ADVERTISEMENT

ಮತದಾರರ ಜಾಗೃತಿಗೆ ವಿವಿಧ ಕಾರ್ಯಕ್ರಮ

ಉಪಚುನಾವಣೆ: ಜಿ.ಪಂ. ಸಿಇಒ ನೇತೃತ್ವದಲ್ಲಿ ಸ್ವೀಪ್‌ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2018, 14:32 IST
Last Updated 22 ಅಕ್ಟೋಬರ್ 2018, 14:32 IST
ಸಭೆಯಲ್ಲಿ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಮಾತನಾಡಿದರು. ಜಿಲ್ಲಾ ಉಪಕಾರ್ಯದರ್ಶಿ ಉಮೇಶ್‌ ಇದ್ದರು
ಸಭೆಯಲ್ಲಿ ಜಿ.ಪಂ. ಸಿಇಒ ಮುಲ್ಲೈ ಮುಹಿಲನ್‌ ಮಾತನಾಡಿದರು. ಜಿಲ್ಲಾ ಉಪಕಾರ್ಯದರ್ಶಿ ಉಮೇಶ್‌ ಇದ್ದರು   

ರಾಮನಗರ: ‘ಈ ಬಾರಿಯ ಉಪ ಚುನಾವಣೆಯಲ್ಲೂ ದಾಖಲೆ ಸಂಖ್ಯೆಯಲ್ಲಿ ಮತದಾನವಾಗಲು ಸ್ವೀಪ್ ಸಮಿತಿ ಅಡಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಹಮ್ಮಿಕೊಳ್ಳಬೇಕು’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಪಿ. ಮುಲ್ಲೈಮುಹಿಲನ್ ಹೇಳಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವೀಪ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಕಳೆದ ಚುನಾವಣೆಯಲ್ಲಿ ಅತಿ ಕಡಿಮೆ ಮತದಾನವಾದ ಮತಗಟ್ಟೆಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ಪ್ರದೇಶಗಳಲ್ಲಿ ವಿವಿಧ ಬಗೆಗಳ ಜಾಥಾ, ಪ್ರಮಾಣ ವಚನ ಸ್ವೀಕಾರ, ವಿವಿಧ ಸ್ಪರ್ಧೆಗಳು, ಆಟೋಟಗಳು, ಬೈಕ್‌ ರ್‍ಯಾಲಿ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಯಾವುದೇ ಆಮಿಷಕ್ಕೆ ಒಳಗಾಗದೇ ನೈತಿಕವಾಗಿ ಮತಚಲಾಯಿಸುವ ಬಗ್ಗೆ ಜಾಗೃತಿ ಮೂಡಿಸಬೇಕು. ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟಗಳಲ್ಲಿ ಎಲ್ಲಾ ಇಲಾಖೆಗಳು ಮತದಾನ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.

ADVERTISEMENT

ಎಂಜಿನಿಯರಿಂಗ್, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅರಿವು ಮೂಡಿಸಬೇಕು. ಬಾಪೂಜಿ ಸೇವಾಕೇಂದ್ರ ಹಾಗೂ ಜನಸ್ನೇಹಿ ಕೇಂದ್ರಗಳಲ್ಲಿ ಈ ಬಗ್ಗೆ ಅರಿವು ಮೂಡಿಸುವ ಫಲಕಗಳನ್ನು ಪ್ರದರ್ಶಿಸಬೇಕು ಎಂದು ಸೂಚಿಸಿದರು.

ಆರೋಗ್ಯ ಇಲಾಖೆ ಹಾಗೂ ರಾಮನಗರ ನಗರಸಭೆ ಸೇರಿದಂತೆ ಇತರೆ ಇಲಾಖೆಗಳು ತಾವು ನೀಡುವ ರಶೀದಿಗಳಲ್ಲಿ ಮತದಾನ ಮಹತ್ವವನ್ನು ಪ್ರೇರೇಪಿಸುವ ಸಾಲುಗಳನ್ನು ಮುದ್ರಿಸಿ ನೀಡಬೇಕು. ನಗರಸಭೆ ಹಾಗೂ ಕೆ.ಎಸ್.ಆರ್.ಟಿ.ಸಿ ವತಿಯಿಂದ ಧ್ವನಿವರ್ಧಕಗಳ ಮೂಲಕ ಪ್ರಚಾರ ಕೈಗೊಳ್ಳಬೇಕು. ಕೈಗಾರಿಕಾ ಇಲಾಖೆ ವತಿಯಿಂದ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಗೆ ಒಳಪಡುವ ಕೈಗಾರಿಕೆಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದರು.

ಪಿಂಕ್ ಮತಗಟ್ಟೆಗಳು ಹಾಗೂ ಅಂಗವಿಕಲ ಸಹಕಾರಿ ಮತಗಟ್ಟೆಗಳ ರಚನೆ ಉತ್ತಮವಾಗಿರಬೇಕು. ಅಂಗವಿಕಲರು ಮತದಾನ ಮಾಡುವ ಮತಗಟ್ಟೆಗಳಲ್ಲಿ ರ್‍ಯಾಂಪ್‌ ಅಳವಡಿಸುವುದು ಹಾಗೂ ಮತಗಟ್ಟೆಗಳಿಗೆ ತೆರಳಿ ಮತದಾನ ಮಾಡಲು ಅಗತ್ಯವಿರುವ ವಾಹನಗಳ ವ್ಯವಸ್ಥೆ ಮಾಡಬೇಕು ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಉಮೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.