ADVERTISEMENT

ನಕಲಿ ಕರಪತ್ರ ಹಂಚಿ ಅಪಪ್ರಚಾರ

ಕನಕಪುರ: ಯುವ ಮುಖಂಡ ಗೌತಮ್‌ ಎಂ.ಗೌಡ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 14:01 IST
Last Updated 10 ಮಾರ್ಚ್ 2020, 14:01 IST
ಹಾರೋಹಳ್ಳಿ ಪಬ್ಲಿಕ್‌ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜಕೀಯ ಮುಖಂಡರು
ಹಾರೋಹಳ್ಳಿ ಪಬ್ಲಿಕ್‌ ಶಾಲೆಯಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ರಾಜಕೀಯ ಮುಖಂಡರು   

ಕನಕಪುರ: 'ರಾಜಕೀಯವಾಗಿ ಅಂಬೆಗಾಲು ಇಡುತ್ತಿರುವ ನನಗೆ ಮಸಿ ಬಳಿಯುವ ದುರುದ್ದೇಶದಿಂದ ಕಿಡಿಗೇಡಿಗಳು ಷಡ್ಯಂತರ ರೂಪಿಸಿ ನನ್ನ ಹೆಸರಿನಲ್ಲಿ ನಕಲಿ ಕರಪತ್ರಗಳನ್ನು ಹಂಚಿ ಅಪಪ್ರಚಾರ ಮಾಡಿದ್ದಾರೆ’ ಎಂದು ಯುವ ಮುಖಂಡ ಗೌತಮ್‌ ಎಂ.ಗೌಡ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ ಹಿರಿಯ ಮುಖಂಡ ಮರಿಲಿಂಗೇಗೌಡ ಅವರ ಪುತ್ರನಾದ ನನ್ನ ತೇಜೋವಧೆಗೆ ಇಳಿದಿರುವ ಕೆಲವರು, ಅರುಣಾಚಲೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಮಲ್ಲಪ್ಪ ಅವರನ್ನು ಓಲೈಸುವ ಕರಪತ್ರವನ್ನು ಮುದ್ರಿಸಿ ಹಾರೋಹಳ್ಳಿಯಲ್ಲಿ ಹಂಚಿದ್ದಾರೆ’ ಎಂದು ಗಂಭೀರ ಆರೋಪ ಮಾಡಿದರು.

‘ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದಿದ್ದೇನೆ. ಇಂಗ್ಲೆಂಡ್‌ನಲ್ಲಿ ವಿದ್ಯಾಭ್ಯಾಸ ಮುಗಿಸಿದ ಮೇಲೆ ತಾಯ್ನಾಡಿನಲ್ಲಿ ಕೆಲಸ ಮಾಡಬೇಕೆಂಬ ಉದ್ದೇಶದಿಂದ ವಾಪಸ್‌ ಇಲ್ಲಿಗೆ ಬಂದು ಜನರ ಸೇವೆ ಹಾಗೂ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ದೈವ ಭಕ್ತನಾಗಿದ್ದು ಅರುಣಾಚಲೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಕೆಲಸದಲ್ಲೂ ವೈಯಕ್ತಿಕವಾಗಿ ತೊಡಗಿದ್ದೇನೆ’ ಎಂದು ಹೇಳಿದರು.

ADVERTISEMENT

‘ಹಾರೋಹಳ್ಳಿ ತಾಲ್ಲೂಕು ರಚನೆ ಮತ್ತು ಕಾಸಾಯಿಖಾನೆ ವಿರೋಧಿ ಹೋರಾಟ ಸಮಿತಿಯಲ್ಲೂ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದೇನೆ. ರಾಜಕೀಯವಾಗಿ ಸಣ್ಣವನು. ಹಿರಿಯ ನಾಯಕರಾದ ಎಚ್‌.ಡಿ.ಕುಮಾರ‍ಸ್ವಾಮಿ, ಡಿ.ಕೆ.ಶಿವಕುಮಾರ್‌, ಪಿ.ಜಿ.ಆರ್‌.ಸಿಂಧ್ಯ, ಸಿ.ಪಿ.ಯೋಗೇಶ್ವರ್‌, ಎಸ್‌.ರವಿ ಅವರ ಬಗ್ಗೆ ಮಾತನಾಡುವಷ್ಟು ಶಕ್ತಿ ನನಗಿಲ್ಲ’ ಎಂದು ತಿಳಿಸಿದರು.

‘ಸುಳ್ಳು ವದಂತಿ ಹಾಗೂ ಅಪಪ್ರಚಾರದಿಂದ ಮಾನಸಿಕವಾಗಿ ಘಾಸಿಗೊಂಡಿದ್ದೇನೆ. ಈಕೃತ್ಯ ಎಸಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಬೇಕೆಂದು’ ಪೊಲೀಸರಿಗೆ ದೂರು ನೀಡಿರುವುದಾಗಿ ಹೇಳಿದರು.

ಅರುಣಾಚಲೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಂ.ಮಲ್ಲಪ್ಪ ಮಾತನಾಡಿ, ‘ಕೂಲಿ ಮಾಡುತ್ತಿದ್ದ ದಲಿತ ಕುಟುಂಬದಿಂದ ಬಂದವನು ನಾನು. ಹಾರೋಹಳ್ಳಿಯಲ್ಲಿ ಎಲ್ಲ ಸಮುದಾಯದವರೊಂದಿಗೆ ಪ್ರೀತಿ –ವಿಶ್ವಾಸದಿಂದ ಬದುಕುತ್ತಿದ್ದೇನೆ. ಎಲ್ಲರ ಸಹಕಾರಿಂದ ದೇವಾಲಯದ ಜೀರ್ಣೋದ್ಧಾರ ಸಮಿತಿ ಜವಾಬ್ದಾರಿ ಹೊತ್ತಿದ್ದೇನೆ. ಮರಿಲಿಂಗೇಗೌಡರು ರಾಜಕೀಯವಾಗಿ ಹಿರಿಯ ಮುಖಂಡರು. ಅವರ ಪುತ್ರ ಗೌತಮ್‌ 6ತಿಂಗಳ ಹಿಂದಷ್ಟೇ ಪರಿಚಯವಾಗಿ ದೇವಸ್ಥಾನ ಅಭಿವೃದ್ಧಿ ಕೆಲಸದಲ್ಲಿ ಕೈಜೋಡಿಸಿದ್ದಾರೆ. ದಲಿತನಾದ ನನ್ನ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಅಪಪ್ರಚಾರದ ವ್ಯೂಹ ರಚಿಸಿದ್ದಾರೆ’ ಎಂದು ದೂರಿದರು.

ಮುಖಂಡರರಾದ ಡಿ.ಎಸ್‌.ಭುಜಂಗಯ್ಯ, ಈರೇಗೌಡ, ಕೆ.ಎನ್.ರಾಮು, ಗೋದೂರು ಶಿವಣ್ಣ, ಮಾದೇವ, ವಕೀಲ ಚಂದ್ರಶೇಖರ್‌, ಶಿವಣ್ಣ, ತಿಮ್ಮಪ್ಪ, ಸೋಮಶೇಖರ್‌, ಶಿವಾನಂದ, ಶಿವನಂಜಪ್ಪ, ಶಿವರುದ್ರಯ್ಯ, ಅಂಕಪ್ಪ, ಶಿವಕುಮಾರ್‌, ಪುರುಷೋತ್ತಮ್‌, ಮದಹೇವ, ನರಸಿಂಹಯ್ಯ, ಶಿವಕುಮಾರ್‌, ಜ್ಙಾನೇಶ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.