ADVERTISEMENT

ಹೆಪಟೈಟಿಸ್‌ ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 16:35 IST
Last Updated 26 ಜೂನ್ 2019, 16:35 IST

ಮಾಗಡಿ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿತ್ಯ ಡಯಾಲಿಸಿಸ್‌ಗೆ ಬರುವ ರೋಗಿಗಳಲ್ಲಿ ಐದು ಜನರು ಸಿಬ್ಬಂದಿಗಳ ನಿರ್ಲಕ್ಷ್ಯದಿಂದಎಚ್‌ಸಿವಿ (ಹೆಪಟೈಟಿಸ್‌) ರೋಗಾಣು ಪೀಡಿತರಾಗಿದ್ದಾರೆ. ಡಯಾಲಿಸಿಸ್‌ ಕೇಂದ್ರದಲ್ಲಿ ಸ್ವಚ್ಛತೆ ಇಲ್ಲ. ಎಚ್‌ಸಿವಿ ರೋಗ ಹರಡುವುದನ್ನು ತಡೆಗಟ್ಟಲು ಮುಂಜಾಗರೂಕತೆ ಕೈಗೊಂಡಿಲ್ಲ ಎಂದು ಡಯಾಲಿಸಿಸ್‌ಗೆ ಒಳಪಡುತ್ತಿರುವ ರೋಗಿಗಳು ಆರೋಪಿಸಿದ್ದಾರೆ.

‘ಎಚ್‌ಸಿವಿ ರೋಗಕ್ಕೆ ತುತ್ತಾಗಿರುವ ರೋಗಿಗಳಿಗೆ ಪ್ರತ್ಯೇಕ ಡಯಾಲಿಸಿಸ್‌ ಯಂತ್ರ ಬಳಸಬೇಕು. ಆದರೆ ಸಿಬ್ಬಂದಿ ಎಲ್ಲರಿಗೂ ಒಂದೇ ಯಂತ್ರ ಬಳಸುತ್ತಿರುವುದರಿಂದ ಹೆಪಟೈಟಿಸ್‌ ಇತರರಿಗೂ ಹರಡುವ ಭೀತಿ ಎದುರಾಗಿದೆ. ಆಸ್ಪತ್ರೆಯಲ್ಲಿ ಎರಡು ಡಯಾಲಿಸಿಸ್‌ ಯಂತ್ರಗಳಿವೆ. ಒಂದು ಮಾತ್ರ ಬಳಕೆಯಾಗುತ್ತಿದೆ. ಬಡವರು ತುಮಕೂರು, ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ಹೋಗಿ ಡಯಾಲಿಸಿಸ್‌ ಮಾಡಿಸಲು ದುಬಾರಿ ಹಣ ಖರ್ಚಾಗುತ್ತಿದೆ. ಹೆಪಟೈಟಿಸ್‌ ಹರಡದಂತೆ ಎಚ್ಚರ ವಹಿಸಲು ಮತ್ತೊಂದು ಯಂತ್ರವನ್ನೂ ಬಳಸಬೇಕು’ ಎಂದು ಡಯಾಲಿಸಿಸ್‌ ರೋಗಿಯ ಸಂಬಂಧಿ ಎನ್‌.ಎನ್‌. ಮೂರ್ತಿ ಮನವಿ ಮಾಡಿದ್ದಾರೆ.

‘ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ರೋಗಿಗಳಿಗೆ ಹೆಚ್ಚಿನ ನಿಗಾವಹಿಸುವಂತೆ ಸಿಬ್ಬಂದಿಗೆ ಆದೇಶಿಸಲಾಗಿದೆ. ಹೆಪಟೈಟಿಸ್‌ ಹರಡದಂತೆ ಮುನ್ನೆಚ್ಚರಿಕೆ ವಹಿಸಿ, ನಿತ್ಯ ಪರಿಶೀಲನೆ ನಡೆಸಲಾಗುವುದು’ ಎಂದು ಆಡಳಿತ ವೈದ್ಯಾಧಿಕಾರಿ ಡಾ.ರಾಜೇಶ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.