ADVERTISEMENT

ಕುದೂರಿನಲ್ಲಿ ದಲಿತ ಪರ ಒಕ್ಕೂಟದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2019, 14:31 IST
Last Updated 17 ಜೂನ್ 2019, 14:31 IST
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ದಲಿತಪರ ಒಕ್ಕೂಟದ ವತಿಯಿಂದ ಪ್ರತಾಪ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟಿಸಿದರು.
ಮಾಗಡಿ ತಾಲ್ಲೂಕಿನ ಕುದೂರಿನಲ್ಲಿ ದಲಿತಪರ ಒಕ್ಕೂಟದ ವತಿಯಿಂದ ಪ್ರತಾಪ್‌ ಮೇಲಿನ ಹಲ್ಲೆಯನ್ನು ಖಂಡಿಸಿ ಪ್ರತಿಭಟಿಸಿದರು.   

ಕುದೂರು(ಮಾಗಡಿ): ಅಸ್ಪೃಶ್ಯತೆ ಸಮಾಜದ ಒಂದು ಕಳಂಕ. ಅದನ್ನು ತೊಡೆದು ಹಾಕದಿದ್ದಲ್ಲಿ ದೇಶದ ಪ್ರಗತಿ ಅಸಾಧ್ಯ ಎಂದು ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ತೊರೆರಾಮನಹಳ್ಳಿ ನರಸಿಂಹಮೂರ್ತಿ ತಿಳಿಸಿದರು.

ಹೋಬಳಿ ಶಾಖೆವತಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಕಬ್ಬೆಕಟ್ಟೆಯಲ್ಲಿ ದಲಿತ ಯುವಕ ಪ್ರತಾಪ್‌ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದನ್ನು ವಿರೋಧಿಸಿ ಸೋಮವಾರ ನಾಡಕಚೇರಿ ಮುಂದೆ ನಡೆದ ಪ್ರತಿಭಟನಾ ಧರಣಿ ನಿರತರನ್ನು ಕುರಿತು ಮಾತನಾಡಿದರು.

ಅಸ್ಪೃಶ್ಯತೆ ಆಚರಣೆ ಕಳಂಕ ಎಂದು ಸಂವಿಧಾನದಲ್ಲಿ ನಿರೂಪಿಸಲಾಗಿದೆ. ಸವರ್ಣೀಯರಲ್ಲಿ ಕೆಲವರು, ತಮ್ಮ ಮನಸ್ಸಿನಲ್ಲಿ ಇರುವ ಅಸಮಾನತೆಯನ್ನು ಆಗಾಗ್ಗೆ ಹೊರಹಾಕಲು ಅಮಾಯಕ ದಲಿತರನ್ನು ಬಲಿ ತೆಗೆದುಕೊಳ್ಳುತ್ತಿರುವುದನ್ನು ಇನ್ನೆಷ್ಟು ದಿನ ಸಹಿಸಬೇಕು. ಸಂವಿಧಾನದ ಆಶಯಗಳಾದ ಸಮಾನತೆ, ಸೌಹಾರ್ಧತೆಗಳಿಗೆ ಬೆಲೆಕೊಡದೆ ಇರುವ ರಾಜ್ಯಾಂಗ ವಿರೋಧಿಗಳನ್ನು ದೇಶದ್ರೋಹಿಗಳು ಎಂದು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.

ADVERTISEMENT

ಪ್ರತಾಪ್‌ ಮೇಲೆ ನಡೆದ ತೀವ್ರ ಹಲ್ಲೆಯನ್ನು ಕೆಲವು ಮಾದ್ಯಮಗಳು ತಿರುಚುತ್ತಿರುವುದು ಈ ನಾಡಿನ ದುರಂತವೇ ಸರಿ. ದಲಿತರ ಮೇಲೆ ದೌರ್ಜನ್ಯ ನಡೆಸಿದ ತರತಮವಾದಿಗಳನ್ನು ರಾಜ್ಯದಿಂದಲೇ ಗಡಿಪಾರು ಮಾಡಬೇಕು. ಘಟನೆಯನ್ನು ತಡೆಗಟ್ಟುವಲ್ಲಿ ವಿಫಲರಾಗಿರುವ ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಯನ್ನು ಅಮಾನತುಗೊಳಿಸಬೇಕು ಎಂದರು.

ಅಂಬೇಡ್ಕರ್‌ ಸೇನೆ ರಾಜ್ಯ ಘಟಕದ ಅಧ್ಯಕ್ಷ ತೋಟದ ಮನೆ ಗಿರೀಶ್‌ ಮಾತನಾಡಿ, ಮನುಷ್ಯರನ್ನು ಸಮಾನತೆಯಿಂದ ಕಾಣದಿದ್ದರೆ, ಆ ನಾಡಿನೆ ಏಳಿಗೆಯಾಗುವುದಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರ ಆದರ್ಶಗಳನ್ನು ಎಲ್ಲಾ ಸಮುದಾಯದ ಯುವಕರು ಮೈಗೂಡಿಸಿಕೊಂಡು ಈ ದೇಶದ ಮೂಲನಿವಾಸಿಗಳಾದ ದಲಿತರ ಮೇಲೆ ಹಲ್ಲೆ ನಡೆಸುವುದನ್ನು ಖಂಡಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಚೌಡಪ್ಪ, ಮುಖಂಡರಾದ ಸುಗ್ಗನಹಳ್ಳಿ ಕುಮಾರ್‌, ಶಿವಪ್ಪ ಕಬ್ಬೆಕಟ್ಟೆ ಮಾತನಾಡಿದರು. ಕುದೂರು ಗ್ರಾಮದ ಬೀದಿಗಳನ್ನು ಮೆರವಣಿಗೆ ನಡೆಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.