ಚನ್ನಪಟ್ಟಣ: ತಾಲ್ಲೂಕಿನ ಗೌಡಗೆರೆ ಚಾಮುಂಡೇಶ್ವರಿ ಬಸವಪ್ಪ ಕ್ಷೇತ್ರದಲ್ಲಿ ಭೀಮನ ಅಮಾವಾಸ್ಯೆ ಪ್ರಯುಕ್ತ ಗುರುವಾರ ಪೂಜೆ, ರಥೋತ್ಸವ ಅದ್ದೂರಿಯಾಗಿ ನೆರವೇರಿತು.
ಗುರುವಾರ ಮಧ್ಯರಾತ್ರಿ ಎರಡು ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅಮ್ಮನವರ ಮೂಲ ಮೂರ್ತಿಗೆ ಅಭಿಷೇಕ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿತ್ತು. ಅಮಾವಾಸ್ಯೆ ಪ್ರಯುಕ್ತ ದೇವಿಗೆ ಮೂರು ಮಹಾಮಂಗಳಾರತಿ ನಡೆಯಿತು. ಸಾವಿರಾರು ಮಂದಿ ದೇವಿಯ ದೀಪಾರತಿಯನ್ನು ಕಣ್ತುಂಬಿಕೊಂಡರು.
ತಾಯಿಗೆ ವಿಶೇಷ ಅಭಿಷೇಕ, ಅಲಂಕಾರ, ನೂರೆಂಟು ಹಾಲರವಿ ಸೇವೆ ನಡೆಯಿತು. ಮಧ್ಯಾಹ್ನ ರಥೋತ್ಸವಕ್ಕೆ ಕ್ಷೇತ್ರದ ಧರ್ಮದರ್ಶಿ ಡಾ.ಮಲ್ಲೇಶ್ ಗುರೂಜಿ, ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದರು. ಅಮ್ಮನವರ ಮೂಲವಿಗ್ರಹವನ್ನು ದೇವಸ್ಥಾನದ ಆವರಣದಲ್ಲಿ ಮೆರವಣಿಗೆ ಮಾಡಲಾಯಿತು. ರಥಕ್ಕೆ ಭಕ್ತರು ಹಣ್ಣು, ದವನ ಅರ್ಪಿಸಿ ಭಕ್ತಿ ಸಮರ್ಪಿಸಿದರು. ನವ ವಧು ವರರು ರಥೋತ್ಸವದಲ್ಲಿ ಹೆಚ್ಚು ಮಂದಿ ಭಾಗವಹಿಸಿದ್ದರು.
ಹರಿದು ಬಂದ ಭಕ್ತಸಾಗರ: ಆಷಾಢದ ಹಿನ್ನೆಲೆ ಒಂದು ತಿಂಗಳಿನಿಂದ ಕ್ಷೇತ್ರಕ್ಕೆ ಭಕ್ತಸಾಗರವೇ ಹರಿದು ಬರುತ್ತಿದ್ದು, ಭೀಮನ ಅಮಾವಾಸ್ಯೆಯಂದು ಸಹ ಸಾವಿರಾರು ಭಕ್ತರು ಆಗಮಿಸಿದ್ದರು. ಭಕ್ತರಿಗೆ ಯಾವುದೇ ಅನಾನುಕೂಲವಾಗದಂತೆ ಕ್ಷೇತ್ರದ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಮಧ್ಯರಾತ್ರಿಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು. ರಾಜ್ಯ, ಹೊರ ರಾಜ್ಯಗಳಿಂದ ಸಹಸ್ರಾರು ಭಕ್ತರು ಭಾಗವಹಿಸಿದ್ದರು. ಎಲ್ಲಾ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಕೃತಕ ಜಲಪಾತ ಲೋಕಾರ್ಪಣೆ: ಭೀಮನ ಅಮಾವಾಸ್ಯೆ ಪ್ರಯುಕ್ತ ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಿಸಿರುವ ಕೃತಕ ಜಲಪಾತವನ್ನು ಶಾಸಕ ಸಿ.ಪಿ.ಯೋಗೇಶ್ವರ್ ಉದ್ಘಾಟಿಸಿದರು. ದೇವಿಯ ಹಿಂಭಾಗದಲ್ಲಿರುವ ಕೃತಕ ಪರ್ವತದ ತುದಿಯಿಂದ ನೀರು ಧುಮ್ಮಿಕ್ಕಿ ಹರಿಯುವ ವ್ಯವಸ್ಥೆ ಭಕ್ತರ ಕಣ್ಮನ ಸೆಳೆಯಿತು. ವಿಶ್ವ ಒಕ್ಕಲಿಗರ ಮಠದ ನಿಶ್ಚಲಾನಂದ ಸ್ವಾಮೀಜಿ, ಬೇವೂರು ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಶೀಲಾ ಯೋಗೇಶ್ವರ್, ತಹಶೀಲ್ದಾರ್ ಗಿರೀಶ್, ಡಿವೈಎಸ್‌ಪಿ ಗಿರಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.