
ರಾಮನಗರ: ‘ಎರಡೂವರೆ ವರ್ಷ ಪೂರೈಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಹಸ್ತಾಂತರ ಮಾಡುವುದಾದರೆ, ಮುಂದೆ ದಲಿತರನ್ನು ರಾಜ್ಯದ ಮುಖ್ಯಮಂತ್ರಿ ಮಾಡಬೇಕು. ಆ ಮೂಲಕ, ಕಾಂಗ್ರೆಸ್ ಪಕ್ಷವು ತನ್ನ ಸಾಂಪ್ರದಾಯಿಕ ಮತ ಬ್ಯಾಂಕ್ ಆಗಿರುವ ದಲಿತರ ಋಣ ತೀರಿಸಬೇಕು’ ಎಂದು ದಲಿತ ಮುಖಂಡ ಮತ್ತೀಕರೆ ಹನುಮಂತಯ್ಯ ಆಗ್ರಹಿಸಿದರು.
‘ಆರಂಭದಿಂದಲೂ ದಲಿತ ಸಮುದಾಯವು ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದೆ. ಪಕ್ಷದಿಂದ ಹೆಚ್ಚಿನ ಶಾಸಕರು ವಿಧಾನಸಭೆಗೆ ಆಯ್ಕೆಯಾದರೂ ರಾಜ್ಯದಲ್ಲಿ ಇದುವರೆಗೆ ಒಬ್ಬನೇ ಒಬ್ಬ ದಲಿತರನ್ನು ಮುಖ್ಯಮಂತ್ರಿ ಮಾಡಿಲ್ಲ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಪಕ್ಷದ ಹೈಕಮಾಂಡ್ ಈ ನಿಟ್ಟಿನಲ್ಲಿ ದಿಟ್ಟ ನಿರ್ಧಾರ ಕೈಗೊಳ್ಳಬೇಕು’ ಎಂದು ಪ್ರಗತಿಪರ ದಲಿತ ಮುಖಂಡರ ಬಳಗ ನಗರದ ಸ್ಫೂರ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
‘ದಲಿತ ಸಮುದಾಯದ ರಂಗನಾಥ್, ಬಸವಲಿಂಗಪ್ಪ, ಮಲ್ಲಿಕಾರ್ಜುನ ಖರ್ಗೆ, ಡಾ. ಜಿ. ಪರಮೇಶ್ವರ್ ಹಾದಿಯಾಗಿ ಹಲವ ನಾಯಕರು ಹಲವು ವರ್ಷಗಳಿಂದ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದಾರೆ. ಅತಿ ಹೆಚ್ಚು ಮತಗಳಿರುವ ನಮ್ಮ ಸಮುದಾಯದವರನ್ನು ಮುಖ್ಯಮಂತ್ರಿ ಹುದ್ದೆಗೆ ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಿದೆ. ಇದು ನಮ್ಮ ದೌರ್ಭಾಗ್ಯ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಡಾ. ಲೋಕೇಶ್ ಮೌರ್ಯ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಗಾಗ ತ್ಯಾಗದ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ ಅವರು ದಲಿತ ಸಮುದಾಯಕ್ಕಾಗಿ ಮುಖ್ಯಮಂತ್ರಿ ಸ್ಥಾನವನ್ನು ತ್ಯಾಗ ಮಾಡಬೇಕು’ಎಂದರು.
‘ದಲಿತ ಸಮುದಾಯವನ್ನು ಕಾಂಗ್ರೆಸ್ ಪಕ್ಷ ಕೇವಲ ಮತ ಬ್ಯಾಂಕ್ ಆಗಿ ನೋಡುತ್ತಿದೆ ಎಂಬ ಕಳಂಕವಿದೆ. ನಮ್ಮವರನ್ನು ಮುಖ್ಯಮಂತ್ರಿ ಮಾಡಿ ಈ ಕಳಂಕದಿಂದ ಮುಕ್ತರಾಗಲು ಇದು ಸಕಾಲ. ಇಲ್ಲದಿದ್ದರೆ ಸಮುದಾಯದ ಪ್ರತಿ ಮನೆ ಬಾಗಿಲಿಗೆ ತೆರಳಿ ಕಾಂಗ್ರೆಸ್ ಪಕ್ಷ ನಮಗೆ ವಂಚನೆ ಮಾಡಿದೆ. ಪಕ್ಷವನ್ನು ಇನ್ನೆಂದೂ ಬೆಂಬಲಿಸಬೇಡಿ ಎಂದು ಜಾಗೃತಿ ಮೂಡಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ. ಶಿವಶಂಕರ್, ಮುಖಂಡ ಸುಂದರೇಶ್ ಮಾತನಾಡಿ, ‘ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಾಲ್ವರು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿದ್ದೇವೆ. ಆದರೆ ಇಲ್ಲಿನ ಶಾಸಕರು ಕೇವಲ ಡಿ.ಕೆ. ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ. ನಮ್ಮ ಸಮುದಾಯದ ನಾಯಕರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.
ದಲಿತ ಮುಖಂಡರಾದ ಲೋಕೇಶ್ ಕೈಲಾಂಚ, ನಂಜುಂಡಯ್ಯ, ಕೆಂಗಲಯ್ಯ, ಪರಮೇಶ್, ವಿನಯ್, ಕೃಷ್ಣಯ್ಯ, ಪ್ರಸಾದ್, ಕೇಬಲ್ ನಂಜುಂಡಯ್ಯ, ನಿವೃತ್ತ ಸೈನಿಕರಾದ ರಾಜಶೇಖರ್, ಡಿಎಸ್‌ಎಸ್ ಸಂಚಾಲಕ ಶಿವಣ್ಣ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.