ADVERTISEMENT

ಡಿ. 28ರಿಂದ ಬ್ರಾಹ್ಮಣ ಮಹಾಸಭಾ ರಾಜ್ಯಮಟ್ಟದ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 13:46 IST
Last Updated 11 ಡಿಸೆಂಬರ್ 2019, 13:46 IST
ಚನ್ನಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಮಯ್ಯ ಮಾತನಾಡಿದರು
ಚನ್ನಪಟ್ಟಣದ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ಮಯ್ಯ ಮಾತನಾಡಿದರು   

ಚನ್ನಪಟ್ಟಣ: ‘ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದರಾಜ್ಯಮಟ್ಟದ 10ನೇ ಸಮ್ಮೇಳನ ಡಿ. 28ರಿಂದ ಎರಡು ದಿನಗಳ ಕಾಲ ನಡೆಯಲಿದ್ದು, ರಾಮನಗರ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದವರು ಭಾರಗವಹಿಸಬೇಕು’ ಎಂದು ಮಹಾಸಭಾದ ರಾಜ್ಯ ಸಮಿತಿ ಸದಸ್ಯ ವಿ.ರಾಘವೇಂದ್ರ ಮಯ್ಯ ಮನವಿ ಮಾಡಿದ್ದಾರೆ.

ಇಲ್ಲಿನ ಕೋಟೆ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮ್ಮೇಳನವು ಕುಂದಾಪುರ ತಾಲ್ಲೂಕಿನ ಕೋಟೇಶ್ವರದ ಕಾಳಾವರ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಸಹಯೋಗದಲ್ಲಿ ನಡೆಯಲಿದೆ’ ಎಂದರು.

‘ಸಮ್ಮೇಳನದಲ್ಲಿ ವಿವಿಧ ವಿಚಾರ ಕುರಿತು ಗೋಷ್ಠಿ, ಸಾಧಕರಿಗೆ ಸನ್ಮಾನ, ವಿಪ್ರಶ್ರೀ ಪ್ರಶಸ್ತಿ ಪ್ರದಾನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾಜ್ಯದ ವಿವಿಧ ಭಾಗಗಳಿಂದ ಸುಮಾರು ಒಂದು ಲಕ್ಷ ಮಂದಿ ಸೇರುವ ನಿರೀಕ್ಷೆ ಇದೆ. ರಾಮನಗರ ಜಿಲ್ಲೆಯಿಂದ 2 ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಂಘಟಿಸುವ ಗುರಿ ಇದೆ’ ಎಂದರು.

ADVERTISEMENT

‘ಜಿಲ್ಲೆಯಿಂದ ಸಮ್ಮೇಳನಕ್ಕೆ ತೆರಳಲು ಇಚ್ಛಿಸುವ ಸಮಾಜದ ಬಂಧುಗಳು ತಾಲ್ಲೂಕು ಬ್ರಾಹ್ಮಣ ಮಹಾಸಭಾವನ್ನು ಸಂಪರ್ಕಿಸಿದಲ್ಲಿ ವಾಹನ ವ್ಯವಸ್ಥೆ ಕಲ್ಪಿಸಲಾಗುವುದು. ಸಮ್ಮೇಳನಕ್ಕೆ ಬರುವ ಎಲ್ಲರಿಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ತಿಳಿಸಿದರು.

ತಾಲ್ಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಂ.ಎನ್.ರಾಮಪ್ರಸಾದ್, ಪೇಟೆ ಈಶ್ವರ ದೇವಾಲಯದ ಪ್ರಧಾನ ಅರ್ಚಕ ರವೀಂದ್ರ ದೀಕ್ಷಿತ್, ಕೋಟೆ ಶ್ರೀರಾಘವೇಂದ್ರ ಗುರುಗಳ ಬೃಂದಾವನ ಸಮಿತಿ ಅಧ್ಯಕ್ಷೆ ಪಿ.ಎಸ್.ಜಯಲಕ್ಷ್ಮಮ್ಮ, ಜಂಟಿ ಕಾರ್ಯದರ್ಶಿ ಡಿ.ವೆಂಕಟೇಶ್ ಮೂರ್ತಿ, ತಾಲ್ಲೂಕು ಬ್ರಾಹ್ಮಣ ಸಭಾ ನಿರ್ದೇಶಕ ಕೆ.ಎಂ. ಮಧುಸೂಧನ್, ಎಂ.ಎಸ್.ನರಸಿಂಹ, ಸು.ನಾ.ನಂದ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.