ರಾಮನಗರ: ತಾಲ್ಲೂಕಿನ ಸುಗ್ಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಸಂದ್ರದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿರುವ ಮಾಯಮ್ಮ ದೇವಿ ಮತ್ತು ಬಸವೇಶ್ವರ ದೇವಾಲಯಗಳಿಗೆ ಗ್ರಾಮದ ಪರಿಶಿಷ್ಟ ಸಮುದಾಯದವರು ತಹಶೀಲ್ದಾರ್ ತೇಜಸ್ವಿನಿ ನೇತೃತ್ವದಲ್ಲಿ ಸೋಮವಾರ ಪ್ರವೇಶಿಸಿದರು. ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಗ್ರಾಮದಲ್ಲಿರುವ ಒಕ್ಕಲಿಗ ಸಮುದಾಯದವರು ಪರಿಶಿಷ್ಟರಿಗೆ ದೇವಾಲಯಕ್ಕೆ ಪ್ರವೇಶ ನೀಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಪಿ. ಪುನೀತ್ ರಾಜ್ ಅವರು ತಹಶೀಲ್ದಾರ್, ಸಮಾಜ ಕಲ್ಯಾಣ ಇಲಾಖೆ ಹಾಗೂ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ (ಡಿಸಿಆರ್‌ಇ) ಜೂನ್ 14ರಂದು ದೂರು ಕೊಟ್ಟಿದ್ದರು.
ದೂರಿನ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಪೊಲೀಸರು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರೊಂದಿಗೆ ಗ್ರಾಮಕ್ಕೆ ಬೆಳಿಗ್ಗೆ ಭೇಟಿ ನೀಡಿದ ತಹಶೀಲ್ದಾರ್, ಗ್ರಾಮದಲ್ಲಿ ಎರಡೂ ಸಮುದಾಯದವರ ಜೊತೆ ಶಾಂತಿಸಭೆ ನಡೆಸಿದರು. ಈ ವೇಳೆ, ಒಕ್ಕಲಿಗ ಸಮುದಾಯದ ಬೆರಳೆಣಿಕೆಯ ಮಂದಿ ಮಾತ್ರ ಇದ್ದರು.
ಸಭೆ ಬಳಿಕ ಅರ್ಚಕರನ್ನು ಕರೆಯಿಸಿ ದೇವಾಲಯದ ಬಾಗಿಲು ತೆಗೆಸಿದ ತಹಶೀಲ್ದಾರ್, ಪರಿಶಿಷ್ಟರಿಗೆ ಒಳಕ್ಕೆ ಪ್ರವೇಶ ಕಲ್ಪಿಸಿದರು. ಇನ್ನು ಮುಂದೆ ಯಾರೇ ಬಂದರೂ ಪ್ರವೇಶಕ್ಕೆ ಅಡ್ಡಿಪಡಿಸದೆ ದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಯಾವುದೇ ತಾರತಮ್ಯ ಮಾಡದೆ ಎಲ್ಲರೂ ಸೌಹಾರ್ದ ಮತ್ತು ಸಹಬಾಳ್ವೆಯಿಂದ ಬದುಕಬೇಕು. ಅಸ್ಪೃಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
‘ಗ್ರಾಮದ ದೇವಾಲಯದಲ್ಲಿ ಜೂನ್ 16 ಮತ್ತು 17ರಂದು ಅಗ್ನಿಕೊಂಡ ಜಾತ್ರಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು. ಆದರೆ, ದೇವರಿಗೆ ದಲಿತರು ತೆಂಬಿಟ್ಟು ಆರತಿ ತರಬಾರದು ಮತ್ತು ಜಾತ್ರೆಗೆ ಪ್ರತಿ ಮನೆಯವರು ₹500 ಕೊಡಬೇಕು ಎಂದು ಒಕ್ಕಲಿಗರು ತಾಕೀತು ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ, ಸಂಬಂಧಪಟ್ಟ ಇಲಾಖೆಗಳಿಗೆ ದೂರು ಕೊಟ್ಟಿದ್ದೆ. ಅಧಿಕಾರಿಗಳು ಇಂದು ಗ್ರಾಮಕ್ಕೆ ಭೇಟಿ ನೀಡಿದರು. ಕಡೆಗೂ ಸ್ವಾತಂತ್ರ್ಯ ಬಂದು 78 ವರ್ಷಗಳ ಬಳಿಕ ಗ್ರಾಮದ ಪರಿಶಿಷ್ಟರು ದೇವಾಲಯ ಪ್ರವೇಶಿಸುವಂತಾಯಿತು’ ಎಂದು ಪುನೀತ್ ರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಡಾ. ಕುಮಾರ್, ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಮೇಶ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಚಲುವರಾಜು, ರಾಮಕೃಷ್ಣಯ್ಯ, ರಮೇಶ್, ದಲಿತ ಮುಖಂಡ ಗುಡ್ಡೆ ವೆಂಕಟೇಶ್, ಕಂದಾಯ ಇಲಾಖೆ, ಡಿಸಿಆರ್‌ಇ, ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಇತರರು ಇದ್ದರು.
ಲಕ್ಕಸಂದ್ರ ಗ್ರಾಮದಲ್ಲಿ ಪರಿಶಿಷ್ಟರಿಗೆ ದೇವಾಲಯಕ್ಕೆ ಪ್ರವೇಶ ನಿರಾಕರಣೆಗೆ ಸಂಬಂಧಿಸಿದಂತೆ ಎರಡೂ ಸಮುದಾಯದವರ ಜೊತೆ ಶಾಂತಿಸಭೆ ನಡೆಸಿ ದೇವಾಲಯಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು
– ತೇಜಸ್ವಿನಿ ತಹಶೀಲ್ದಾರ್ ರಾಮನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.