ADVERTISEMENT

ಕೋವಿಡ್: ಮತ್ತೆ ಇರಲಿ ಎಚ್ಚರ

ಎರಡನೇ ಅಲೆ ಸಾಧ್ಯತೆ; ಮಾಸ್ಕ್‌ ಬಳಕೆ ಕಡ್ಡಾಯಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 15:33 IST
Last Updated 17 ಮಾರ್ಚ್ 2021, 15:33 IST
ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಬುಧವಾರ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು
ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ಬುಧವಾರ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದರು   

ಅಂಕಿ ಅಂಶ; 1

1,91,821–ಜಿಲ್ಲೆಯಲ್ಲಿ ಈವರೆಗೆ ಪರೀಕ್ಷಿಸಲಾದ ಕೋವಿಡ್ ಮಾದರಿಗಳು
1,83,214–ನೆಗೆಟಿವ್‌ ವರದಿಗಳು
7782–ಒಟ್ಟು ಸೋಂಕಿತರು
7694–ಗುಣಮುಖರಾದವರು
77–ಕೋವಿಡ್‌ನಿಂದ ಸಾವಿಗೀಡಾದವರು

ಅಂಕಿ–ಅಂಶ;2

ADVERTISEMENT

8163–ಮೊದಲ ಹಂತದ ಲಸಿಕೆ ಗುರಿ
6662–ಲಸಿಕೆ ಪಡೆದವರು
ಶೇ 81– ಗುರಿ ಸಾಧನೆ

6459–ಎರಡನೇ ಹಂತದ ಲಸಿಕೆ ಗುರಿ
4605––ಲಸಿಕೆ ಪಡೆದವರು
ಶೇ 72– ಗುರಿ ಸಾಧನೆ

ಕೋಟ್‌
ಕೋವಿಡ್ ಸೋಂಕು ನಮ್ಮಿಂದ ಸಂಪೂರ್ಣ ದೂರ ಆಗಿಲ್ಲ. ಹೀಗಾಗಿ ಈಗಲೂ ಕಡ್ಡಾಯವಾಗಿ ಮಾಸ್ಕ್‌, ಸ್ಯಾನಿಟೈಸರ್ ಬಳಸಬೇಕು
ಡಾ. ನಿರಂಜನ್‌
ಡಿಎಚ್‌ಒ, ರಾಮನಗರ


ರಾಮನಗರ: ರಾಜ್ಯದಾದ್ಯಂತ ಕೋವಿಡ್‌ನ ಎರಡನೇ ಅಲೆ ಭೀತಿ ಹೆಚ್ಚುತ್ತಿದೆ. ಜಿಲ್ಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದ್ದು, ಎಚ್ಚರಿಕೆಯೇ ಎಲ್ಲಕ್ಕೂ ಮದ್ದು ಎನ್ನುತ್ತಾರೆ ವೈದ್ಯರು.

ಕಳೆದ ಕೆಲವು ತಿಂಗಳುಗಳಿಂದ ಜಿಲ್ಲೆಯಲ್ಲಿ ಪ್ರತಿ ದಿನ ಕೋವಿಡ್ ಪೀಡಿತರ ಸಂಖ್ಯೆ ಒಂದಂಕಿಯಲ್ಲಿಯೇ ಮುಂದುವರಿದಿದೆ. ಬುಧವಾರ ಸಹ ಜಿಲ್ಲೆಯಲ್ಲಿ ಎರಡು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 15ರಷ್ಟಿದೆ. ಈ ಪೈಕಿ ಕಂದಾಯ ಭವನದಲ್ಲಿ ಇರುವ ಕೋವಿಡ್ ಆಸ್ಪತ್ರೆಯಲ್ಲಿ 12 ಹಾಗೂ ಇತರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಮುನ್ನೆಚ್ಚರಿಕೆ ಅಗತ್ಯ: ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಬಳಕೆ ಕಡಿಮೆಯಾಗುತ್ತಿದೆ. ಕೋವಿಡ್‌ಗೆ ಲಸಿಕೆ ಇದೆ ಎಂಬ ಕಾರಣಕ್ಕೆ ಜನರು ಧರಿಸುವುದನ್ನು ಮರೆತಂತೆ ಇದೆ. ತರಕಾರಿ ಮಾರುಕಟ್ಟೆ, ಬಸ್ ನಿಲ್ದಾಣ ಮೊದಲಾದ ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್‌ ಬಳಕೆ ಮೊದಲಿನಂತೆ ಇಲ್ಲ. ಇದು ರೋಗ ಹರಡುವಿಕೆಯ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

‘ಮಾಸ್ಕ್‌ ಬಳಕೆ ಕಡ್ಡಾಯ ಎಂಬ ನಿಯಮ ಜಾರಿಯಲ್ಲಿ ಇದ್ದರೂ ಕೆಲವರು ಉಡಾಫೆಯಿಂದ ಹಾಗೆಯೇ ತಿರುಗುತ್ತಾರೆ. ಇದರಿಂದ ಮಕ್ಕಳು, ಹಿರಿಯರು ಸೇರಿದಂತೆ ಎಲ್ಲರಿಗೂ ಅಪಾಯ ಇದ್ದೇ ಇದೆ. ಹೀಗಾಗಿ ಮೊದಲಿನಂತೆ ಮಾಸ್ಕ್‌ ಬಳಸದ ಜನರಿಗೆ ಪೊಲೀಸರು ಇಲ್ಲವೇ ನಗರಸಭೆ ಅಧಿಕಾರಿಗಳು ದಂಡ ವಿಧಿಸಬೇಕು’ ಎನ್ನುತ್ತಾರೆ ಐಜೂರು ನಿವಾಸಿ ಹರೀಶ್‌.

ವೈದ್ಯರು ಏನೆನ್ನುತ್ತಾರೆ?: ನಿತ್ಯ ಪರೀಕ್ಷೆ: ಈಗಲೂ ನಿತ್ಯ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ರಾಮನಗರದಲ್ಲಿಯೇ ಪ್ರಯೋಗಾಲಯ ಇದ್ದು, ಇಲ್ಲಿ ಮಾದರಿಗಳ ಪರೀಕ್ಷಾ ವರದಿ ಸಿಗುತ್ತಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ ಸೋಂಕು ತಕ್ಕ ಮಟ್ಟಿಗೆ ನಿಯಂತ್ರಣದಲ್ಲಿ ಇದೆ. ಹೊಸ ಮಾದರಿಯ ಕೋವಿಡ್ ವೈರಾಣುಗಳು ಪತ್ತೆಯಾಗಿಲ್ಲ’ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

‘ಸೋಂಕು ಬಹುತೇಕ ಹೊರಟು ಹೋಗಿದೆ ಎಂದು ಸಾರ್ವಜನಿಕರು ಮಾಸ್ಕ್‌ ಇಲ್ಲದೇ ಜನದಟ್ಟಣೆ ಪ್ರದೇಶಗಳಲ್ಲಿ ತಿರುಗಾಡುವುದು ಹೆಚ್ಚಾಗಿದೆ. ಆದರೆ ಕೋವಿಡ್ ಸಂಪೂರ್ಣ ಮಾಯವಾಗಿಲ್ಲ ಎಂಬುದು ನಮ್ಮ ತಿಳಿವಳಿಕೆಯಲ್ಲಿ ಇರಬೇಕು. ಈಗಲೂ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಕೆ ಮುಂದುವರಿಸುವುದು ಸೂಕ್ತ’ ಎನ್ನುತ್ತಾರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಿರಂಜನ್‌.

ಬಾಕ್ಸ್‌
ಲಸಿಕೆ ಪಡೆಯಿರಿ
ಜಿಲ್ಲೆಯಲ್ಲಿ ಸದ್ಯ ಮೂರನೇ ಹಂತದ ಕೋವಿಡ್ ಲಸಿಕೆ ಅಭಿಯಾನ ಚಾಲನೆಯಲ್ಲಿ ಇದೆ. ಈ ಹಂತದಲ್ಲಿ 60 ವರ್ಷ ಮತ್ತು ಮೇಲ್ಪಟ್ಟ ಸಾರ್ವಜನಿಕರಿಗೆ ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ನಗರ ಆರೋಗ್ಯ ಕೇಂದ್ರಗಳು ಹಾಗೂ ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಸಿಗಲಿದೆ. 45 ರಿಂದ 60 ವರ್ಷದೊಳಗಿನ ವ್ಯಕ್ತಿಗಳು ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ, ಮೂತ್ರಪಿಂಡ, ಲಿವರ್‌ಗಳಿಗೆ ಸಂಬಂಧಿಸಿದ ತೊಂದರೆಗಳಿದ್ದರೆ ಹಾಗೂ ಕ್ಯಾನ್ಸರ್, ಎಚ್.ಐ.ವಿ/ಏಡ್ಸ್ ಸೋಂಕಿನಿಂದ ಬಳಲುತ್ತಿರುವವರಿಗೆ ವಿಶೇಷ ಪ್ರಕರಣಗಳೆಂದು ಪರಿಗಣಿಸಿ ಅವರಿಗೂ ಉಚಿತ ಲಸಿಕೆ ನೀಡಲಾಗುವುದು.

ಮೊದಲ ಹಾಗೂ ಎರಡನೇ ಹಂತದಲ್ಲಿ ಕೋವಿಡ್ ಲಸಿಕೆ ಪಡೆದ ಕೋವಿಡ್ ವಾರಿಯರ್‌ಗಳಿಗೆ ಸದ್ಯ ಎರಡನೇ ಡೋಸ್‌ ಲಸಿಕೆ ನೀಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.