ADVERTISEMENT

ರಾಮನಗರ ಉಪಚುನಾವಣೆ: ಕಡೆಯ ದಿನ 8 ನಾಮಪತ್ರ ಸಲ್ಲಿಕೆ

ಒಟ್ಟು 10 ಅಭ್ಯರ್ಥಿಗಳಿಂದ ಉಮೇದುವಾರಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 15:19 IST
Last Updated 16 ಅಕ್ಟೋಬರ್ 2018, 15:19 IST
ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಂ. ಮಾದೇಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು
ಪಕ್ಷೇತರ ಅಭ್ಯರ್ಥಿಯಾಗಿ ಡಿ.ಎಂ. ಮಾದೇಗೌಡ ಮಂಗಳವಾರ ಉಮೇದುವಾರಿಕೆ ಸಲ್ಲಿಸಿದರು   

ರಾಮನಗರ: ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಮಂಗಳವಾರ ಅಂತ್ಯಗೊಂಡಿತು. ಕಡೆಯ ದಿನದಂದು 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್ ಮಂಗಳವಾರ ಮತ್ತೊಂದು ನಾಮಪತ್ರ ಸಲ್ಲಿಸಿದರು. ಪೂರ್ವಾಂಚಲ ಮಹಾಪಂಚಾಯತ್‌ ಪಾರ್ಟಿಯ ಅಭ್ಯರ್ಥಿಯಾಗಿ ಎಚ್‌.ಡಿ. ರೇವಣ್ಣ, ಪಕ್ಷೇತರ ಅಭ್ಯರ್ಥಿಗಳಾಗಿ ಬಿ.ಪಿ. ಸುರೇಂದ್ರ, ಆರ್. ವರದರಾಜೇಗೌಡ , ಮುನಿಯಾ ಭೋವಿ, ಕುಮಾರನಾಯ್ಕ, ಡಿ.ಎಂ. ಮಾದೇಗೌಡ , ತುಳಸಪ್ಪ ದಾಸರ ಕೂಡ ಉಮೇದುವಾರಿಕೆ ಸಲ್ಲಿಸಿದರು.

ಇದರೊಟ್ಟಿಗೆ ಒಟ್ಟು 10 ಅಭ್ಯರ್ಥಿಗಳು ಚುನಾವಣೆಗೆ ನಾಮಪತ್ರ ಸಲ್ಲಿಸಿದಂತೆ ಆಗಿದೆ. ಕಡೆಯ ದಿನದಂದು ಪಕ್ಷೇತರರು ಉಮೇದುವಾರಿಕೆ ಸಲ್ಲಿಸಲು ಉತ್ಸಾಹ ತೋರಿದರು. ಅದರಲ್ಲೂ ಕಡೆಯ ಒಂದೆರಡು ಗಂಟೆಯಲ್ಲಿ ಚುನಾವಣಾ ಕಚೇರಿಯತ್ತ ಹೆಜ್ಜೆ ಹಾಕಿದರು.

ADVERTISEMENT

ಬುಧವಾರ ನಾಮಪತ್ರಗಳ ಪರಿಶೀಲನೆಯು ನಡೆಯಲಿದೆ. ಉಮೇದುವಾರಿಕೆ ವಾಪಸ್‌ಗೆ ಇದೇ 20 ಕಡೆಯ ದಿನವಾಗಿದೆ.

ವಾಟಾಳ್‌ ಸ್ಪರ್ಧೆ ಇಲ್ಲ
ಉಪ ಚುನಾವಣೆಯಲ್ಲಿ ಕನ್ನಡಪರ ಸಂಘಟನೆಗಳ ಪರವಾಗಿ ವಾಟಾಳ್ ನಾಗರಾಜು ನಾಮಪತ್ರ ಸಲ್ಲಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಅಂತಹ ಯಾವುದೇ ಸನ್ನಿವೇಶ ಸೃಷ್ಟಿಯಾಗಲಿಲ್ಲ.

ಈಚೆಗೆ ಕೆಲವು ಸಂಘಟನೆಗಳ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿ, ಮಂಗಳವಾರ ವಾಟಾಳ್‌ ನಾಮಪತ್ರ ಸಲ್ಲಿಸುವುದಾಗಿ ಹೇಳಿಕೆ ನೀಡಿದ್ದರು. ಆದರೆ ಸ್ವತಃ ವಾಟಾಳ್‌ ಈ ಬಗ್ಗೆ ಎಲ್ಲಿಯೂ ಹೇಳಿಕೆ ನೀಡಿರಲಿಲ್ಲ.

ಅನಿತಾ ಎದುರು ರೇವಣ್ಣ ಸ್ಪರ್ಧೆ!
ಇಲ್ಲಿನ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅನಿತಾಗೆ ಎದುರಾಗಿ ಎಚ್‌.ಡಿ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ!

ಆದರೆ ಇವರು ಕುಮಾರಸ್ವಾಮಿ ಸಹೋದರ, ಸಚಿವ ರೇವಣ್ಣ ಅಲ್ಲ. ಚಿಕ್ಕಮಗಳೂರು ತಾಲ್ಲೂಕಿನ ಕೆಂಪನಹಳ್ಳಿ ನಿವಾಸಿ ದೊಡ್ಡೇಗೌಡರ ಮಗ ರೇವಣ್ಣ.ಪೂರ್ವಾಂಚಲ ಮಹಾಪಂಚಾಯತ್‌ ಪಾರ್ಟಿಯ ಅಭ್ಯರ್ಥಿಯಾಗಿ ಅವರು ಉಮೇದುವಾರಿಕೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.