ADVERTISEMENT

ಭಕ್ತಿ–ಭಾವದ ದಿಂಡಿ ಮಹೋತ್ಸವ

ಗಮನ ಸೆಳೆದ ಪಾಂಡುರಂಗ, ರುಕ್ಮಿಣಿ ಉತ್ಸವ ಮೂರ್ತಿ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 18:35 IST
Last Updated 29 ಜುಲೈ 2025, 18:35 IST
ರಾಮನಗರದ ಭಾವಸಾರ ಕ್ಷತ್ರಿಯ ಸಮಾಜದಿಂದ ಪಾಂಡುರಂಗ ಹಾಗೂ ರುಕ್ಮಿಣಿಯ ಎರಡನೇ ವರ್ಷದ ದಿಂಡಿ ಮಹೋತ್ಸವದ ಪ್ರಯುಕ್ತ ದೇವರ ಮೂರ್ತಿಗಳನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು
ರಾಮನಗರದ ಭಾವಸಾರ ಕ್ಷತ್ರಿಯ ಸಮಾಜದಿಂದ ಪಾಂಡುರಂಗ ಹಾಗೂ ರುಕ್ಮಿಣಿಯ ಎರಡನೇ ವರ್ಷದ ದಿಂಡಿ ಮಹೋತ್ಸವದ ಪ್ರಯುಕ್ತ ದೇವರ ಮೂರ್ತಿಗಳನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು   

ರಾಮನಗರ: ನಗರದಲ್ಲಿರುವ ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಪಾಂಡುರಂಗ ಹಾಗೂ ರುಕ್ಮಿಣಿಯ ಎರಡನೇ ವರ್ಷದ ದಿಂಡಿ ಮಹೋತ್ಸವನ್ನು ಭಕ್ತಿ–ಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಶ್ರೀ ರಾಮ ಕಲ್ಯಾಣ ಮಂಟಪದಲ್ಲಿ ಇಬ್ಬರ ಉತ್ಸವ ಮೂರ್ತಿಗಳನ್ನು ಸ್ಥಾಪಿಸಿ ಧಾರ್ಮಿಕ ವಿವಿಧ ಕೈಂಕರ್ಯಗಳನ್ನು ನೆರವೇರಿಸಲಾಯಿತು.

ಮಹೋತ್ಸವದ ಹಿನ್ನೆಲೆಯಲ್ಲಿ ಶನಿವಾರ ಸಂಜೆ ಪೋತಿ ಸ್ಥಾಪನೆ ಮಾಡಲಾಯಿತು. ಈ ಭಜನೆ ಕಾರ್ಯಕ್ರಮ ಜರುಗಿತು. ಭಾನುವಾರ ಬೆಳಗ್ಗೆ 6 ಗಂಟೆಗೆ ವಿವಿಧ ಪೂಜೆ ವಿಧಿ –ವಿಧಾನಗಳು ಜರುಗಿದು. ವಾರ್ಕರೆಗಳು ಕಾಕಡಾರತಿ ಮಾಡಿದರು. ಬಳಿಕ ಬನ್ನಿ ಮಹಾಂಕಾಳಿ ದೇವಾಲಯದ ಪ್ರಧಾನ ಆರ್ಚಕ ವಿನಯ್‍ಕುಮಾರ್ ಶಾಸ್ತ್ರಿ ನೇತೃತ್ವದಲ್ಲಿ ಅಭಿಷೇಕ ಕಾರ್ಯಕ್ರಮ ನಡೆಯಿತು.

ಮೂರ್ತಿಗಳಿಗೆ ವಿಶೇಷ ಅಲಂಕಾರದ ಬಳಿಕ ವೀಣಾಕರಿ ಸೇರಿದಂತೆ 30ಕ್ಕೂ ಹೆಚ್ಚು ವಾರ್ಕರೆಗಳು ಪಾಂಡುರಂಗ ಸ್ವಾಮಿಯ ಭಜನೆಯನ್ನು ನಡೆಸಿಕೊಟ್ಟರು. ಮಧ್ಯಾಹ್ನ ಮಹಾಮಂಗಳಾರತಿ ನಡೆಸಲಾಯಿತು. ನಂತರ, ಭಕ್ತರಿಗೆ ತೀರ್ಥ ಮತ್ತು ಪ್ರಸಾದವನ್ನು ವಿತರಿಸಲಾಯಿತು.

ADVERTISEMENT

ವಿಶೇಷ ಪೂಜೆ ಬಳಿಕ, ದೇವರ ಮೂರ್ತಿಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ರಾಮ ದೇವಾಲಯದ ಆವರಣದಿಂದ ಶುರುವಾದ ಮೆರವಣಿಗೆ ಅಗ್ರಹಾರ, ಚಾಮುಂಡೇಶ್ವರಿ ದೇವಾಲಯ, ಎಂ.ಜಿ. ರಸ್ತೆ, ಮುಖ್ಯರಸ್ತೆ ಹಾದು ಛತ್ರದ ಬೀದಿ ಮುಖಾಂತರ ಮತ್ತೆ ದೇವಾಲಯವನ್ನು ತಲುಪಿತು.

ಮೆರವಣಿಗೆ ವೇಳೆ ದೇವಾಲಯಗಳ ಮುಂಭಾಗ ವೀಣಾಕರಿ ಹಾಗೂ ವಾರ್ಕರೆಗಳು ದೇವರುಗಳಿಗೆ ಅಭಂಗ್ ಸಮರ್ಪಿಸಿ ಆರತಿ ಸಮರ್ಪಿಸಿದರು. ಮೆರವಣಿಗೆಯುದ್ದಕ್ಕು ವಾರ್ಕರೆಗಳು ಭಜನೆ ಹಾಡುತ್ತಾ, ಹೆಜ್ಜೆ ಹಾಕಿದರು. ದೇವರ ಮೂರ್ತಿಗಳನ್ನು ಕಂಡ ಕೆಲ ಸಾರ್ವಜನಿಕರು ಪೂಜೆ ಸಲ್ಲಿಸಿದರು. ಉಳಿದವರು ಮೂರ್ತಿಗಳನ್ನು ವೀಕ್ಷಿಸಿ ಖುಷಿಪಟ್ಟರು.

ಬೆಂಗಳೂರಿನ ಯಶವಂತಪುರ ಭಾವಸಾರ ಕ್ಷತ್ರಿಯ ಸಮಾಜದ ದೇವೇಂದ್ರಕುಮಾರ್(ಬಾಬು ರಾವ್) ವೀಣಾಕರಿಯಾಗಿ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಅವರ ನೇತೃತ್ವದಲ್ಲಿ 30 ವಾರ್ಕರೆಗಳು ಭಜನೆ ನಡೆಸಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ವೃಂದ ನೃತ್ಯ ಶಾಲೆ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್ ರಾವ್ ಪಿಸ್ಸೆ, ಮಹಾಸಭಾ ಮಂಡ್ಯ ಉಪಾಧ್ಯಕ್ಷ ರಾಜೇಂದ್ರ(ಪಾಪಣ್ಣಿ), ಮೈಸೂರಿನ ಮುಖಂಡ ಉಂಡಾಳೆ ಚನ್ನಪಟ್ಟಣ ಹಾಗೂ ಮಾಗಡಿ ಭಾವಸಾರ ಕ್ಷತ್ರಿಯ ಸಮಾಜದ ಮುಖಂಡರು ಆಗಮಿಸಿದ್ದರು.

ಕಾರ್ಯಕ್ರಮದಲ್ಲಿ ರಾಮನಗರ ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಗಣೇಶ್ ರಾವ್, ಉಪಾಧ್ಯಕ್ಷ ಕಿರಣ್ ರಾವ್ ಬಾಂಬೊರೆ, ಕಾರ್ಯದರ್ಶಿ ಮಂಜುನಾಥ್ ಬಾಂಬೊರೆ, ಖಜಾಂಚಿ ಮಧುಸೂಧನ್ ರಾವ್ ಬಾಂಬೊರೆ, ಹಿರಿಯ ಮುಖಂಡರಾದ ನಾಗರಾಜ್ ರಾವ್ ಬಾಂಬೊರೆ, ನಂಜುಂಡ ರಾವ್ ಪಿಸ್ಸೆ, ಉಮೇಶ್ ರಾವ್ ಜಿಂಗಾಡೆ, ಮಹಿಳಾ ಮುಖಂಡರಾದ ಲತಾ ಜಿಂಗಾಡೆ, ರೇಖಾ ಕುಮಾರ್, ರಾಜೇಶ್ವರಿ ಬಾಯಿ, ಸುಪ್ರಿಯಾ ಹಾಗೂ ಇತರರು ಇದ್ದರು.

ದಿಂಡಿ ಮಹೋತ್ಸವದ ಪ್ರಯುಕ್ತ ಪಾಂಡುರಂಗ ಮತ್ತು ರುಕ್ಮಿಣಿ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.