ADVERTISEMENT

ರಾಮನಗರ: ಕೃಷಿ ಹೊಂಡ ಸದ್ಬಳಕೆಗೆ ರೈತರ ನಿರ್ಲಕ್ಷ್ಯ

ಯೋಜನೆ ಸದುಪಯೋಗಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 5:03 IST
Last Updated 29 ಜುಲೈ 2021, 5:03 IST
ಕೃಷಿ ಹೊಂಡಕ್ಕೆ ಮುಳ್ಳು ತಂತಿ ನಿರ್ಮಿಸದೆ ಹಾಗೆಯೇ ಬಿಟ್ಟಿರುವುದು
ಕೃಷಿ ಹೊಂಡಕ್ಕೆ ಮುಳ್ಳು ತಂತಿ ನಿರ್ಮಿಸದೆ ಹಾಗೆಯೇ ಬಿಟ್ಟಿರುವುದು   

ಬಿಡದಿ: ರೈತರ ಉಪಯೋಗಕ್ಕಾಗಿ ಕೃಷಿ ಭಾಗ್ಯ ಯೋಜನೆಯಡಿ ಹೋಬಳಿಯಾದ್ಯಂತ ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ಆದರೆ, ಇವುಗಳ ಸದ್ಬಳಕೆಗೆ ಅನ್ನದಾತರು ಮುಂದಾಗುತ್ತಿಲ್ಲ.

ಕೃಷಿ ಚಟುವಟಿಕೆಗಳಿಗೆ ನೀರು ಸಂಗ್ರಹಿಸಿಕೊಳ್ಳಲು ಕೃಷಿ ಹೊಂಡಕ್ಕಾಗಿ ಇಲಾಖೆಯಿಂದ ಲಕ್ಷಾಂತರ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ರೈತರು ಹೊಲ, ಗದ್ದೆಗಳಲ್ಲಿ ಕೃಷಿ ಹೊಂಡ ನಿರ್ಮಿಸಿಕೊಂಡು ಮಳೆ ನೀರನ್ನು ಸಂಗ್ರಹಿಸಿ ಅಲ್ಪಾವಧಿಯ ಬೆಳೆ ಬೆಳೆಯಲು ಇದರಿಂದ ಅನುಕೂಲವಾಗಲಿದೆ. ಇದಕ್ಕೆ ಬೇಕಾದ ಅಗತ್ಯ ಸಲಕರಣೆಗಳನ್ನೂ ನೀಡುತ್ತಿದೆ. ಆದರೆ, ಸದ್ಬಳಕೆಯಾಗುತ್ತಿಲ್ಲ.

ಕೃಷಿ ಹೊಂಡದ ಸುತ್ತಲೂ ಜನ, ಜಾನುವಾರು ರಕ್ಷಿಸಿಕೊಳ್ಳಲು ಮುಳ್ಳುತಂತಿ ಬೇಲಿ ನಿರ್ಮಿಸಿಕೊಳ್ಳಲು ಸೂಚಿಸಲಾಗಿದೆ. ಆದರೂ, ರೈತಾಪಿ ಜನರು ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಮತ್ತೊಂದೆಡೆ ಕೃಷಿ ಇಲಾಖೆಯ ಸ್ಥಳೀಯ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಿಲ್ಲ. ಇದು ಕೂಡ ರೈತರು ಹೊಂಡದ ನಿರ್ವಹಣೆಗೆ ಹಿಂದೇಟು ಹಾಕುತ್ತಿರುವುದರಲ್ಲಿ ಪ್ರಮುಖ ಕಾರಣವಾಗಿದೆ.

ADVERTISEMENT

‘ಕೃಷಿ ಭಾಗ್ಯ ಯೋಜನೆಯಡಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ಇಲಾಖೆಯಿಂದ ಟಾರ್ಪಲ್ ನೀಡಲಾಗಿದೆ. ಕೆಲವು ರೈತರು ಮಳೆಗಾಲದಲ್ಲಿ ಅಳವಡಿಸಿರುತ್ತಾರೆ. ನಂತರ ಬೇಸಿಗೆ ಕಾಲದಲ್ಲಿ ಅದನ್ನು ಸಂರಕ್ಷಿಸಿಕೊಳ್ಳಲು ಟಾರ್ಪಲ್ ಅನ್ನು ಬೇರೆ ಕಡೆ ಇಡುತ್ತಾರೆ. ರೈತರಿಗೆ ಹೆಚ್ಚು ಪ್ರಯೋಜನ ಪಡೆಯಲೆಂದು ಸಲಕರಣೆ ನೀಡುತ್ತೇವೆ. ರೈತರು ಇದರ ಸದುಪಯೋಗ ‍ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು’ ಎಂಬುದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರ ಸಲಹೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.