ADVERTISEMENT

ಆನೆ ದಾಳಿ: ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2019, 12:41 IST
Last Updated 22 ಮಾರ್ಚ್ 2019, 12:41 IST
ಹೊಸದೊಡ್ಡಿ ಗ್ರಾಮದಲ್ಲಿ ಆನೆಗಳು ರೈತರ ಮಾವಿನ ಮರ ನಾಶ ಮಾಡಿರುವುದು
ಹೊಸದೊಡ್ಡಿ ಗ್ರಾಮದಲ್ಲಿ ಆನೆಗಳು ರೈತರ ಮಾವಿನ ಮರ ನಾಶ ಮಾಡಿರುವುದು   

ರಾಮನಗರ: ಕಾಡಿನೊಳಗೆ ಆಹಾರ, ನೀರಿನ ಕೊರತೆಯಿಂದಾಗಿ ವನ್ಯಜೀವಿಗಳು ನಾಡಿಗೆ ಲಗ್ಗೆ ಇಡುತ್ತಿವೆ. ತಾಲ್ಲೂಕಿನ ಹೊಸದೊಡ್ಡಿ ಗ್ರಾಮದಲ್ಲಿ ಐದು ಆನೆಗಳ ಹಿಂಡು ದಾಂದಲೆ ನಡೆಸಿ ರೈತರ ಫಸಲು, ನೀರಾವರಿ ಪೈಪ್ ಗಳನ್ನು ನಾಶಪಡಿಸಿವೆ.

ಬೆಟ್ಟದ ಬಾಣಂತಮಾರಮ್ಮ ಅರಣ್ಯ ಪ್ರದೇಶದಿಂದ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ತೆಂಗಿನಕಲ್ಲು ಅರಣ್ಯ ಸೇರಿದ್ದ ಆನೆಗಳು ಅರಣ್ಯದಿಂದ ಗುರುವಾರ ರಾತ್ರಿ ಹೊರಬಂದು ಜಮೀನುಗಳತ್ತ ಹೆಜ್ಜೆ ಇಟ್ಟವು. ಹೊಸದೊಡ್ಡಿ ಗ್ರಾಮದ ಯೋಗೇಶ್, ಕಾಡೇಗೌಡ, ಚಂದ್ರೇಗೌಡ, ಅಪ್ಪಾಜಣ್ಣ, ಸತೀಶ್ ಎಂಬ ರೈತರ ಮಾವಿನ ಮರಗಳು, ತೆಂಗಿನಮರಗಳು, ಬೋರ್‍ವೆಲ್ ಪರಿಕರ, ನೀರಿನ ಪೈಪುಗಳನ್ನು ನಾಶಪಡಿಸಿದವು.

ಕಟಾವಿಗೆ ಬರುತ್ತಿರುವ ಮಾವಿನ ಮರಗಳ ನಾಶದಿಂದಾಗಿ ರೈತರಿಗೆ ಹೆಚ್ಚು ನಷ್ಟವಾಗಿದೆ. ಅರಣ್ಯಾಧಿಕಾರಿಗಳು ಆನೆಗಳ ಉಪಟಳ ತಡೆಯಬೇಕು. ಆಗಿರುವ ಬೆಳೆ ನಷ್ಟಕ್ಕೆ ಸೂಕ್ತ ವೈಜ್ಞಾನಿಕ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ADVERTISEMENT

ಅಧಿಕಾರಿಗಳ ಭೇಟಿ: ಸ್ಥಳಕ್ಕೆ ಧಾವಿಸಿದ ಚನ್ನಪಟ್ಟಣ ತಾಲ್ಲೂಕು ವಲಯ ಅರಣ್ಯ ಅಧಿಕಾರಿ ಮಹಮ್ಮದ್ ಮನ್ಸೂರ್ ಮತ್ತು ತೆಂಗಿನಕಲ್ಲು ಉಪ ವಲಯ ಅರಣ್ಯಾಧಿಕಾರಿ ಚಂದ್ರಾನಾಯಕ್ ಮತ್ತು ಸಿಬ್ಬಂದಿ ರೈತರಿಗೆ ಆಗಿರುವ ಬೆಳೆನಷ್ಟದ ಮಾಹಿತಿ ಕಲೆಹಾಕಿದರು. ಅರಣ್ಯ ಇಲಾಖೆಯಿಂದ ಅವಶ್ಯ ಪರಿಹಾರದ ಭರವಸೆ ನೀಡಿದರು. ಆನೆಗಳನ್ನು ಅವುಗಳ ಸ್ವಸ್ಥಾನ ಸೇರಿಸುವುದಾಗಿಯೂ ಹೇಳಿದರು.

ಉಪಟಳ ಹೆಚ್ಚಳ: ಬೇಸಿಗೆಯಿಂದಾಗಿ ಅರಣ್ಯ ಪ್ರದೇಶದಲ್ಲಿ ವನ್ಯಜೀವಿಗಳಿಗೆ ಆಹಾರದ ತೀವ್ರ ಕೊರತೆ ಎದುರಾಗಿದೆ. ಕಾಡಿನಲ್ಲಿ ಅಗತ್ಯ ಪ್ರಮಾಣದಲ್ಲಿ ಹಸಿರು ಮೇವು ಹಾಗೂ ನೀರು ಲಭ್ಯವಿಲ್ಲದೇ ಇರುವುದು ಆನೆಗಳು ನಾಡಿನತ್ತ ಮುಖ ಮಾಡಲು ಕಾರಣವಾಗಿದೆ.

ಈಚೆಗಷ್ಟೇ ನಾಲ್ಕು ಕಾಡಾನೆಗಳ ಹಿಂಡು ಆಹಾರ ಹರಸಿ ತೆಂಗಿನಕಲ್ಲು ಅರಣ್ಯದಿಂದ ಹೊರಬಂದು ದಾರಿತಪ್ಪಿ ಕೂನಗಲ್‌ ಬೆಟ್ಟ ಏರಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದವು. ಆನೆಗಳ ದಾಳಿಯಿಂದ ಭಯಭೀತರಾಗಿರುವ ರೈತರು ಜಮೀನುಗಳಿಗೆ ರಾತ್ರಿ ನೀರು ಹಾಯಿಸಲು ತೆರಳಲು ಆತಂಕ ಪಡುತ್ತಿದ್ದಾರೆ. ತೆಂಗಿನಕಲ್ಲು– ಹಂದಿಗುಂದಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಜಮೀನುಗಳ ರೈತರು ಬೆಳೆ ನಷ್ಟ ಅನುಭವಿಸುತ್ತಲೇ ಇದ್ದಾರೆ. ಮಾವಿನ ಸುಗ್ಗಿಯ ಕಾಲದಲ್ಲಿ ಮರಗಳು ಹಾಳಾಗುತ್ತಿರುವುದು ಬೆಳೆಗಾರರನ್ನು ಚಿಂತೆಗೀಡು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.