ADVERTISEMENT

ಹುಬ್ಬಳ್ಳಿಯಿಂದ ರಾಮನಗರಕ್ಕೆ ಬಂದ ವಜ್ರದ ಗಣೇಶ!

₹5.5 ಲಕ್ಷದಲ್ಲಿ ತಯಾರಿಸಿದ ಗಣೇಶ ಮೂರ್ತಿ; ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯಿಂದ ಪ್ರತಿಷ್ಠಾಪನೆ

ಓದೇಶ ಸಕಲೇಶಪುರ
Published 27 ಆಗಸ್ಟ್ 2025, 5:09 IST
Last Updated 27 ಆಗಸ್ಟ್ 2025, 5:09 IST
ವಜ್ರಲೇಪಿತ ಗಣೇಶ ಮೂರ್ತಿ
ವಜ್ರಲೇಪಿತ ಗಣೇಶ ಮೂರ್ತಿ   

ರಾಮನಗರ: ಗೌರಿ–ಗಣೇಶ ಹಬ್ಬದ ಪ್ರಯುಕ್ತ ನಗರವು ವೈವಿಧ್ಯಮಯ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ಸಲವೂ ವಿವಿಧೆಡೆ ಬಗೆಬಗೆಯ ವಿನ್ಯಾಸ, ಅಲಂಕಾರದ ಗಣೇಶ ಮೂರ್ತಿಗಳು ಗಮನ ಸೆಳೆಯಲಿವೆ. ಅದರಲ್ಲೂ, ಈ ಸಲ ಹುಬ್ಬಳ್ಳಿಯಿಂದ ಬಂದಿರುವ ವಜ್ರದ ಗಣೇಶ ನಗರದ ಪ್ರಮುಖ ಆಕರ್ಷಣೆಯಾಗಲಿದೆ.

ನಗರದ ಐಜೂರಿನ ನೇತಾಜಿ ಪಾಪ್ಯುಲರ್ ಸ್ಕೂಲ್ ಬಳಿಯ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪ್ರತಿಷ್ಠಾಪನೆ ಮಾಡುತ್ತಿರುವ ಈ ಗಣೇಶ ಮೂರ್ತಿಯ ಬೆಲೆ ಬರೋಬ್ಬರಿ ₹5.5 ಲಕ್ಷ! ಹುಬ್ಬಳ್ಳಿಯ ಬಮ್ಮಾಪುರ ಓಣಿಯ ಕಲಾವಿದ ಮಹೇಶ ಮುರಗೋಡ ಅವರ ಕುಟುಂಬ ಪ್ರತಿ ವರ್ಷ ತಯಾರಿಸುವ ದುಬಾರಿ ಗಣೇಶ ಮೂರ್ತಿ ಈ ಸಲ ರಾಮನಗರದಲ್ಲಿ ಪ್ರತಿಷ್ಠಾಪನೆಯಾಗುತ್ತಿರುವುದು ವಿಶೇಷ.

ಅಮೆರಿಕನ್ ವಜ್ರ ಬಳಕೆ: ಮೂರು ಅಡಿ ಎತ್ತರದ 50 ಕೆ.ಜಿ ತೂಕದ ಜೇಡಿಮಣ್ಣಿನ ಗಣೇಶ ಮೂರ್ತಿಗೆ ಅಮೆರಿಕದಿಂದ ತರಿಸಿರುವ ಒಂಬತ್ತು ಬಗೆಯ ರಂಗುರಂಗಿನ 4 ಲಕ್ಷ ವಜ್ರಗಳನ್ನು ಲೇಪನ ಮಾಡಲಾಗಿದೆ. ಇದಕ್ಕಾಗಿ ಮಹೇಶ ಅವರ ಕುಟುಂಬ ಒಂದೂವರೆ ತಿಂಗಳು ಶ್ರಮಿಮಿಸಿದೆ. ಅಂದಹಾಗೆ, ಈ ಕುಟುಂಬ ನಾಲ್ಕು ತಲೆಮಾರಿನಿಂದ ವಿವಿಧ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿದೆ.

ADVERTISEMENT

‘ಹನ್ನೊಂದು ವರ್ಷಗಳಿಂದ ಗಣೇಶೋತ್ಸವ ಆಚರಿಸುತ್ತಿರುವ ನಮ್ಮ ಮಂಡಳಿ ಈ ಸಲ ವಿಶೇಷವಾದ ಮೂರ್ತಿ ಪ್ರತಿಷ್ಠಾಪಿಸಲು ನಿರ್ಧರಿಸಿದೆವು. ಅದಕ್ಕಾಗಿ, ಹುಬ್ಬಳ್ಳಿಯಲ್ಲಿ ತಯಾರಿಸುವ ವಜ್ರಲೇಪಿತ ಗಣೇಶ ಮೂರ್ತಿಗೆಎರಡು ತಿಂಗಳ ಹಿಂದೆಯೇ ಆರ್ಡರ್ ಕೊಟ್ಟಿದ್ದೆವು’ ಎಂದು ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಅಧ್ಯಕ್ಷ ಹರ್ಷವರ್ಧನ ಹೇಳಿದರು.

ಆನೆ ಅಂಬಾರಿಯಲ್ಲಿ ಮೆರವಣಿಗೆ: ‘ಗಣೇಶೋತ್ಸವವನ್ನು ₹20 ಲಕ್ಷ ವೆಚ್ಚದಲ್ಲಿ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ. ಮೂರ್ತಿ ಪ್ರತಿಷ್ಠಾಪನೆಗೆ ವಿಶೇಷ ಮಂಟಪ ನಿರ್ಮಿಸಲಾಗಿದೆ. 9 ದಿನಗಳು ವಿಶೇಷ ಪೂಜೆ ಜರುಗಲಿದೆ. ವಿಸರ್ಜನೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಯಲಿದ್ದು, ತಿಪಟೂರಿನ ನೊಣವಿನಕೆರೆ ಮಠದಿಂದ ಆನೆ ಮತ್ತು ಅಂಬಾರಿ ತರಿಸಿ ಮೂರ್ತಿಯನ್ನು ಮೆರವಣಿಗೆ ಮಾಡಲಾಗುವುದು’ ಎಂದು ತಿಳಿಸಿದರು.

ಹಲವು ವರ್ಷಗಳಿಂದ ಬೆಂಗಳೂರಿನ ಯುವಕ ಮಂಡಳದವರು ವಜ್ರದ ಮೂರ್ತಿಗೆ ಆರ್ಡರ್ ಕೊಟ್ಟು ಮಾಡಿಸಿಕೊಳ್ಳುತ್ತಿದ್ದರು. ಈ ಸಲ ರಾಮನಗರದ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿಯವರು ಬಂದು ಮೂರ್ತಿಯನ್ನು ಮಾಡಿಸಿಕೊಂಡು ಹೋಗಿದ್ದಾರೆ. ಮೂರ್ತಿಗೆ ಲೇಪಿಸಲು ಬೇಕಿದ್ದ 4 ಲಕ್ಷ ವಜ್ರಗಳನ್ನು ಮುಂಬೈನಿಂದ ತರಿಸಿ ಕೊಟ್ಟಿದ್ದಾರೆ.

ವಜ್ರಲೇಪಿತ ಗಣೇಶ ಮೂರ್ತಿಯೊಂದಿಗೆ ರಾಮನಗರದ ಐಜೂರಿನ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಪದಾಧಿಕಾರಿಗಳು
ವಜ್ರಲೇಪಿತ ಗಣೇಶ ಮೂರ್ತಿಗೆ ₹5.5 ಲಕ್ಷ ವೆಚ್ಚವಾಗಿದೆ. ಈ ಸಲ ಸುಮಾರು ₹20 ಲಕ್ಷ ವೆಚ್ಚದಲ್ಲಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಮೆರವಣಿಗೆ ಮಾಡಿ ಕೆರೆಯಲ್ಲಿ ವಿಸರ್ಜಿಸಲಾಗುವುದು
ಹರ್ಷವರ್ಧನ ಅಧ್ಯಕ್ಷ ನಾಡಪ್ರಭು ಕೆಂಪೇಗೌಡ ಮಿತ್ರ ಮಂಡಳಿ ಐಜೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.