‌ಗಳು ಸಹ ಬಂದ್‌ ಆದ ಕಾರಣ ಮೊಬೈಲ್‌ ಸೇವೆಯೂ ಸ್ಥಗಿತಗೊಂಡು ಜನರು ಸಂಪರ್ಕಕ್ಕೆ ಪರದಾಡಿದರು.

ಬಹುತೇಕ ಸರ್ಕಾರಿ ಕಚೇರಿಗಳು ಬಿಎಸ್‌ಎನ್ಎಲ್‌ ಸೇವೆ ಬಳಸುತ್ತಿದ್ದು, ದೂರವಾಣಿ ಮತ್ತು ಅಂತರ್ಜಾಲ ಸಮಸ್ಯೆಯಿಂದಾಗಿ ಸರ್ಕಾರಿ ಕೆಲಸ–ಕಾರ್ಯಗಳಿಗೆ ಅಡ್ಡಿಯಾಯಿತು. ವಿವಿಧ ಪ್ರಮಾಣಪತ್ರಗಳ ವಿತರಣೆ, ಆನ್‌ಲೈನ್‌ ನೋಂದಣಿ ಮೊದಲಾದ ಚಟುವಟಿಕೆಗಳಿಗೂ ಹಿನ್ನಡೆ ಉಂಟಾಯಿತು. ಹಲವೆಡೆ ಸ್ಥಿರ ದೂರವಾಣಿಗಳು ಕೈಕೊಟ್ಟಿದ್ದು, ಅವುಗಳ ದೂರು ಸ್ವೀಕರಿಸಿ ದುರಸ್ತಿ ಮಾಡಲು ಸಿಬ್ಬಂದಿ ಇರಲಿಲ್ಲ. ಕನಕಪುರ–ಮಾಗಡಿ ಲೈನ್‌ ಸಹ ತುಂಡಾಗಿದ್ದು, ಅಲ್ಲಿಯೂ ಸೇವೆಯಲ್ಲಿ ವ್ಯತ್ಯಯವಾಯಿತು.

ADVERTISEMENT

ರಾಮನಗರ ಒಂದರಲ್ಲಿಯೇ 1500 ಸ್ಥಿರ ದೂರವಾಣಿ ಸಂಪರ್ಕ ಹಾಗೂ 4 ಮೊಬೈಲ್‌ ಟವರ್‌ಗಳು ಇದ್ದು, ಇವುಗಳ ಸೇವೆಯಲ್ಲಿ ಅಡಚಣೆ ಆಯಿತು. ಅಧಿಕಾರಿಗಳ ಮೊಬೈಲ್ ಸಹ ನಾಟ್‌ ರೀಚಬಲ್‌ ಆಗಿತ್ತು.

ಏತಕ್ಕೆ ಮುಷ್ಕರ: ಕೇಂದ್ರದ ನೌಕರರಿಗೆ ಏಳನೇ ವೇತನ ಆಯೋಗದ ಶಿಫಾರಸು ಜಾರಿ,ಬಿಎಸ್‌ಎನ್‌ಎಲ್‌ ಕರ್ನಾಟಕ ವೃತ್ತಕ್ಕೆ 4ಜಿ ತರಂಗಾತರ ಹಂಚಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೌಕರರು ಮುಷ್ಕರ ಕೈಗೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ಕಂಪನಿಯನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಂದಂತಿ ಹಬ್ಬಿದ್ದು ಅದರ ವಿರುದ್ಧವೂ ನೌಕರರು ಪ್ರತಿಭಟನೆ ಕೈಗೊಂಡಿದ್ದಾರೆ.

‘ಕೇಂದ್ರ ಒಕ್ಕೂಟದ ಸೂಚನೆಯಂತೆ ಮುಷ್ಕರ ನಡೆದಿದ್ದು, ಎಲ್ಲ ಕಾಯಂ ನೌಕರರೂ ಪಾಲ್ಗೊಂಡಿದ್ದಾರೆ. ಬುಧವಾರದ ಸಂಜೆಯ ಮಾತುಕತೆಯು ಫಲಪ್ರದವಾದಲ್ಲಿ ಗುರುವಾರ ಎಂದಿನಂತೆ ಸಾರ್ವಜನಿಕರಿಗೆ ಸೇವೆ ಲಭ್ಯವಾಗಲಿದೆ’ ಎಂದು ಬಿಎಸ್‌ಎನ್‌ಎಲ್‌ ನೌಕರರ ಜಿಲ್ಲಾ ಯೂನಿಯನ್‌ನ ಕಾರ್ಯದರ್ಶಿ ನಾಗಭೂಷಣ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.