ಚನ್ನಪಟ್ಟಣ: ತಾಲ್ಲೂಕಿನ ಮಂಗಾಡಹಳ್ಳಿಯಲ್ಲಿ ಬೀದಿ ನಾಯಿಗಳ ದಾಳಿಗೆ ಸುಮಾರು 50ಕ್ಕೂ ಹೆಚ್ಚು ನಾಟಿ ಕೋಳಿಗಳು ಬಲಿಯಾಗಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.
ಗ್ರಾಮದ ಪ್ರೇಮ ಚನ್ನಬಸವಪ್ಪ ಅವರು ತಮ್ಮ ಮನೆಯ ಪಕ್ಕದಲ್ಲಿ ಶೆಡ್ ನಿರ್ಮಿಸಿ ನಾಟಿಕೋಳಿ ಸಾಕಿದ್ದರು. ಸಂಜೆ ಕೋಳಿಗಳನ್ನು ಶೆಡ್‌ಗೆ ಹಾಕಿ ಮನೆಯಲ್ಲಿದ್ದ ವೇಳೆ ನಾಲ್ಕೈದು ಬೀದಿ ನಾಯಿಗಳು ಏಕಾಏಕಿ ದಾಳಿ ನಡೆಸಿವೆ. ಕೋಳಿಗಳ ಕೂಗಾಟ ಅರಚಾಟ ಕೇಳಿ ಹೊರಗೆ ಬರುವಷ್ಟರಲ್ಲಿ ಸುಮಾರು 50ಕ್ಕೂ ಹೆಚ್ಚು ಕೋಳಿಗಳು ನಾಯಿಗಳ ದಾಳಿಗೆ ಬಲಿಯಾಗಿವೆ.
ಘಟನೆಯಲ್ಲಿ ₹ 20 ಸಾವಿರಕ್ಕೂ ಹೆಚ್ಚು ಮೌಲ್ಯದ ನಾಟಿಕೋಳಿಗಳು ಬಲಿಯಾಗಿವೆ ಎಂದು ಅಂದಾಜಿಸಲಾಗಿದೆ. ಪ್ರೇಮ ಅವರು ಬಡತನದಲ್ಲಿ ಬದುಕು ಸಾಗಿಸುತ್ತಿದ್ದು, ನಾಟಿಕೋಳಿಗಳ ಸಾವಿನಿಂದ ನಷ್ಟ ಅನುಭವಿಸಿದ್ದಾರೆ. ಅವರಿಗೆ ತಾಲ್ಲೂಕು ಆಡಳಿತದಿಂದ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.