ರಾಮನಗರ: ‘ಗುತ್ತಿಗೆದಾರರು ತಾವು ಮಾಡುವ ಅಭಿವೃದ್ಧಿ ಕಾಮಗಾರಿಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಎಂಜಿನಿಯರ್‌ಗಳು ಕಾಮಗಾರಿ ಸ್ಥಳದಲ್ಲಿದ್ದು ಗುಣಮಟ್ಟ ಪರಿಶೀಲಿಸಬೇಕು. ಒಂದು ವೇಳೆ ಕಾಮಗಾರಿ ಕಳಪೆಯಾಗಿದ್ದರೆ ಅದಕ್ಕೆ ಎಂಜಿನಿಯರ್ ಅವರೇ ಹೊಣೆಯಾಗುತ್ತಾರೆ’ ಎಂದು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಎಚ್ಚರಿಕೆ ನೀಡಿದರು.
ಇಲ್ಲಿನ ಮಂಜುನಾಥ ನಗರದ ಬಿಳಗುಂಬ ವೃತ್ತದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ₹6.9 ಕೋಟಿ ವೆಚ್ಚದಲ್ಲಿ ಬಿಳಗುಂಬ-ಅರೇಹಳ್ಳಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಕಾಮಗಾರಿಯನ್ನು ತಡ ಮಾಡದೆ ಕಾಲಮಿತಿಯಲ್ಲಿ ಮುಗಿಸಬೇಕು’ ಎಂದರು.
‘ಬಿಳಗುಂಬ–ಅರೇಹಳ್ಳಿ ರಸ್ತೆಯು ಹಲವು ವರ್ಷಗಳಿಂದ ಅಭಿವೃದ್ಧಿ ಕಾಣದೆ ನನೆಗುದಿಗೆ ಬಿದ್ದಿತ್ತು. ನಾನು ಶಾಸಕನಾದ ಬಳಿಕ ಸರ್ಕಾರದ ಮೇಲೆ ಒತ್ತಡ ತಂದು ರಸ್ತೆ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿದೆ. ಇದೀಗ ಕಾಮಗಾರಿಗೆ ಚಾಲನೆ ನೀಡುತ್ತಿದ್ದೇನೆ. ಕ್ಷೇತ್ರದಲ್ಲಿ ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ’ ಎಂದು ತಿಳಿಸಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ರಾಜು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸದಸ್ಯರಾದ ಆರ್. ಮುತ್ತುರಾಜ್, ವಿಜಯಕುಮಾರಿ, ಬಿ.ಸಿ. ಪಾರ್ವತಮ್ಮ, ಅಜ್ಮತ್, ಬಿಳಗುಂಬ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಡಿ.ಎಂ. ಗೌಡ, ಸದಸ್ಯ ಶಿವಲಿಂಗು, ಮುಖಂಡರಾದ ಕೆ. ರಮೇಶ್, ಪ್ರಾಣೇಶ್, ಪ್ರಭು, ಪಾಪಣ್ಣ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.