ADVERTISEMENT

ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯ: ಜನರಿಗೆ ಕಿರಿಕಿರಿ

ಈ ತ್ಯಾಜ್ಯ ತಿನ್ನಲು ಕಾಡಿನಿಂದ ಚಿರತೆಗಳೂ ಗ್ರಾಮಗಳತ್ತ * ಸಾರ್ವಜನಿಕರ ಆತಂಕ

ಎಚ್.ಎಂ.ರಮೇಶ್
Published 21 ಏಪ್ರಿಲ್ 2019, 19:30 IST
Last Updated 21 ಏಪ್ರಿಲ್ 2019, 19:30 IST
ಚನ್ನಪಟ್ಟಣ ವ್ಯಾಪ್ತಿಯ ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಕೋಳಿತ್ಯಾಜ್ಯವನ್ನು ಚೀಲದಲ್ಲಿ ತುಂಬಿ ಬಿಸಾಡಿರುವುದು
ಚನ್ನಪಟ್ಟಣ ವ್ಯಾಪ್ತಿಯ ಬೆಂಗಳೂರು –ಮೈಸೂರು ಹೆದ್ದಾರಿಯಲ್ಲಿ ಕೋಳಿತ್ಯಾಜ್ಯವನ್ನು ಚೀಲದಲ್ಲಿ ತುಂಬಿ ಬಿಸಾಡಿರುವುದು   

ಚನ್ನಪಟ್ಟಣ: ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ಕೆಲವು ಕೋಳಿ ಅಂಗಡಿ ಮಾಲೀಕರು ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ಪಟ್ಟಣದ ಹೊರವಲಯದ ರಸ್ತೆಗಳ ಅಂಚಿನಲ್ಲಿ ಹಾಕುತ್ತಿದ್ದಾರೆ. ದುರ್ವಾಸನೆ ಬೀರುವ ಈ ತ್ಯಾಜ್ಯದಿಂದಾಗಿ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಸಮರ್ಪಕವಾಗಿ ವಿಲೇವಾರಿ ಮಾಡಬೇಕಾದ ಕೋಳಿ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ, ನಿರ್ಜನ ಪ್ರದೇಶಗಳಲ್ಲಿ ಮನಸೋಇಚ್ಛೆ ಬಿಸಾಡಲಾಗುತ್ತಿದೆ. ನಿರ್ಜನ ಪ್ರದೇಶದಲ್ಲಿ ಗುಂಡಿ ತೆಗೆದು, ಕೋಳಿ ತ್ಯಾಜ್ಯವನ್ನು ಅದರಲ್ಲಿ ಮುಚ್ಚಿ ವಿಲೇವಾರಿ ಮಾಡಬೇಕಾಗಿರುವುದು ನಿಯಮ. ಆದರೆ, ಕೆಲವರು ಈ ಗೋಜಿಗೆ ಹೋಗದೆ ಪ್ಲಾಸ್ಟಿಕ್ ಚೀಲಗಳಲ್ಲಿ ತ್ಯಾಜ್ಯವನ್ನು ತುಂಬಿ ರಸ್ತೆ ಬದಿಯಲ್ಲಿ ಬಿಸಾಡಿ ಹೋಗುತ್ತಿರುವುದರಿಂದ ಆ ಪ್ರದೇಶದ ವಾತಾವರಣ ಕಲುಷಿತವಾಗುವ ಜತೆಗೆ ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ ಎಂದು ವಾಹನ ಸವಾರರಾದ ಪ್ರಕಾಶ್, ರಾಜು ಅವರ ಆರೋಪ.

ಬೆಂಗಳೂರು – ಮೈಸೂರು ಹೆದ್ದಾರಿ, ಪಟ್ಟಣದ ಹೊರವಲಯದ ರಾಮಮ್ಮನ ಕೆರೆ ಏರಿ, ಸಾತನೂರು ರಸ್ತೆ, ಗ್ರಾಮಾಂತರ ಪ್ರದೇಶದ ದೇವರಹೊಸಹಳ್ಳಿ, ಕೂಡ್ಲೂರು, ಹೊಂಗನೂರು, ಕೋಡಂಬಹಳ್ಳಿ ಸೇರಿದಂತೆ ಹಲವೆಡೆ ರಸ್ತೆ ಬದಿಯಲ್ಲಿ ಕೋಳಿ ತ್ಯಾಜ್ಯವನ್ನು ಬಿಸಾಡಿ ಹೋಗುತ್ತಿರುವುದರಿಂದ ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ ಎಂದು ಹೊಂಗನೂರು ಗ್ರಾಮದ ರವಿಕುಮಾರ್, ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತ್ಯಾಜ್ಯ ದುರ್ವಾಸನೆ ಬೀರುವುದರ ಜತೆಗೆ ಇದನ್ನು ತಿನ್ನಲು ಬರುವ ಬೀದಿ ನಾಯಿಗಳಿಂದ ಸಾರ್ವಜನಿಕರಿಗೆ ಇನ್ನಷ್ಟು ತೊಂದರೆ ಎದುರಾಗಿದೆ. ಬೀದಿಬದಿಯಲ್ಲೇ ಕೋಳಿ ಮಾಂಸ ಆಸ್ವಾದಿಸುತ್ತಾ, ರಸ್ತೆ ಬದಿಯಲ್ಲಿ ಹೋಗುವ ದಾರಿಹೋಕರ ಮೇಲೆ ನಾಯಿಗಳು ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಕೋಡಂಬಹಳ್ಳಿ ಗ್ರಾಮದ ಶಿವಣ್ಣ, ಕುಮಾರ್ ಅವರ ವಿವರಣೆ.

ಏನಿದು ಕೋಳಿ ತ್ಯಾಜ್ಯ?: ಕೋಳಿಯಲ್ಲಿನ ನಿರುಪಯುಕ್ತ ಭಾಗಗಳೇ ಕೋಳಿ ತ್ಯಾಜ್ಯ. ಸ್ವಚ್ಛ ಮಾಡುವಾಗ ಅದರ ದೇಹದೊಳಗಿನ ಕರುಳು, ಮೇಲ್ಮೈನ ರೆಕ್ಕೆ –ಪುಕ್ಕ, ಕಾಲಿನ ಸ್ವಲ್ಪ ಭಾಗ ತೆಗೆದು ಹಾಕಲಾಗುತ್ತದೆ. ನಂತರ ಅದನ್ನು ಒಂದೆಡೆ ಶೇಖರಿಸಿ ವಿಲೇವಾರಿ ಮಾಡಲಾಗುತ್ತದೆ.

ಈ ತ್ಯಾಜ್ಯವನ್ನು ನಿರ್ಜನ ಪ್ರದೇಶಗಳಲ್ಲಿ ಹೂತಿಟ್ಟು ವಿಲೇವಾರಿ ಮಾಡಬೇಕಾಗುತ್ತದೆ. ಕೆಲ ಕೋಳಿ ಅಂಗಡಿ ಮಾಲೀಕರು ಇದನ್ನು ಅನುಸರಿಸಿದರೆ ಇನ್ನೂ ಕೆಲವರು ರಸ್ತೆ ಬದಿಯಲ್ಲಿ, ಗುಂಡಿಗಳಲ್ಲಿ, ಕೆರೆ ಏರಿ ರಸ್ತೆಗಳಲ್ಲಿ ಬಿಸಾಡುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

ಬೀದಿ ನಾಯಿಗಳ ಹಾವಳಿ: ಎಲ್ಲೆಂದರಲ್ಲಿ ಬಿಸಾಡುತ್ತಿರುವ ಈ ಕೋಳಿ ತ್ಯಾಜ್ಯದಿಂದಾಗಿ ಬೀದಿ ನಾಯಿಗಳಿಗೆ ಪ್ರತಿದಿನ ಮೃಷ್ಟಾನ್ನ ಸಿಕ್ಕಂತಾಗುತ್ತಿದೆ. ಇದನ್ನು ತಿಂದು ದಷ್ಟಪುಷ್ಟವಾಗಿ ಕೊಬ್ಬಿರುವ ಬೀದಿ ನಾಯಿಗಳು ಮಾಂಸದ ಆಸೆಗೆ ಕೆರೆಯಂಗಳದಲ್ಲಿ ಒಂಟಿಯಾಗಿ ಮೇಯುವ ಕುರಿ, ಮೇಕೆ, ಕರುಗಳ ಮೇಲೆ ದಾಳಿ ನಡೆಸಲು ಮುಂದಾಗುತ್ತಿವೆ. ಇದರ ಜತೆಗೆ ರಸ್ತೆಬದಿಯಲ್ಲಿ ಸಂಚರಿಸುವ ಸಾರ್ವಜನಿಕರ ಮೇಲೂ ದಾಳಿ ನಡೆಸುತ್ತಿವೆ.

ಈ ತ್ಯಾಜ್ಯವನ್ನು ತಿನ್ನಲು ಕಾಡಿನಿಂದ ಚಿರತೆಗಳೂ ಗ್ರಾಮಗಳತ್ತ ಬರುತ್ತಿವೆ. ತ್ಯಾಜ್ಯದ ಜತೆಗೆ ಕರು, ಮೇಕೆ, ಕುರಿಗಳನ್ನೂ ಸ್ವಾಹ ಮಾಡಿರುವ ಉದಾಹರಣೆಗಳು ಸಾಕಷ್ಟಿವೆ ಎಂದು ದೇವರಹೊಸಹಳ್ಳಿ ಶ್ರೀಕಂಠು, ಬಸವರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.