ADVERTISEMENT

ದೂರು ಕೊಟ್ಟು ಜೈಲು ಪಾಲಾದ !

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 20:11 IST
Last Updated 3 ಫೆಬ್ರುವರಿ 2020, 20:11 IST

ರಾಮನಗರ: ಬಾಡಿಗೆದಾರರನ್ನು ಖಾಲಿ ಮಾಡಿಸಲು ಕಾಡುಪ್ರಾಣಿಗಳ ಮಾಂಸ ತಂದಿಟ್ಟು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದ ವ್ಯಕ್ತಿ ಇದೀಗ ತಾವೇ ಜೈಲುಪಾಲಾಗಿದ್ದಾರೆ.

ರಾಮನಗರದ ನ್ಯೂ ಎಕ್ಸ್‌ಟೆನ್ಶನ್‌ ಬಡಾವಣೆ ನಿವಾಸಿ ಮೊಹಮ್ಮದ್ ಇಕ್ಬಾಲ್‌ (76) ಬಂಧಿತ. ಇವರ ಅಳಿಯ ಅಹಮ್ಮದ್ ಫರ್ವೇಜ್‌ (35) ತಲೆಮರೆಸಿಕೊಂಡಿದ್ದಾರೆ. ಅವರಿಂದ 2.4 ಕೆ.ಜಿ. ನವಿಲಿನ ಮಾಂಸ, 3.2 ಕೆ,ಜಿ. ಜಿಂಕೆ ಮಾಂಸ, 6 ಕಾಡು ಗೌಜಲ ಹಕ್ಕಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ ಅನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಇಕ್ಬಾಲ್‌ ಸಹೋದರ ಜಕೀರ್ ವಿದೇಶದಲ್ಲಿ ಇದ್ದು, ರಾಮನಗರದ ನ್ಯೂ ಎಕ್ಸ್‌ಟೆನ್ಶನ್‌ ಬಡಾವಣೆಯಲ್ಲಿನ ಮನೆಯನ್ನು ಇಬ್ಬರು ಯುವಕರಿಗೆ ಬಾಡಿಗೆ ನೀಡಿದ್ದರು. ಈ ಮನೆ ಮೇಲೆ ಕಣ್ಣಿಟ್ಟಿದ್ದ ಇಕ್ಬಾಲ್‌ ಬಾಡಿಗೆದಾರರನ್ನು ಖಾಲಿ ಮಾಡಿಸಲು ಇನ್ನಿಲ್ಲದ ಕಸರತ್ತು ನಡೆಸಿದ್ದರು. ಅದಕ್ಕೆ ಬಾಡಿಗೆದಾರ ಒಪ್ಪ ದಿದ್ದಾಗ ಹಗೆಯಿಂದ ಕೃತ್ಯ ಎಸಗಿದ್ದರು.

ADVERTISEMENT

‘ನಮ್ಮ ಅಣ್ಣನ ಮನೆಯಲ್ಲಿನ ಬಾಡಿಗೆದಾರರು ಕಾಡು ಪ್ರಾಣಿಗಳ ಮಾಂಸ ಮಾರಾಟ ಮಾಡುತ್ತಾರೆ’ ಎಂದು ಇಕ್ಬಾಲ್‌ ಹಾಗೂ ಅವರ ಅಳಿಯ ಅರಣ್ಯ ಇಲಾಖೆಗೆ ಅನೇಕ ಬಾರಿ ದೂರು ನೀಡಿದ್ದರು. ಅದರಂತೆ ಕಳೆದ ಶುಕ್ರವಾರ ಸಹ ಕಚೇರಿಗೆ ಬಂದು ದೂರಿದ್ದರು. ಅವರ ದೂರು ಆಧರಿಸಿ ದಾಳಿ ನಡೆಸಿದ ಅರಣ್ಯ ಇಲಾಖೆ
ಸಿಬ್ಬಂದಿ ದಾಳಿ ನಡೆಸಿದಾಗ ಮನೆಯ ಹೊರಗೆ ಬ್ಯಾಗ್‌ನಲ್ಲಿ ಕಾಡುಪ್ರಾಣಿಗಳ ಮಾಂಸ ಪತ್ತೆಯಾಗಿತ್ತು. ಕೋರ್ಟ್‌ ಆರೋಪಿಯನ್ನು 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.