ADVERTISEMENT

ರಾಮನಗರ | ಬೆಳೆ ಸಮೀಕ್ಷೆ: ಶೇ 90ರಷ್ಟು ಸಾಧನೆ

ಓದೇಶ ಸಕಲೇಶಪುರ
Published 12 ಅಕ್ಟೋಬರ್ 2023, 4:45 IST
Last Updated 12 ಅಕ್ಟೋಬರ್ 2023, 4:45 IST
ಮಾಗಡಿ ತಾಲ್ಲೂಕಿನಲ್ಲಿ ರೈತರೊಬ್ಬರು ಬೆಳೆ ಸಮೀಕ್ಷೆ ಮಾಡುತ್ತಿದ್ದ ಸ್ಥಳಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ (ಬಲದಿಂದ ಮೊದಲನೇಯವರು) ಭೇಟಿ ನೀಡಿ ಪರಿಶೀಲನೆ ನಡೆಸಿದರು
ಮಾಗಡಿ ತಾಲ್ಲೂಕಿನಲ್ಲಿ ರೈತರೊಬ್ಬರು ಬೆಳೆ ಸಮೀಕ್ಷೆ ಮಾಡುತ್ತಿದ್ದ ಸ್ಥಳಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ (ಬಲದಿಂದ ಮೊದಲನೇಯವರು) ಭೇಟಿ ನೀಡಿ ಪರಿಶೀಲನೆ ನಡೆಸಿದರು   

ರಾಮನಗರ: ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವ ಬೆನ್ನಲ್ಲೇ, ಐದು ತಾಲ್ಲೂಕುಗಳಲ್ಲಿ ಆ್ಯಪ್ ಆಧಾರಿತ ಬೆಳೆ ಸಮೀಕ್ಷೆಯು ಭರದಿಂದ ಸಾಗಿದೆ. ಇದುವರೆಗೆ ಶೇ 90.32ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಈ ಪೈಕಿ ಹಾರೋಹಳ್ಳಿ ತಾಲ್ಲೂಕು ಮುಂದಿದ್ದು, ಇಲ್ಲಿ ಶೇ 97.10ರಷ್ಟು ಪ್ರಗತಿಯಾಗಿದೆ. ಚನ್ನಪಟ್ಟಣ ತಾಲ್ಲೂಕು ಸ್ವಲ್ಪ ಹಿಂದುಳಿದಿದ್ದು, ಇಲ್ಲಿ ಶೇ 81.17ರಷ್ಟು ಸಮೀಕ್ಷೆಯಾಗಿದೆ.

ಈ ಸಲ ಜಿಲ್ಲೆಯಲ್ಲಿ ಸೆ. 15ರಿಂದ ಆರಂಭಗೊಂಡ ಸಮೀಕ್ಷೆಯು ಇದೇ ಅ. 12ಕ್ಕೆ ಅಂತ್ಯಗೊಳ್ಳಲಿದೆ. ಕಳೆದ ಮೂವತ್ತೊಂದು ದಿನಗಳಲ್ಲಿ ಜಿಲ್ಲೆಯಲ್ಲಿರುವ 6.96 ಲಕ್ಷ ಕೃಷಿ ಹಿಡುವಳಿಗಳ ಪೈಕಿ 6.25 ಲಕ್ಷ ಹಿಡುವಳಿಗಳು ಸಮೀಕ್ಷೆಗೆ ಒಳಪಟ್ಟಿವೆ.

ಈ ಸಲ ವಿಳಂಬ

ADVERTISEMENT

‘ಮಳೆ ಕೊರತೆಯ ಕಾರಣದಿಂದಾಗಿ ಜಿಲ್ಲೆಯಲ್ಲಿ ಈ ವರ್ಷ ಬೆಳೆ ಸಮೀಕ್ಷೆಯನ್ನು ತಡವಾಗಿ ಆರಂಭಿಸಲಾಯಿತು. ಹಿಂದಿನ ವರ್ಷಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ ಸಮೀಕ್ಷೆ ಮುಗಿಸಿ, ವರದಿಯನ್ನು ಸಂಬಂಧಪಟ್ಟವರಿಗೆ ಕಳಿಸಿ ಕೊಡಲಾಗಿತ್ತು’ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎನ್. ಅಂಬಿಕಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಂಗಾರು ಕೈ ಕೊಟ್ಟಿರುವುದರಿಂದ ಜಿಲ್ಲೆಯ ಪ್ರಮುಖ ಬೆಳೆಯಾದ ರಾಗಿ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಮಂದಗತಿಯಲ್ಲಿ ಸಾಗಿತು. ಆಗೊಮ್ಮೆ, ಹೀಗೊಮ್ಮೆ ಬಂದು ಹೋಗುತ್ತಿದ್ದ ಮಳೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಬಿತ್ತನೆ ಕೆಲಸವೂ ನಡೆಯಲಿಲ್ಲ. ಹಾಗಾಗಿ, ಬಿತ್ತನೆ ಕಾರ್ಯದಲ್ಲಿ ಒಂದು ಮಟ್ಟಿಗೆ ಪ್ರಗತಿಯಾದ ಬಳಿಕ ಸಮೀಕ್ಷೆ ಆರಂಭಿಸಲಾಯಿತು’ ಎಂದು ಹೇಳಿದರು.

ಒಂದೆರಡು ದಿನ ವಿಸ್ತರಣೆ

‘ಸಮೀಕ್ಷೆಗೆ ಅ. 12ಕ್ಕೆ ಕಡೆಯ ದಿನವಾಗಿದ್ದರೂ ಶೇ 100ರಷ್ಟು ಸಾಧನೆ ಮಾಡುವ ದೃಷ್ಟಿಯಿಂದ ಒಂದೆರಡು ದಿನ ಹೆಚ್ಚುವರಿಯಾಗಿ ಸಮೀಕ್ಷೆ ಮಾಡಲಾಗುವುದು. ಜಿಲ್ಲೆಯಲ್ಲಿ ಬರ ಘೋಷಣೆಯಾಗಿರುವುದರಿಂದ ಬೆಳೆ ಸಮೀಕ್ಷೆಯಲ್ಲಿ ಶೇ 100ರಷ್ಟು ಸಾಧನೆ ಮಾಡಿದರೆ, ರೈತರಿಗೆ ಪರಿಹಾರ ಸೌಲಭ್ಯ ತಲುಪಿಸಲು ಸುಲಭವಾಗಲಿದೆ’ ಎಂದು ಮಾಹಿತಿ ನೀಡಿದರು.

ಬರ ಪರಿಹಾರ ಸೇರಿದಂತೆ ಹಲವು ಸೌಲಭ್ಯಗಳಿಗೆ ಬೆಳೆ ಸಮೀಕ್ಷೆಯೇ ಆಧಾರ. ರೈತರು ಕೂಡಲೇ ತಮ್ಮ ಜಮೀನಿನ ಬೆಳೆ ಸಮೀಕ್ಷೆ ಮಾಡಬೇಕು. ಅಗತ್ಯವಿದ್ದರೆ ಸ್ಥಳೀಯ ಪಿ.ಆರ್‌.ಗಳ ನೆರವು ಪಡೆಯಬೇಕು.
ಎನ್. ಅಂಬಿಕಾ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ, ರಾಮನಗರ

‘ರೈತರೇ ತಮ್ಮ ಸ್ಮಾರ್ಟ್‌ಫೋನ್‌ ಮೂಲಕ Kharif Season Farmer Crop Survey-2023-24 ಎಂಬ ಆ್ಯಪ್‌ ಅನ್ನು ಗೂಗಲ್ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು. ರೈತರ ಹೆಸರು, ಪ್ರಸಕ್ತ ವರ್ಷ ಮತ್ತು ಋತು ಮಾಹಿತಿ ಹಾಗೂ ಮೊಬೈಲ್ ಸಂಖ್ಯೆ ದಾಖಲಿಸಬೇಕು. ಆಗ ಬರುವ ಒಟಿಪಿ ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಜಮೀನು, ಬೆಳೆ ಹಾಗೂ ಇತರ ಮಾಹಿತಿಯನ್ನು ದಾಖಲಿಸಬೇಕು’ ಎಂದು ತಿಳಿಸಿದರು.

‘ಕೆಲ ರೈತರಿಗೆ ಮೊಬೈಲ್‌ನಲ್ಲಿ ಸಮೀಕ್ಷೆ ಮಾಡಲು ಗೊತ್ತಾಗುವುದಿಲ್ಲ. ಅಂತಹವರಿಗೆ ನೆರವಾಗಲು ಖಾಸಗಿ ಪಿ.ಆರ್‌ (ಪ್ರೈವೇಟ್ ರೆಸಿಡೆನ್ಸಿ)ಗಳನ್ನು ನೇಮಿಸಲಾಗಿದೆ. ಜೊತೆಗೆ, ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಸಿಬ್ಬಂದಿ ನೆರವಿನಿಂದಲೂ ಸಮೀಕ್ಷೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ 8448447715ಗೆ ಕರೆ ಮಾಡಬಹುದು’ ಎಂದು ಹೇಳಿದರು.

ಸೌಲಭ್ಯಗಳಿಗೆ ಸಮೀಕ್ಷೆಯೇ ಆಧಾರ

ಬೆಳೆ ವಿಮೆ ಕೃಷಿ ಸಾಲ ಪಹಣಿ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಬೆಳೆ ಖರೀದಿ ಹಾಗೂ ಸರ್ಕಾರದ ವಿವಿಧ ಕಾರ್ಯಕ್ರಮಗಳಿಗೆ ಸಮನ್ವಯ ಮಾಡಿಕೊಂಡು ಫಲಾನುಭವಿಗಳಿಗೆ ಸೌಲಭ್ಯ ನೀಡಲು ಬೆಳೆ ಸಮೀಕ್ಷೆ ಮಾಹಿತಿಯೇ ಆಧಾರವಾಗಿದೆ. ಇದೀಗ ಜಿಲ್ಲೆಯಲ್ಲಿ ಬರ ಘೋಷಣೆಯಾಗಿದೆ. ಈ ಪೈಕಿ ಚನ್ನಪಟ್ಟಣ ಮಾಗಡಿ ಸಾಧಾರಣ ಹಾಗೂ ಕನಕಪುರ ರಾಮನಗರ ಹಾರೋಹಳ್ಳಿ ತೀವ್ರ ಬರಪೀಡಿತವಾಗಿವೆ. ಮುಂದೆ ಸರ್ಕಾರ ಜಾರಿಗೊಳಿಸುವ ಬರ ಪರಿಹಾರ ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವಲ್ಲಿ ಬೆಳೆ ಸಮೀಕ್ಷೆಯು ಮಹತ್ತರ ಪಾತ್ರ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.