ಚನ್ನಪಟ್ಟಣ: ಅಪರಾಧ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ತಡೆಯುವ ನಿಟ್ಟಿನಲ್ಲಿ ನಗರಸಭೆ, ಪೊಲೀಸ್ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಗರದ ನಾಲ್ಕು ಕಡೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳು ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಬೀದಿಗಳಲ್ಲಿರುವ ದುಬಾರಿ ಕ್ಯಾಮೆರಾಗಳನ್ನು ಅಳವಡಿಸಿದ್ದರೂ ಉಪಯೋಗಕ್ಕೆ ಬಾರದಂತಾಗಿವೆ.
2016ರ ಆಗಸ್ಟ್‌ನಲ್ಲಿ ನಗರದ ಸಾತನೂರು ಸರ್ಕಲ್, ಪುರ ಪೊಲೀಸ್ ಠಾಣೆ ವೃತ್ತ, ಹೊಸ ನ್ಯಾಯಾಲಯ ಹಾಗೂ ಶೇರು ಹೋಟೆಲ್ ವೃತ್ತದ ಬಳಿಯ ಬೆಂಗಳೂರು– ಮೈಸೂರು ರಸ್ತೆಗೆ ಹೊಂದಿಕೊಂಡಂತೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಅದಕ್ಕಾಗಿ ಸುಮಾರು ₹10 ಲಕ್ಷ ವೆಚ್ಚವಾಗಿತ್ತು.
ರಸ್ತೆಯ ನಾಲ್ಕು ಮೂಲೆಗಳಲ್ಲಿನ ಆಗುಹೋಗುಗಳು ಕ್ಯಾಮೆರಾದಲ್ಲಿ ಸೆರೆಯಾಗುವ ಸಾಮರ್ಥ್ಯವುಳ್ಳ ಈ ಅತ್ಯಾಧುನಿಕ ಕ್ಯಾಮೆರಾಗಳು, ಆರೇಳು ವರ್ಷವಷ್ಟೇ ಉತ್ತಮವಾಗಿ ಕಾರ್ಯನಿರ್ವಹಿಸಿದ್ದವು. ನಂತರ, ಸ್ಥಳೀಯ ಆಡಳಿತವು ಕ್ಯಾಮೆರಾ ನಿರ್ವಹಣೆಯತ್ತ ದೃಷ್ಟಿ ಹರಿಸಲಿಲ್ಲ. ಇದರಿಂದಾಗಿ, ನಗರದ ಕಣ್ಣುಗಳಾಗಿದ್ದು ಕ್ಯಾಮೆರಾಗಳು ರಿಪೇರಿಗೆ ಬಂದು ಹಾಳಾಗಿವೆ.
ಉಲ್ಲಂಘನೆ ತಡೆಗೆ ಸಹಕಾರಿ: ‘ನಗರದಲ್ಲಿ ನಡೆಯುವ ಅಪರಾಧ ಪ್ರಕರಣಗಳು ಹಾಗೂ ಹೆದ್ದಾರಿಯಲ್ಲಿ ಸಾಗುವ ವಾಹನಗಳ ಸಂಚಾರ ನಿಯಮ ಉಲ್ಲಂಘನೆಗಳನ್ನು ತಡೆಯುವಲ್ಲಿ ಕ್ಯಾಮೆರಾಗಳು ನೆರವಾಗುತ್ತಿದ್ದವು. ಇದರಿಂದಾಗಿ ನಿಯಮ ಉಲ್ಲಂಘನೆ ಸೇರಿದಂತೆ ಹೆದ್ದಾರಿಯಲ್ಲಿ ಅಪರಾಧ ಚಟುವಟಿಕೆಗಳು ತಗ್ಗಿದ್ದವು’ ಎಂದು ಹೆಸರು ಹೇಳಲಿಚ್ಛಿಸದ ಸ್ಥಳೀಯ ನಿವಾಸಿ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕ್ಯಾಮೆರಾಗಳಿಂದಾಗಿ ನಗರದ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಸೇರಿದಂತೆ ಸೇರಿದಂತೆ ಕೆಲ ಪ್ರಕರಣಗಳನ್ನು ಪೊಲೀಸರು ಸುಲಭವಾಗಿ ಬೇಧಿಸಿದ್ದರು. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ನಡೆಯುತ್ತಿದ್ದ ಅಪಘಾತಗಳಲ್ಲಿ ವಾಹನಗಳ ಪತ್ತೆಗೂ ಕ್ಯಾಮೆರಾ ನೆರವಾಗುತ್ತಿದ್ದವು. ಹಾಗಾಗಿ, ಸ್ಥಳೀಯ ಆಡಳಿತದ ಕ್ಯಾಮೆರಾ ಅಳವಡಿಕೆ ಕ್ರಮವೂ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿತ್ತು’ ಎಂದು ಹೇಳಿದರು.
ಪುಂಡರ ಮೇಲೂ ನಿಗಾ: ‘ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದ ಕಾರಣಕ್ಕೆ ನಗರದಲ್ಲಿ ಪುಂಡರ ಮೇಲೂ ನಿಗಾ ವಹಿಸುವುದು ಸುಲಭವಾಗುತ್ತಿತ್ತು. ಸರಗಳ್ಳತನ, ವ್ಹೀಲಿಂಗ್, ಹೆಣ್ಣು ಮಕ್ಕಳನ್ನು ಚುಡಾಯಿಸುವವರು, ಪುಂಡತನ, ರಸ್ತೆಯಲ್ಲಿ ರೌಡಿಸಂನಂತರ ಚಟುವಟಿಕೆಗಳು ಕ್ಯಾಮೆರಾದಲ್ಲಿ ದಾಖಲಾಗುತ್ತಿದ್ದವು. ಇದರಿಂದಾಗಿ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚುವುದು ಸುಲಭವಾಗಿತ್ತು’ ಎಂದು ಹೆಸರು ಹೇಳಲಿಚ್ಛಿಸದ ಮತ್ತೊಬ್ಬ ಸ್ಥಳೀಯರು ಅಭಿಪ್ರಾಯಪಟ್ಟರು.
ರಿಪೇರಿಗೆ ಮನವಿ: ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಹಾಳಾಗಿದ್ದು, ಅವುಗಳನ್ನು ರಿಪೇರಿ ಮಾಡಿಸುವಂತೆ ಪೊಲೀಸ್ ಇಲಾಖೆಯು ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ಅವರಿಗೆ ಇತ್ತೀಚೆಗೆ ಮನವಿ ಮಾಡಿತ್ತು. ಏಪ್ರಿಲ್ ತಿಂಗಳಿನಲ್ಲಿ ನಗರಸಭೆಗೆ ಬಂದಿರುವ ಅನುದಾನದ ಕ್ರಿಯಾಯೋಜನೆ ರೂಪಿಸಲು ಕರೆದಿದ್ದ ನಗರಸಭೆಯ ವಿಶೇಷ ಸಭೆಯಲ್ಲಿ ಈ ವಿಷಯವನ್ನು ನಗರಸಭೆ ಅಧ್ಯಕ್ಷರೇ ಪ್ರಸ್ತಾಪಿಸಿದ್ದರು. ಆದರೆ, ಕ್ಯಾಮೆರಾಗಳ ರಿಪೇರಿ ಹಾಗೂ ನಿರ್ವಹಣೆಯನ್ನು ಪೊಲೀಸ್ ಇಲಾಖೆಯೆ ಮಾಡಲಿ ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಪಟ್ಟಣದ ನಾಲ್ಕೂ ಕಡೆ ಅಳವಡಿಸಿದ್ದ ಕ್ಯಾಮೆರಾಗಳು ಹಾಳಾಗಿ ಸುಮಾರು ಎರಡು ವರ್ಷಗಳು ಕಳೆದಿದ್ದರೂ, ಸಂಬಂಧಪಟ್ಟವರು ಇವುಗಳ ರಿಪೇರಿಗೆ ಕ್ರಮ ಕೈಗೊಂಡಿಲ್ಲ. ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಮನೆಗಳ್ಳತನ, ದರೋಡೆ ಪ್ರಕರಣಗಳು ಆಗಾಗ ವರದಿಯಾಗುತ್ತಿವೆ. ಚಿನ್ನಾಭರಣ, ನಗದು ಕದ್ದು ಪರಾರಿಯಾಗುವ, ಮಹಿಳೆಯರ ಮಾಂಗಲ್ಯ ಸರ ಎಗರಿಸಿ ಪರಾರಿಯಾಗುವ ಪ್ರಕರಣಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಖಾಸಗಿಯವರ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಆಶ್ರಯಿಸುವ ಬದಲು, ಕೆಟ್ಟಿರುವ ಕ್ಯಾಮೆರಾಗಳ ರಿಪೇರಿಗೆ ಕ್ರಮ ಕೈಗೊಳ್ಳುವುದು ಒಳಿತು ಎಂಬುದು ಸ್ಥಳೀಯರ ಒತ್ತಾಯ.
ಪಟ್ಟಣದಲ್ಲಿ ಕಾರ್ಯನಿರ್ವಹಿಸದ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸಿ ಕೊಡುವಂತೆ ನಗರಸಭೆಗೆ ಮನವಿ ಮಾಡಿಕೊಂಡಿದ್ದೇವೆ. ರಿಪೇರಿ ಮಾಡಿಸಿದರೆ ಆಗುವ ಉಪಯೋಗಗಳ ಬಗ್ಗೆಯೂ ನಗರಸಭೆಗೆ ವಿವರಿಸಿದ್ದೇವೆ. ಅವರಿಂದ ಈ ಬಗ್ಗೆ ಇನ್ನೂ ಉತ್ತರ ಬಂದಿಲ್ಲರವಿಕಿರಣ್ ಇನ್‌ಸ್ಪೆಕ್ಟರ್ ಪುರ ಪೊಲೀಸ್ ಠಾಣೆ
ಪಟ್ಟಣಕ್ಕೆ ಕ್ಯಾಮೆರಾ ನಿಗಾ ಅತ್ಯಗತ್ಯ
‘ಪಟ್ಟಣದ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಸಂಚಾರ ನಿಯಮ ಉಲ್ಲಂಘನೆ ತಡೆಯಲು ಸಿಸಿಟಿವಿ ಕ್ಯಾಮೆರಾಗಳು ಅವಶ್ಯಕವಾಗಿ ಬೇಕಾಗಿದೆ. ನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಯಾಮೆರಾಗಳು ಹಾಳಾಗಿ ಹಲವು ದಿನ ಕಳೆದಿದ್ದರೂ ಸಂಬಂಧಪಟ್ಟವರು ಇದರ ಬಗ್ಗೆ ಗಮನ ನೀಡದಿರುವುದು ನಿಜಕ್ಕೂ ದುರಂತವಾಗಿದೆ. ಈಗಲಾದರೂ ಈ ಬಗ್ಗೆ ಗಮನ ನೀಡಿ ರಿಪೇರಿ ಮಾಡಲಿ’. – ವೇದಮೂರ್ತಿ ನಿವೃತ್ತ ನೌಕರ ಚನ್ನಪಟ್ಟಣ ‘ಮತ್ತಷ್ಟು ಕ್ಯಾಮೆರಾ ಅಳವಡಿಸಲಿ’ ‘ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಪೊಲೀಸ್ ಇಲಾಖೆಯು ಈಗ ಕೆಟ್ಟಿರುವ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸುವುದರ ಜೊತೆಗೆ ಜನನಿಬಿಡ ಪ್ರದೇಶಗಳು ಸೇರಿದಂತೆ ನಗರದ ಹಲವು ಕಡೆ ಸಿಸಿಟಿವಿ ಕ್ಯಾಮೆರಾ ಅಳವಡಿಸುವುದು ಅವಶ್ಯಕವಾಗಿದೆ. ಇದರಿಂದ ಅಪರಾಧ ಪ್ರಕರಣಗಳ ಮೇಲೆ ನಿಗಾ ವಹಿಸಬಹುದು’.
– ಅಬ್ಬೂರು ರಾಜಮುಡಿ ಚನ್ನಪಟ್ಟಣ
‘ರಿಪೇರಿ ವಿಚಾರ ಮುಂದೂಡಿಕೆ’
‘ಪಟ್ಟಣದ ವ್ಯಾಪ್ತಿಯಲ್ಲಿ ಹಾಳಾಗಿರುವ ಸಿಸಿಟಿವಿ ಕ್ಯಾಮೆರಾಗಳನ್ನು ರಿಪೇರಿ ಮಾಡಿಸುವಂತೆ ಪೊಲೀಸ್ ಇಲಾಖೆ ನಗರಸಭೆಗೆ ಮನವಿ ಮಾಡಿತ್ತು. ಆ ವಿಷಯವನ್ನು ನಗರಸಭೆಯ ಸದಸ್ಯರ ಮುಂದಿಟ್ಟಾಗ ಅದರ ನಿರ್ವಹಣೆಯನ್ನು ಪೊಲೀಸ್ ಇಲಾಖೆಗೇ ವಹಿಸುವ ನಿರ್ಧಾರ ಮಾಡಲಾಯಿತು. ಇದರಿಂದಾಗಿ ಕ್ಯಾಮೆರಾ ರಿಪೇರಿ ವಿಚಾರ ಮುಂದೂಡಿಕೆಯಾಗಿದೆ. ಅಲ್ಲದೆ ಸಿಸಿಟಿವಿ ಪ್ರೊಜೆಕ್ಟರ್ ವೀಕ್ಷಣೆ ಮಾಡಲು ಪೊಲೀಸ್ ಠಾಣೆಗೆ ಹೋದರೆ ಅಲ್ಲಿ ಎಲ್ಲವೂ ಸಂಪೂರ್ಣ ಹಾಳಾಗಿರುವುದು ಕಂಡುಬಂತು. ಯ ಯಂತ್ರಗಳು ನಿಷ್ಕ್ರಿಯವಾಗಿವೆ’ ಎಂದು ನಗರಸಭೆ ಅಧ್ಯಕ್ಷ ವಾಸಿಲ್ ಆಲಿಖಾನ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.