ADVERTISEMENT

ಸದ್ಯಕ್ಕಿಲ್ಲ ನಗರ ಸ್ಥಳೀಯ ಸಂಸ್ಥೆ ಚುನಾವಣೆ

ರಾಮನಗರ ಜಿಲ್ಲೆ ಕೈಬಿಟ್ಟ ಆಯೋಗ: ಸದ್ಯ ಅಧಿಕಾರಿಗಳದ್ದೇ ದರ್ಬಾರು

​ಪ್ರಜಾವಾಣಿ ವಾರ್ತೆ
Published 2 ಮೇ 2019, 15:24 IST
Last Updated 2 ಮೇ 2019, 15:24 IST

ರಾಮನಗರ: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಆಡಳಿತಾವಧಿ ಮುಕ್ತಾಯಗೊಂಡು ಎರಡು ತಿಂಗಳು ಕಳೆದಿದ್ದು, ಇನ್ನೂ ತಿಂಗಳುಗಳ ಕಾಲ ಅಧಿಕಾರಿಗಳ ಆಡಳಿತವೇ ಇರಲಿದೆ.

ರಾಜ್ಯ ಚುನಾವಣಾ ಆಯೋಗವು ಗುರುವಾರ ರಾಜ್ಯದಲ್ಲಿನ 22 ಜಿಲ್ಲೆಗಳ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಿಸಿದೆ. ಆದರೆ ರಾಮನಗರ ಜಿಲ್ಲೆಯ ಒಂದೂ ಸಂಸ್ಥೆಗು ಚುನಾವಣೆ ನಿಗದಿ ಮಾಡಿಲ್ಲ. ವಾರ್ಡ್‌ವಾರು ಮೀಸಲಾತಿಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ, ಚನ್ನಪಟ್ಟಣ, ಕನಕಪುರ ನಗರಸಭೆ ಹಾಗೂ ಮಾಗಡಿ ಪುರಸಭೆಯ ಚುನಾವಣೆಯು ಮತ್ತೆ ಮುಂದಕ್ಕೆ ಹೋಗಿದೆ.

ಚನ್ನಪಟ್ಟಣ ನಗರಸಭೆ ಆಡಳಿತಾವಧಿಯು ಕಳೆದ ಮಾರ್ಚ್‌ 14ರಂದು, ಕನಕಪುರ ಹಾಗು ರಾಮನಗರ ನಗರಸಭೆಗಳ ಆಡಳಿತಾವಧಿಯು ಮಾರ್ಚ್‌ 16ಕ್ಕೆ ಕೊನೆಗೊಂಡಿದೆ. ಮಾಗಡಿ ಪುರಸಭೆಯ ಅವಧಿಯೂ ಮಾ.18ಕ್ಕೆ ಅಂತ್ಯವಾಗಿದೆ. ಈ ನಾಲ್ಕೂ ಕಡೆ ಅಧಿಕಾರಿಗಳ ಆಡಳಿತವಿದೆ.

ADVERTISEMENT

ಜನಪ್ರತಿನಿಧಿಗಳು ಇಲ್ಲದ ಕಾರಣ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರಿಗಳ ದರ್ಬಾರು ನಡೆದಿದೆ. ಬರಗಾಲದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ಒಳಚರಂಡಿ, ವಿದ್ಯುತ್‌ ದೀಪ, ಕಸ ಸಂಗ್ರಹಣೆ ಸೇರಿದಂತೆ ಮೂಲ ಸೌಕರ್ಯಗಳ ನಿರ್ವಹಣೆ ಅಷ್ಟು ಸಲೀಸಾಗಿ ನಡೆದಿಲ್ಲ.

ಮುಖಂಡರ ಗೋಳು
ಐದು ವರ್ಷ ಕಾಲ ಅಧಿಕಾರ ನಡೆಸಿದ ಜನಪ್ರತಿನಿಧಿಗಳು ಕೆಲವು ತಿಂಗಳಿಂದ ಬರಿಗೈಯಲ್ಲಿ ಕುಳಿತಿದ್ದಾರೆ. ತಮ್ಮ ಬಳಿ ಬೇಡಿಕೆಯ ಪಟ್ಟಿ ಹಿಡಿದು ಬರುವ ಜನರಿಗೆ ಉತ್ತರ ಹೇಳುವುದೂ ಅವರಿಗೆ ಕಷ್ಟವಾಗಿದೆ. ಹೀಗಾಗಿ ಆದಷ್ಟು ಶೀಘ್ರ ಚುನಾವಣೆ ನಡೆಸಬೇಕು ಎನ್ನುವುದು ಎಲ್ಲರ ಬಯಕೆಯಾಗಿದೆ. ಆದರೆ ನ್ಯಾಯಾಲಯದ ವ್ಯಾಜ್ಯಗಳ ಕಾರಣ ಚುನಾವಣಾ ಆಯೋಗವು ಇಲ್ಲಿ ಚುನಾವಣೆ ನಡೆಸಲು ಸಮ್ಮತಿಸಿಲ್ಲ. ಈ ಎಲ್ಲ ವ್ಯಾಜ್ಯಗಳು ಮುಕ್ತಾಯಗೊಂಡ ಬಳಿಕವಷ್ಟೇ ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.