ಕನಕಪುರ: ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರ ವಾಸ್ತವ್ಯಕ್ಕೆ ಅನುಕೂಲವಾಗಲಿ ಎಂಬ ಘನ ಉದ್ದೇಶದಿಂದ ಅಲ್ಲಿ ಶಿಕ್ಷಕರಿಗಾಗಿಯೇ, ಎಂಟು ವರ್ಷಗಳ ಹಿಂದೆ ಸರ್ಕಾರದ ವತಿಯಿಂದ ವಸತಿ ಗೃಹಗಳನ್ನು ನಿರ್ಮಿಸಲಾಗಿತ್ತು. ಆದರೆ, ಶಿಕ್ಷಕರಿಗೆ ಸೂರಾಗಬೇಕಿದ್ದ ಆ ವಸತಿ ಗೃಹಗಳು ಇದೀಗ ಬಳಕೆಯಾಗದೆ ಪಾಳುಬಿದ್ದ ಸ್ಥಿತಿಗೆ ತಲುಪಿದೆ.
ಕನಕಪುರ ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ರಾಂಪುರದೊಡ್ಡಿ ಗ್ರಾಮದಲ್ಲಿರುವ ಶಿಕ್ಷಕರ ವಸತಿ ಗೃಹದ (ಗುರು ಭವನ) ಸ್ಥಿತಿ ಇದು. 2016ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ₹50 ಲಕ್ಷ ವೆಚ್ಚದಲ್ಲಿ ಈ ವಸತಿ ಗೃಹಗಳನ್ನು ನಿರ್ಮಿಸಲಾಗಿದೆ. ಹಿಂದಿನ ಸಂಸದ ಡಿ.ಕೆ. ಸುರೇಶ್ ಅವರಿಂದ ಉದ್ಘಾಟನೆಗೊಂಡಿದ್ದ ಕಟ್ಟಡದ ಚಾವಣಿ ಸೋರುತ್ತಿದೆ. ಕಿಟಕಿ ಗಾಜು ಒಡೆದಿದ್ದು, ಬಾಗಿಲುಗಳು ಗೆದ್ದಲು ತಿಂದಿವೆ.
ಕನಕಪುರ ತಾಲ್ಲೂಕು ಪಕ್ಕದ ತಮಿಳುನಾಡು ರಾಜ್ಯದೊಂದಿಗೆ ಗಡಿ ಹಂಚಿಕೊಂಡಿದೆ. ಕಾವೇರಿ ವನ್ಯಜೀವಿಧಾಮ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವೂ ಚಾಚಿಕೊಂಡಿರುವ ತಾಲ್ಲೂಕು ಜಿಲ್ಲೆಯಲ್ಲೇ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿದೆ. ಹಾಗಾಗಿ, ಸಾರಿಗೆ ಬಸ್ ಸಂಪರ್ಕವೂ ಇಲ್ಲದ ಗಡಿಯಂಚಿಗೆ ಹೊಂದಿಕೊಂಡಿರುವ ಹಲವು ಕುಗ್ರಾಮಗಳಿವೆ.
3 ಕಡೆ ವಸತಿ ಗೃಹ: ತಾಲ್ಲೂಕು ಕೇಂದ್ರದಿಂದ ಬಹಳ ದೂರವಿರುವ ಗ್ರಾಮಗಳ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಸ್ಥಳೀಯವಾಗಿ ವಾಸವಾಗಿರಲು ಬಾಡಿಗೆಗೆ ಮನೆಗಳು ಸಿಗುವುದಿಲ್ಲ. ತಾಲ್ಲೂಕು ಕೇಂದ್ರದಲ್ಲಿ ಉಳಿದುಕೊಂಡರೆ, ನಿತ್ಯ ಓಡಾಡಲು ಬಸ್ ವ್ಯವಸ್ಥೆಯೂ ಸಮಯಕ್ಕೆ ಸರಿಯಾಗಿ ಇರುವುದಿಲ್ಲ. ಈ ಕಾರಣಕ್ಕೆ ಶಿಕ್ಷಕರಿಗಾಗ ಮೂರು ಕಡೆ ವಸತಿ ಗೃಹಗಳನ್ನು ನಿರ್ಮಿಸಿದೆ.
ಅದರಲ್ಲಿ ಕೋಡಿಹಳ್ಳಿ ಹೋಬಳಿಯ ರಾಂಪುರದೊಡ್ಡಿ, ಸಾತನೂರು ಹೋಬಳಿಯ ಸಾತನೂರು ಹಾಗೂ ಕಸಬಾ ಹೋಬಳಿಯ ಚಿಕ್ಕಮುದುವಾಡಿಯಲ್ಲಿ ಗೃಹಗಳನ್ನು ನಿರ್ಮಿಸಲಾಗಿದೆ. ಈ ಪೈಕಿ, ಸಾತನೂರು ಮತ್ತು ಚಿಕ್ಕಮುದುವಾಡಿ ವಸತಿ ಗೃಹಗಳು ಮಾತ್ರ ಬಳಕೆಯಾಗುತ್ತಿವೆ. ಚಿಕ್ಕಮುದುವಾಡಿ ಗೃಹಗಳತ್ತ ಯಾರೂ ತಿರುಗಿ ನೋಡುತ್ತಿಲ್ಲ. ಅಂದ ಹಾಗೆ ಇಲ್ಲಿಂದ 30 ಕಿ.ಮೀ. ದೂರದಲ್ಲಿ ರಾಜ್ಯದ ಗಡಿ ಭಾಗವಿದೆ.
‘ಸಾತನೂರು ಹೋಬಳಿ ಕೇಂದ್ರದಲ್ಲಿರುವ ಶಿಕ್ಷಕರ ವಸತಿ ಗೃಹ ಚನ್ನಾಗಿದೆ. ಸುತ್ತಲೂ ಕಾಂಪೌಂಡ್ ನಿರ್ಮಾಣವಾಗಿ ಅಗತ್ಯ ಮೂಲಸೌಕರ್ಯ ಒದಗಿಸಿರುವುದರಿಂದ ಇಲ್ಲಿ 8 ಕುಟುಂಬಗಳು ವಾಸಿಸುತ್ತಿವೆ. ನಮ್ಮ ಸ್ವಂತ ಮನೆಯ ರೀತಿಯಲ್ಲಿ ನಾವು ಇಲ್ಲಿ ವಾಸಿಸುತ್ತಿದ್ದೇವೆ’ ಎಂದು ವಸತಿ ಗೃಹದಲ್ಲಿ ವಾಸವಾಗಿರುವ ಅಚ್ಚಲು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಚಂದ್ರಕಾಂತ ದೊಡ್ಮನಿ ‘ಪ್ರಜಾವಾಣಿ’ಗೆ ತಿಳಿಸಿದರು.
8 ಕುಟುಂಬಕ್ಕೆ ವ್ಯವಸ್ಥೆ: ನೆಲ ಮಹಡಿ ಮತ್ತು ಮೊದಲನೇ ಮಹಡಿ ಒಳಗೊಂಡಿರುವ ಈ ವಸತಿ ಗೃಹಗಳಲ್ಲಿ ತಲಾ 4 ಮನೆಗಳಂತೆ, 8 ಮನೆಗಳಿವೆ. ಅಂದರೆ ಎಂಟು ಕುಟುಂಬಗಳ ವಾಸ್ತವ್ಯಕ್ಕೆ ಅವಕಾಶವಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಈ ಗೃಹಗಳನ್ನು ಪಡೆಯಲು ಅವಕಾಶವಿದೆ.
ಸರ್ಕಾರವು ಶಿಕ್ಷಕರಿಗೆ ನೀಡುವ ಮನೆ ಭತ್ಯೆಯನ್ನು (ಎಚ್‌ಆರ್‌ಎ) ವಸತಿ ಗೃಹಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗೆ ವರ್ಗಾವಣೆ ಮಾಡುತ್ತದೆ. ಆದರೆ, ರಾಂಪುರದೊಡ್ಡಿಯಲ್ಲಿ ನಿರ್ಮಿಸಿರುವ ವಸತಿ ಗೃಹವು ನಿರ್ಜನ ಪ್ರದೇಶ ಮತ್ತು ಸುತ್ತಲೂ ಅರಣ್ಯ ಇರುವುದರಿಂದ, ಸುತ್ತಲೂ ಕಾಂಪೌಂಡ್ ನಿರ್ಮಿಸದಿರುವುದರಿಂದ ಹಾಗೂ ಮೂಲಸೌಕರ್ಯಗಳ ಕೊರತೆ ಕಾರಣಕ್ಕೆ ಬಳಕೆಯಾಗುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಬೇರೆಡೆ ಕಡೆ ವಾಸ: ತಾಲ್ಲೂಕಿನ ಕೊಳಗೊಂಡನಹಳ್ಳಿ, ಹುಣಸನಕೋಡಿಹಳ್ಳಿ, ಬನ್ನಿ ಮುಕ್ಕೋಡ್ಲು, ಆಲ್ಕುಳಿ, ಪಿಳ್ಳೆಗೌಡನದೊಡ್ಡಿ, ಶಿವನೇಗೌಡನದೊಡ್ಡಿ, ಯಲವನಾಥ, ಅಡಕಡಬೂರು, ಕಾಡುಶಿವನಹಳ್ಳಿ ಗ್ರಾಮಗಳು ರಾಜ್ಯದ ಗಡಿ ಗ್ರಾಮಗಳಾಗಿವೆ. ತಾಲ್ಲೂಕು ಕೇಂದ್ರವಾದ ಕನಕಪುರದಿಂದ ಸುಮಾರು 35–40 ಕಿಲೋಮೀಟರ್ ದೂರದಲ್ಲಿವೆ.
ಈ ಗ್ರಾಮಗಳ ಸರ್ಕಾರಿ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಶಿಕ್ಷಕರು ಕನಕಪುರದಿಂದ ಓಡಾಡುತ್ತಿದ್ದಾರೆ. ಇವರಿಗೆ ವಸತಿಗೃಹದ ಅವಶ್ಯಕತೆ ಇದೆ. ಆದರೆ, ಹೋಬಳಿ ಕೇಂದ್ರವಾದ ಕೋಡಿಹಳ್ಳಿ ಅಥವಾ ತಾಲ್ಲೂಕು ಕೇಂದ್ರವಾದ ಕನಕಪುರದಲ್ಲಿ ಬಾಡಿಗೆ ಮನೆ ಪಡೆದು ವಾಸ ಮಾಡುತ್ತಿದ್ದಾರೆ. ಇದರಿಂದ ತಮ್ಮ ಮಕ್ಕಳ ಶಿಕ್ಷಣಕೂ ಅನುಕೂಲವಾಗುತ್ತದೆ ಎಂಬ ಕಾರಣಕ್ಕೆ ಯಾರೂ ವಸತಿ ಗೃಹಕ್ಕೆ ಹೋಗಲು ಇಚ್ಛಿಸುತ್ತಿಲ್ಲ ಎನ್ನುತ್ತಾರೆ ಕೆಲ ಶಿಕ್ಷಕರು.
ಅಂದಹಾಗೆ, ಕಟ್ಟಡ ನಿರ್ಮಾಣ ಮಾಡಿದ ಮೇಲೆ ಅದನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿ, ಅದರ ನಿರ್ವಹಣೆ ಜವಾಬ್ದಾರಿಯನ್ನು ಸ್ಥಳೀಯ ಗ್ರಾಮ ಪಂಚಾಯಿತಿಗೆ ವಹಿಸಬೇಕಿತ್ತು. ಆದರೆ, ಆ ಕೆಲಸ ಇದುವರೆಗೆ ಆಗದಿರುವುದೇ ವಸತಿ ಗೃಹವು ಬಳಕೆಗೆ ಬಾರದ ಸ್ಥಿತಿ ನಿರ್ಮಾಣವಾಗಲು ಕಾರಣ ಎಂಬ ಮಾತುಗಳು ಅಧಿಕಾರಿಗಳ ಮಟ್ಟದಲ್ಲಿ ಕೇಳಿ ಬರುತ್ತಿದೆ. ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯಿತಿ ಈ ಕುರಿತು ಗಮನ ಹರಿಸಿದರೆ, ವಸತಿ ಗೃಹಗಳು ಅನುಪಯುಕ್ತವಾಗಿ ಪಾಳುಬೀಳದೆ ಬಳಕೆಗೆ ಮುಕ್ತವಾಗುತ್ತವೆ.
‘ಹಿಂದೆ ಶಿಕ್ಷಕರ ಬಳಿ ವಾಹನಗಳಿರಲಿಲ್ಲ. ಬಸ್ ವ್ಯವಸ್ಥೆಯೂ ಉತ್ತಮವಾಗಿರಲಿಲ್ಲ. ಅಂದು ವಸತಿಗೃಹಗಳ ಅವಶ್ಯಕತೆ ಇತ್ತು. ಇಂದು ಪರಿಸ್ಥಿತಿ ಬದಲಾಗಿದೆ. ಮಕ್ಕಳ ಶಿಕ್ಷಣದ ಕಾರಣಕ್ಕೆ ನಗರದಲ್ಲಿ ವಾಸಿಸಲು ಇಚ್ಚಿಸುತ್ತಾರೆ. ಆದರೂ ಗುಣಮಟ್ಟದ ವಸತಿಗೃಹಗಳು ಸಿಕ್ಕರೆ ತಂಗುತ್ತಾರೆ’ ಎಂದು ತಾಲ್ಲೂಕು ಸಹ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಟಿ.ವಿ.ಎನ್. ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.
ಕೆಲ ದಿನಗಳ ಹಿಂದೆಯಷ್ಟೇ ಇಲ್ಲಿಗೆ ವರ್ಗಾವಣೆಯಾಗಿ ಬಂದಿರುವೆ. ಶಿಕ್ಷಕರ ವಸತಿ ಗೃಹ ಬಳಕೆಯಾಗದೆ ಶಿಥಿಲಾವಸ್ಥೆ ತಲುಪಿರುವ ಮಾಹಿತಿ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮೇಲಧಿಕಾರಿಗಳ ಗಮನಕ್ಕೆ ತಂದು ಬಳಕೆಗೆ ಕ್ರಮ ಕೈಗೊಳ್ಳಲಾಗುವುದುಸಿ. ಮತ್ತಿಗೌಡ ಕ್ಷೇತ್ರ ಶಿಕ್ಷಣಾಧಿಕಾರಿ ಕನಕಪುರ
ಸದ್ಯ ಪಾಳುಬಿದ್ದಿರುವ ವಸತಿಗೃಹಗಳ ಕಟ್ಟಡವನ್ನು ಸಂಬಂಧಪಟ್ಟವರು ದುರಸ್ತಿ ಮಾಡಿ ಶಿಕ್ಷಕರು ಉಳಿಯಲು ಬೇಕಾಗದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಿ. ಆಗ ಅಗತ್ಯವಿರುವ ಶಿಕ್ಷಕರು ಬಂದು ಉಳಿಯುತ್ತಾರೆನೇರ ಪ್ರಭಾಕರ್ ಅಧ್ಯಕ್ಷ ತಾಲ್ಲೂಕು ಪ್ರಾಥಮಿಕ ಶಾಲೆ ಶಿಕ್ಷಕರ ಸಂಘ ಕನಕಪುರ
‘ರಾಂಪುರದೊಡ್ಡಿ ಗ್ರಾಮದಲ್ಲಿ ನಿರ್ಮಾಣ ಮಾಡಿರುವ ಶಿಕ್ಷಕರ ವಸತಿ ಗೃಹಗಳ ಕಟ್ಟಡವನ್ನು ಗ್ರಾಮ ಪಂಚಾಯಿತಿಗೆ ಹಸ್ತಾಂತರ ಮಾಡಿಲ್ಲ. ಅದರ ನಿರ್ವಹಣೆ ಜವಾಬ್ದಾರಿಯನ್ನು ಸಹ ನಮಗೆ ನೀಡಿಲ್ಲ. ಕಟ್ಟಡವು ಈಗಾಗಲೇ ಸಂಪೂರ್ಣ ಹಾಳಾಗಿದೆ. ಅದನ್ನು ದುರಸ್ತಿ ಮಾಡಿಸಿ ನಿರ್ವಹಣೆಯ ಜವಾಬ್ದಾರಿಯನ್ನು ನಮಗೆ ನೀಡಿದರೆ ನಾವು ಅಗತ್ಯವಿರುವ ಶಿಕ್ಷಕರಿಗೆ ವಸತಿ ಗೃಹಗಳನ್ನು ನೀಡಿ ನಿರ್ವಹಣೆ ಮಾಡುತ್ತೇವೆ’ ಎಂದು ಅರೆಕೆರೆ ಗ್ರಾಮ ಪಂಚಾಯಿತಿಯ ಪ್ರಭಾರ ಪಿಡಿಒ ವೆಂಕಟರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ಶಿಕ್ಷಕರ ವಸತಿ ಗೃಹಗಳ ಕಟ್ಟಡವನ್ನು ನಿರ್ಮಾಣ ಮಾಡಿದ ಮೇಲೆ ಅದನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಇಲಾಖೆಯವರೇ ಹಸ್ತಾಂತರ ಮಾಡಿಕೊಳ್ಳಲು ಆಸಕ್ತಿ ತೋರಲಿಲ್ಲ. ಹಾಗಾಗಿ ಕಟ್ಟಡ ಹಾಗೆಯೇ ಉಳಿದಿದೆ. ಬಳಕೆ ಮಾಡದ ಕಾರಣ ಹಾಳಾಗಿದೆ. ಈಗಲೂ ಶಿಕ್ಷಣ ಇಲಾಖೆಯವರು ಕಟ್ಟಡವನ್ನು ಹಸ್ತಾಂತರಿಸುವಂತೆ ಕೇಳಿದರೆ ಮತ್ತು ಶಿಕ್ಷಕರು ಅಲ್ಲಿ ಉಳಿಯುತ್ತಾರೆಂದು ಖಾತರಿಪಡಿಸಿದರೆ ದುರಸ್ತಿ ಮಾಡಿ ಕಟ್ಟಡವನ್ನು ಹಸ್ತಾಂತರಿಸುತ್ತೇವೆ’ ಎಂದು ನಿರ್ಮಿತಿ ಕೇಂದ್ರದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘2016ರಲ್ಲಿ ಶಿಕ್ಷಕರ ವಸತಿ ಗೃಹವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ಆಗ ಇಲ್ಲಿ ಶಿಕ್ಷಕರು ಉಳಿದುಕೊಂಡಿದ್ದರೆ ಸರಿಯಾಗಿ ಬಸ್ ಸಂಪರ್ಕ ವ್ಯವಸ್ಥೆ ಆಸ್ಪತ್ರೆ ಹಾಗೂ ಅಂಗಡಿಗಳ ವ್ಯವಸ್ಥೆ ಇರಲಿಲ್ಲ. ಕಟ್ಟಡದ ಸುತ್ತಲೂ ಕಾಂಪೌಂಡ್ ಇಲ್ಲದೆ ಮೂಲಸೌಕರ್ಯಗಳ ಕೊರತೆ ಇತ್ತು. ಹಾಗಾಗಿ ಇಲ್ಲಿಗೆ ಯಾವ ಶಿಕ್ಷಕರು ಬರಲು ಆಸಕ್ತಿ ತೋರಲಿಲ್ಲ. ಈಗ ಸಂಪೂರ್ಣ ಹಾಳಾಗಿದೆ. ಅದನ್ನು ಪೂರ್ಣಪ್ರಮಾಣದಲ್ಲಿ ದುರಸ್ತಿ ಮಾಡಿ ಸೌಕರ್ಯ ಕೊಟ್ಟರೆ ಶಿಕ್ಷಕರು ಬರಲು ಬಯಸುತ್ತಾರೆ’ ಎಂದು ಕೋಡಿಹಳ್ಳಿ ಹೋಬಳಿಯ ಸಿಆರ್‌ಪಿ ಹೇಮಂತ್‌ಕುಮಾರ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.