ADVERTISEMENT

ಜೈಲಿಗೆ ಕಳಿಸಿದರೆ ಬುದ್ಧಿ ಬರುತ್ತೆ: ನ್ಯಾ. ಫಣೀಂದ್ರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 2:15 IST
Last Updated 6 ಜುಲೈ 2025, 2:15 IST
<div class="paragraphs"><p>ದುಸ್ಥಿತಿ ತಲುಪಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹ ಹಾಗೂ ಇತರರು ಇದ್ದಾರೆ‌</p></div>

ದುಸ್ಥಿತಿ ತಲುಪಿರುವ ಚನ್ನಪಟ್ಟಣದ ಶೆಟ್ಟಿಹಳ್ಳಿ ಕೆರೆಗೆ ಉಪ ಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಭೇಟಿ ನೀಡಿದರು. ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್, ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹ ಹಾಗೂ ಇತರರು ಇದ್ದಾರೆ‌

   

ಚನ್ನಪಟ್ಟಣ: ‘ಅಧಿಕಾರಿಗಳ ನಿಷ್ಕ್ರಿಯತೆಯನ್ನು ನಾನು ಸಹಿಸುವುದಿಲ್ಲ. ಸರ್ಕಾರಿ ಕೆಲಸ ಮಾಡಲು ಲಂಚ ಪಡೆಯುವ ಅಧಿಕಾರಿಗಳನ್ನು ಸುಮ್ಮನೆ ಬಿಡುವುದಿಲ್ಲ. ಅಂತಹವರನ್ನು ನೇರವಾಗಿ ಜೈಲಿಗೆ ಕಳಿಸಿದರೆ ಆಗ ಬುದ್ಧಿ ಬರುತ್ತದೆ’ ಎಂದು ಉಪ ಲೋಕಾಯಕ್ತ ನ್ಯಾ. ಕೆ.ಎನ್. ಫಣೀಂದ್ರ ಎಚ್ಚರಿಕೆ ನೀಡಿದರು.

ತಾಲ್ಲೂಕಿನ ಏಳು ಕೆರೆಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಜನರು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಬೇಕು. ಮೊದಲಿಗೆ ಜಿಲ್ಲಾ ಎಸ್‌ಪಿ ಅವರು ಪ್ರಾಥಮಿಕ ತನಿಖೆ ನಡೆಸಿ, ನಂತರ ದೂರು ದಾಖಲಿಸಿಕೊಂಡು ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಾರೆ’ ಎಂದರು.

ADVERTISEMENT

‘ಪಟ್ಟಣದೊಳಗಿರುವ ಶೆಟ್ಟಿಹಳ್ಳಿ ಕೆರೆ ಮತ್ತು ಕುಡಿನೀರು ಕಟ್ಟೆ ಕೆರೆಗೆ ನಿರಂತವಾಗಿ ಕೊಳಚೆ ಹರಿದಿರುವುದರಿಂದ ಮಲಿನವಾಗಿವೆ. ಸಾಂಕ್ರಾಮಿಕ ರೋಗಗಳು ಹರಡುವ ತಾಣವಾಗಿ ಕೆರೆಗಳು ಬದಲಾಗಿವೆ. ನಗರಸಭೆಯವರು ಕೆರೆಗಳ ನಿರ್ವಹಣೆಯಲ್ಲಿ ವಿಫಲವಾಗಿರುವುದು ಇದಕ್ಕೆ ಕಾರಣ. ಅವರೇ ಕೆರೆ ಒಡಲಿಗೆ ಕಸ ತಂದು ಸುರಿಯುತ್ತಿರುವ ಕುರಿತು ಸ್ಥಳೀಯರು ದೂರಿದ್ದಾರೆ’ ಎಂದು ಹೇಳಿದರು.

‘ಕೆರೆ ಒತ್ತುವರಿ ತೆರವಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವ ಮಾಹಿತಿ ಇದೆ. ಆದರೆ, ತಡೆಯಾಜ್ಞೆ ತೆರವಿಗೆ ಅಧಿಕಾರಿಗಳು ಮುಂದಾಗಿಲ್ಲ.ಕೂಡಲೇ ತಡೆಯಾಜ್ಞೆ ತೆರವಿಗೆ ಕ್ರಮ ವಹಿಸುವಂತೆ ಸೂಚನೆ ನೀಡಲಾಗಿದೆ. ಕುಡಿನೀರುಕಟ್ಟೆ, ರಾಮಮ್ಮನ ಕೆರೆಗಳೂ ಸಹ ಮಲಿನವಾಗಿವೆ. ಕೆರೆ ದಂಡೆಯಲ್ಲಿ ಸುರಿದಿರುವ ತ್ಯಾಜ್ಯ ತೆವಿಗೆ ಹದಿನೈದು ದಿನ ಗಡುವು ನೀಡಲಾಗಿದೆ. ಈ ಕುರಿತು ಯೋಜನಾ ನಿರ್ದೇಶಕರು ಮೇಲ್ವಿಚಾರಣೆ ನಡೆಸಬೇಕು’ ಎಂದು ಸೂಚಿಸಿದರು.

‘ಮಲಿನಗೊಂಡಿರುವ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಅವಕಾಶ ನೀಡಬಾರದು. ಇದರಿಂದ ಮೀನು ಸೇವಿಸುವವರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕುರಿತು ಪರಿಶೀಲನೆ ನಡೆಸಿ ಎಂದು ಪರಿಸರ ಮಾಲಿನ್ಯ ನಿಯಂತ್ರ ಮಂಡಳಿ ಹಾಗೂ ಮೀನುಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದೇನೆ’ ಎಂದರು.

‘ತಾಲ್ಲೂಕಿನಲ್ಲಿ ಹರಿಯುವ ಕಣ್ವ ನದಿ ದಂಡೆಯೂ ಒತ್ತುವರಿಗೆ ಒಳಗಾಗಿದೆ. ಇಲ್ಲೂ ಕಸ ತಂದು ಸುರಿದಿರುವುದನ್ನು ಗಮನಿಸಿದ್ದೇನೆ. ನದಿ ಪಾತ್ರದುದ್ದಕ್ಕೂ ಗಿಡಗಂಟಿಗಳು ಬೆಳೆದು ನಿಂತಿದ್ದು, ನದಿಯೇ ಇಲ್ಲವೇನೊ ಎಂಬಂತ ಪರಿಸ್ಥಿತಿ ಕೆಲವೆಡೆ ಇದೆ. ನದಿ ಪಾತ್ರವನ್ನು ಸಹ ಸ್ವಚ್ಛಗೊಳಿಸಿ ನದಿ ಸೌಂದರ್ಯ ಹೆಚ್ಚಿಸಬೇಕು. ಅಲ್ಲಿಗೂ ಕೊಳಚೆ ಹರಿಯದಂತೆ ಎಚ್ಚರಿಕೆ ವಹಿಸಬೇಕಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಹಾಗೂ ಲೋಕಾಯುಕ್ತ ಎಸ್‌ಪಿ ಪಿ.ವಿ. ಸ್ನೇಹ ಇದ್ದರು.

ಪಟ್ಟಣದಲ್ಲಿ ಯುಜಿಡಿ ಕಾಮಗಾರಿಯೇ ನಡೆದಿಲ್ಲದಿರುವುದು ಕೆರೆಗಳಿಗೆ ಕೊಳಚೆ ಹರಿಯಲು ಪ್ರಮುಖ ಕಾರಣ. ಒಳಚರಂಡಿ ಕಾಮಗಾರಿಗೆ ಅನುದಾನಕ್ಕೆ ಬೇಡಿಕೆ ಸಲ್ಲಿಸಿರುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಈ ಕುರಿತು ಸರ್ಕಾರಕ್ಕೆ ವರದಿ ನೀಡುವೆ
ನ್ಯಾ. ಕೆ.ಎನ್. ಫಣೀಂದ್ರ ಉಪ ಲೋಕಾಯುಕ್ತ
ಶೆಟ್ಟಿಹಳ್ಳಿ ಕೆರೆ ದುಸ್ಥಿತಿ: ಪೌರಾಯುಕ್ತಗೆ ತರಾಟೆ
‘ನಗರಕ್ಕೆ ಹೊಂದಿಕೊಂಡಿರುವ ಶೆಟ್ಟಿಹಳ್ಳಿ ಕೆರೆಯನ್ನು ಸ್ವಚ್ಛ ಮತ್ತು ಸುಂದರವಾಗಿಡಲಾಗದ ನಿಮಗೆ ಏನ್ರಿ ದೊಡ್ಡರೋಗ ಬಂದಿರೋದು. ಕೆರೆಗೆ ತ್ಯಾಜ್ಯ ನೀರು ಬಿಡುವ ಜೊತೆಗೆ ಕಸ ತಂದು ಸುರಿಯುತ್ತಿದ್ದೀರಿ. ಕೆರೆ ಒತ್ತುವರಿ ತೆರವಿಗೆ ಏನು ಕ್ರಮ ಕೈಗೊಂಡಿದ್ದೀರಿ? ಸುಮಾರು ಎರಡೂವರೆ ಎಕರೆ ಒತ್ತುವರಿಯಾಗಿದ್ದರೂ ಸುಮ್ಮನಿದ್ದೀರಿ. ಒತ್ತುವರಿದಾರರಿಗೆ ಖಾತೆ ಮಾಡಿಕೊಟ್ಟಿದ್ದೀರಿ’ ಎಂದು ನಗರಸಭೆ ಪೌರಾಯುಕ್ತ ಮಹೇಂದ್ರ ಅವರನ್ನು ನ್ಯಾ. ಫಣೀಂದ್ರ ತರಾಟೆಗೆ ತೆಗೆದುಕೊಂಡರು. ಇದೇ ವೇಳೆ ಸ್ಥಳೀಯರು ನಗರಸಭೆಯವರೇ ಕೆರೆಯನ್ನು ಮುಚ್ಚಿದ್ದಾರೆ ಎಂದು ದೂರಿದರು. ಆಗ ಮತ್ತಷ್ಟು ಕೆಂಡಾಮಂಡಲವಾದ ಉಪ ಲೋಕಾಯುಕ್ತ ‘ಎರಡು ತಿಂಗಳೊಳಗೆ ಒತ್ತುವರಿ ತೆರವು ಸ್ವಚ್ಛತೆಗೆ ಕ್ರಮ ಕೈಗೊಂಡು ಕೆರೆಯನ್ನು ಸುಸ್ಥಿತಿಗೆ ತನ್ನಿ. ಇಲ್ಲದಿದ್ದರೆ ಕ್ರಮ ಎದುರಿಸಲು ಸಿದ್ದರಾಗಿರಿ’ ಎಂದು ಎಚ್ಚರಿಕೆ ನೀಡಿದರು. ಒತ್ತುವರಿ ಕೆರೆಯೊಡಲಿಗೆ ತ್ಯಾಜ್ಯ ತಂದು ಸುರಿಯುವುದು ಸೇರಿದಂತೆ ವಿವಿಧ ಸಮಸ್ಯೆಗಳ ಕೂಪವಾಗಿರುವ ಶೆಟ್ಟಿಹಳ್ಳಿ ಕೆರೆ ದುಸ್ಥಿತಿ ಕುರಿತು ‘ಪ್ರಜಾವಾಣಿ’ಯು ಜುಲೈ 1ರಂದು ವಿಶೇಷ ವರದಿ ಪ್ರಕಟಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.