ರಾಮನಗರ ತಾಲ್ಲೂಕಿ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಒತ್ತುವರಿ ಮಾಡಿಕೊಂಡಿರುವ ಜಮೀನಿನ ತೆರವು ಕಾರ್ಯಾಚರಣೆ ಸ್ಥಳಕ್ಕೆ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಹಶೀಲ್ದಾರ್ ತೇಜಸ್ವಿನಿ ಅವರೊಂದಿಗೆ ಭೇಟಿ ನೀಡಿದರು
ಪ್ರಜಾವಾಣಿ ಚಿತ್ರ
ರಾಮನಗರ: ತಾಲ್ಲೂಕಿನ ಕೇತಗಾನಹಳ್ಳಿಯಲ್ಲಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 11 ಮಂದಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನಿನ ತೆರವು ಕಾರ್ಯಾಚರಣೆಯು ಒತ್ತುವರಿದಾರರ ಅನುಪಸ್ಥಿತಿಯಲ್ಲೇ ಮಂಗಳವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯಿತು. ಬೆಳಿಗ್ಗೆಯಿಂದ ಸಂಜೆವರೆಗೆ ಕಾರ್ಯಾಚರಣೆ ನಡೆದರೂ ಯಾರೂ ಸ್ಥಳದತ್ತ ಸುಳಿಯಲಿಲ್ಲ.
ಗ್ರಾಮದ ಸರ್ವೆ ನಂಬರ್ 7, 8, 9, 16/32 ಹಾಗೂ 79ರಲ್ಲಿ ಜಮೀನು ಹೊಂದಿರುವ 11 ಮಾಲೀಕರು ಮಾಡಿಕೊಂಡಿದ್ದ 11 ಎಕರೆ 23 ಗುಂಟೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬೆಳಿಗ್ಗೆ ಆರಂಭಿಸಿದ ಕಂದಾಯ ಮತ್ತು ಸರ್ವೆ ಅಧಿಕಾರಿಗಳು, ಎಚ್‌ಡಿಕೆ ತೋಟದೊಳಗಿನ ಜಮೀನಿಗೆ ಹೊಂದಿಕೊಂಡಂತೆ ಆಗಿರುವ ಸರ್ಕಾರಿ ಜಮೀನಿನ ಒತ್ತುವರಿ ಗುರುತಿಸಿದರು.
ಈ ವೇಳೆ, ತೋಟದ ಮೇಲ್ವಿಚಾರಕರು ಹಾಗೂ ಕೆಲಸ ಮಾಡುವ ಕಾರ್ಮಿಕರಷ್ಟೇ ಇದ್ದರು. ಕುಮಾರಸ್ವಾಮಿ ಅವರ ಕುಟುಂಬದ ಯಾವೊಬ್ಬ ಸದಸ್ಯರೂ ಇರಲಿಲ್ಲ. ಜೆಡಿಎಸ್ ರಾಮನಗರ ತಾಲ್ಲೂಕು ಘಟಕದ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ ಸೇರಿದಂತೆ ಪಕ್ಷದ ಮೂರ್ನಾಲ್ಕು ಮುಖಂಡರು ಕೆಲ ಹೊತ್ತು ಹೊರಗಡೆಯೇ ನಿಂತು ಕಾರ್ಯಾಚರಣೆ ವೀಕ್ಷಿಸಿ ತೆರಳಿದರು. ಉಳಿದ ಜಮೀನುಗಳ ಮಾಲೀಕರು ಸಹ ಸ್ಥಳದಲ್ಲಿರಲಿಲ್ಲ.
ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ನೇತೃತ್ವದಲ್ಲಿ, ತೋಟ ಪ್ರವೇಶಿಸಿದ ಅಧಿಕಾರಿಗಳು ತಮ್ಮ ಕಾರ್ಯಾಚರಣೆ ಶುರು ಮಾಡಿದರು. ಪೂರಕವಾಗಿ ಜೆಸಿಬಿಯನ್ನು ಸಹ ಒಳಕ್ಕೆ ಕರೆಯಿಸಿಕೊಂಡ ಅಧಿಕಾರಿಗಳು, ಒಂದು ಟ್ರಾಕ್ಟರ್‌ನಲ್ಲಿ ಕಲ್ಲು ಕಂಬಗಳನ್ನು ಸಹ ತರಿಸಿಕೊಂಡರು. ಒತ್ತುವರಿ ಜಾಗದಲ್ಲಿ ಕಂಬ ನೆಡುವುದು ಸೇರಿದಂತೆ ಇತರ ಕೆಲಸಗಳಿಗಾಗಿ ಹತ್ತಕ್ಕೂ ಹೆಚ್ಚು ಕೂಲಿ ಕಾರ್ಮಿಕರನ್ನು ಸಹ ಕರೆಯಿಸಿದ್ದರು.
ಇಡೀ ಪ್ರಕ್ರಿಯೆಯ ಚಿತ್ರೀಕರಣ: ತೆರವು ಕಾರ್ಯಾಚರಣೆಯ ಇಡೀ ಪ್ರಕ್ರಿಯೆಯನ್ನು ಕಂದಾಯ ಇಲಾಖೆಯು ಚಿತ್ರೀಕರಣ ಮಾಡಿತು. ಅಧಿಕಾರಿಗಳ ಭೇಟಿ, ಸ್ಥಳ ಪರಿಶೀಲನೆ, ಗುಂಡಿ ತೋಡುವುದು, ಕಂಬ ನೆಡುವುದು, ಒತ್ತುವರಿ ಜಾಗದಲ್ಲಿ ಗೆರೆ ಹಾಕುವುದು ಸೇರಿದಂತೆ ಬೆಳಿಗ್ಗೆಯಿಂದ ಸಂಜೆವರೆಗಿನ ಎಲ್ಲಾ ಪ್ರಕ್ರಿಯೆಗಳ ವಿಡಿಯೊ ಚಿತ್ರೀಕರಣ ಮಾಡಲಾಯಿತು.
ಉಪ ವಿಭಾಗಾಧಿಕಾರಿ ಬಿನೋಯ್ ಪಿ.ಕೆ, ತಹಶೀಲ್ದಾರ್ ತೇಜಸ್ವಿನಿ, ಭೂ ದಾಖಲೆಗಳ ಉಪ ನಿರ್ದೇಶಕ ಹನುಮೇಗೌಡ ಬಿ.ಆರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ ಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಟಿ.ವಿ. ಸುರೇಶ್, ರಾಮಚಂದ್ರಯ್ಯ, ಡಿವೈಎಸ್ಪಿ ಶ್ರೀನಿವಾಸ್ ಸೇರಿದಂತೆ ಕಂದಾಯ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಇದ್ದರು.
‘ಎಸ್‌ಐಟಿ ನೇತೃತ್ವದಲ್ಲಿ ಒತ್ತುವರಿ ಆಗಿರುವ ಜಾಗವನ್ನು ಸರ್ವೆ ಮಾಡುವಾಗಲೇ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು. ಆಗ ಒತ್ತುವರಿ ಆರೋಪ ಎದುರಿಸುತ್ತಿದ್ದ ಮಾಲೀಕರ ಸರ್ವೆ ನಂಬರ್ ಇರುವ ಅಕ್ಕಪಕ್ಕದ ಮಾಲೀಕರಿಗೂ ನೋಟಿಸ್ ನೀಡಲಾಗಿತ್ತು. ಆಗಲೇ ಒತ್ತುವರಿ ವಿಷಯ ಅವರ ಗಮನಕ್ಕೆ ಬಂದಿತ್ತು. ಆದರೆ ಆಗ ಜಮೀನಿನ ಮಾಲೀಕರು ಉಪಸ್ಥಿತರಿರಲಿಲ್ಲ. ಮುಂದುವರಿದ ಭಾಗವಾಗಿ ಇಂದಿನಿಂದ ತೆರವು ಕಾರ್ಯಾಚರಣೆ ಆರಂಭಿಸಿದ್ದೇವೆ’ ಎಂದು ‘ತೆರವು ಕಾರ್ಯಾಚರಣೆಗೆ ಮುನ್ನ ನಮಗೆ ನೋಟಿಸ್ ನೀಡಿಲ್ಲ’ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.