ADVERTISEMENT

ಚನ್ನಪಟ್ಟಣ ಕಣ್ವ ಜಲಾಶಯ ಭರ್ತಿಗೆ ಕ್ಷಣಗಣನೆ

ಎರಡು ದಶಕದ ನಂತರ ಭರ್ತಿಯಾಗುತ್ತಿರುವ ಜಲಾಶಯ

ಎಚ್.ಎಂ.ರಮೇಶ್
Published 22 ನವೆಂಬರ್ 2021, 5:09 IST
Last Updated 22 ನವೆಂಬರ್ 2021, 5:09 IST
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಭರ್ತಿಯಾಗುವ ಸಮೀಪ ತಲುಪಿರುವುದು
ಚನ್ನಪಟ್ಟಣ ತಾಲ್ಲೂಕಿನ ಕಣ್ವ ಜಲಾಶಯ ಭರ್ತಿಯಾಗುವ ಸಮೀಪ ತಲುಪಿರುವುದು   

ಚನ್ನಪಟ್ಟಣ: ತಾಲ್ಲೂಕಿನ ಜೀವನಾಡಿ ಕಣ್ವ ಜಲಾಶಯ ಭರ್ತಿಗೆಕ್ಷಣಗಣನೆ ಆರಂಭವಾಗಿದ್ದು, ಜಲಾಶಯ ಭರ್ತಿಗೆ ಇನ್ನು ಒಂದೂವರೆ ಅಡಿ ಮಾತ್ರ ಬಾಕಿ ಉಳಿದಿದೆ.

ಸುಮಾರು ಎರಡು ದಶಕಗಳಿಂದ ಭರ್ತಿಯಾಗದೆ ಬಹುತೇಕ ಖಾಲಿಯಾಗಿದ್ದ ಜಲಾಶಯಕ್ಕೆ ಈಗ ಜೀವಕಳೆ ಬಂದಿದ್ದು, 32 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಸದ್ಯ 30.5 ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 250 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಜಲಾಶಯ ಭರ್ತಿಯಾದರೆ ಕ್ರಸ್ಟ್ ಗೇಟ್ ಮೂಲಕ ನದಿಗೆ ನೀರು ಹರಿಸಲು ನೀರಾವರಿ ಇಲಾಖೆ ಸಿದ್ಧತೆ ನಡೆಸಿದೆ.

ಮಾಗಡಿಯಲ್ಲಿ ಹುಟ್ಟುವ ಕಣ್ವ ನದಿಗೆ 1946ರಲ್ಲಿ ತಾಲ್ಲೂಕಿನ ಗಡಿಭಾಗದಲ್ಲಿ ಜಲಾಶಯನಿರ್ಮಾಣ ಮಾಡಲಾಗಿದೆ.ಸುಮಾರು 776 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಜಲಾಶಯ ತಾಲ್ಲೂಕಿನ ಸಾವಿರಾರು ಹೆಕ್ಟೇರ್ ಜಮೀನಿಗೆ ನೀರುಣಿಸುವ ಸಾಮರ್ಥ್ಯವನ್ನು ಹೊಂದಿದೆ. ಸ್ವಯಂ ಚಾಲಿತ ಸೈಫನ್ ವ್ಯವಸ್ಥೆ ಹೊಂದಿರುವ ಜಲಾಶಯಕ್ಕೆ ದಶಕದ ಹಿಂದೆ ಕ್ರಸ್ಟ್ ಗೇಟ್ ಅಳವಡಿಸಲಾಗಿದೆ.

ADVERTISEMENT

ಈ ಹಿಂದೆ 2000ನೇ ಇಸವಿಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಜಲಾಶಯ ಭರ್ತಿಯಾಗಿ ಸ್ವಯಂಚಾಲಿತ ಸೈಫನ್ ಮೂಲಕ ನೀರು ಕಣ್ವನದಿಗೆ ಹರಿದಿತ್ತು. ಅದಾದ ನಂತರ ಜಲಾಶಯ ಭರ್ತಿಯಾಗಿರಲಿಲ್ಲ. ಮಾಗಡಿಯ ವೈ.ಜಿ. ಗುಡ್ಡ ಜಲಾಶಯ ನಿರ್ಮಾಣವಾದ ನಂತರ ಕಣ್ವ ಜಲಾಶಯಕ್ಕೆ ಎತ್ತರ ಪ್ರದೇಶದಿಂದ ನೀರು ಹರಿಯುವಿಕೆ ಗಣನೀಯವಾಗಿ ಕಡಿಮೆಯಾಗಿ ಜಲಾಶಯ ಬಣಗುಡುವಂತಾಗಿತ್ತು. ಕಳೆದ ಐದಾರು ವರ್ಷಗಳಿಂದ ಏತ ನೀರಾವರಿ ಯೋಜನೆ ಮೂಲಕ ಇಗ್ಗಲೂರು ಎಚ್.ಡಿ. ದೇವೇಗೌಡ ಬ್ಯಾರೇಜಿನಿಂದಕಣ್ವ ಜಲಾಶಯಕ್ಕೆ ಮಳೆಗಾಲದಲ್ಲಿನೀರು ಹರಿಸಲಾಗುತ್ತಿತ್ತಾದರೂ, ಅರ್ಧದಷ್ಟೂ ನೀರು ಸಹ ಸಂಗ್ರಹವಾಗಿರಲಿಲ್ಲ.

ಇದೀಗ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿರುವುದರಿಂದ ಜಲಾಶಯ ಭರ್ತಿಯಾಗುವತ್ತ ದಾಪುಗಾಲು ಹಾಕಿದೆ. ಆ ಮೂಲಕ ತಾಲ್ಲೂಕಿನ ರೈತರ ಮೊಗದಲ್ಲಿ ಸಂತಸ ಮೂಡಿದೆ.

ನೆಲೆ ಕಳೆದುಕೊಂಡಿರುವ ನದಿ: ಅತಿಯಾದ ಮರಳು ಗಣಿಗಾರಿಕೆಯಿಂದಾಗಿ ಕಣ್ವ ನದಿ ತನ್ನ ನೆಲೆಯನ್ನು ಕಳೆದುಕೊಂಡಿದ್ದು, ಜಲಾಶಯ ಭರ್ತಿಯಾಗಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದರೆ ಎಲ್ಲೆಂದರಲ್ಲಿ ನೀರು ಹರಿದು ನದಿಪಾತ್ರದ ಅಕ್ಕಪಕ್ಕದ ಜಮೀನು, ಹಳ್ಳಿಗಳಿಗೆ ನುಗ್ಗುವ ಆತಂಕ ಎದುರಾಗಿದೆ.

ನದಿಯ ಪಕ್ಕದ ಜಮೀನುಗಳನ್ನು ಮರಳಿಗಾಗಿ ತೋಡಿರುವ ಕಾರಣದಿಂದ ದೊಡ್ಡ ದೊಡ್ಡ ಕಂದಕಗಳು ಸೃಷ್ಟಿಯಾಗಿವೆ. ನೀರು ಒಮ್ಮೆಲೇ ರಭಸವಾಗಿ ಹರಿದುಬಂದರೆ ನದಿಯ ಅಕ್ಕಪಕ್ಕದ ಜಮೀನುಗಳು, ತೋಟಗಳು ಕೊಚ್ಚಿಹೋಗುವುದು ನಿಶ್ಚಿತವಾಗಿದೆ.

ತಾಲ್ಲೂಕಿನ ಜನರ ಜೀವನಾಡಿಯಾಗಿರುವ ಕಣ್ವ ಜಲಾಶಯ ಎರಡು ದಶಕಗಳ ನಂತರ ಭರ್ತಿಯಾಗುತ್ತಿರುವ ಕಾರಣ ತಾಲ್ಲೂಕಿನ ಜನತೆಯ ಸಂಭ್ರಮಕ್ಕೆ ಕಾರಣವಾಗಿದೆ. ಕಣ್ವ ನಾಲೆಗಳಿಗೆ ನೀರು ಹರಿದು ಇನ್ನಷ್ಟು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ರೈತರು ಕಾತರರಾಗಿದ್ದಾರೆ.

ನದಿಯಂಚಿನ ಗ್ರಾಮಗಳಿಗೆ ಎಚ್ಚರಿಕೆ

ಕಣ್ವ ಜಲಾಶಯ ಭರ್ತಿಯಾಗುವ ಮುನ್ಸೂಚನೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ನದಿಯಂಚಿನ ಗ್ರಾಮಗಳ ಜನರಿಗೆ ಎಚ್ಚರದಿಂದಿರಲು ಕಾವೇರಿ ನೀರಾವರಿ ನಿಗಮ ಸೂಚನೆ ನೀಡಿದೆ.

ಈ ಸಂಬಂಧ ತಾಲ್ಲೂಕು ಆಡಳಿತ, ನದಿಯಂಚಿನ ಗ್ರಾಮಗಳ ಗ್ರಾಮ ಪಂಚಾಯಿತಿಗಳಿಗೆ ಹಾಗೂ ಪೊಲೀಸ್ ಇಲಾಖೆಗೆ ಪತ್ರ ಬರೆದಿರುವ ಕಣ್ವ ಯೋಜನಾ ಆಧುನೀಕರಣ ಉಪವಿಭಾಗದ ಅಧಿಕಾರಿಗಳು, ನದಿಪಾತ್ರದ ಜನ ಜಾನುವಾರುಗಳ ಸುರಕ್ಷತೆ ಬಗ್ಗೆ ನಿಗಾ ವಹಿಸುವಂತೆ ತಿಳಿಸಿದ್ದಾರೆ.

ತಾಲ್ಲೂಕಿನ ದಶವಾರ, ತಿಟ್ಟಮಾರನಹಳ್ಳಿ, ಮಳೂರುಪಟ್ಟಣ, ಕೂಡ್ಲೂರು, ಕೋಡಂಬಹಳ್ಳಿ, ಸೋಗಾಲ, ಹಾರೋಕೊಪ್ಪ, ಅಕ್ಕೂರು, ಬಾಣಗಹಳ್ಳಿ, ಎಲೆತೋಟದಹಳ್ಳಿ, ಇಗ್ಗಲೂರು, ವಿರುಪಾಕ್ಷಿಪುರ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಣ್ವ ನದಿ ಹಾದುಹೋಗಲಿದ್ದು, ನದಿಪಾತ್ರದ ಜನರಿಗೆ ಎಚ್ಚರಿಕೆ ನೀಡಬೇಕು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.