ಎಫ್‌ಐಆರ್
ರಾಮನಗರ: ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಕಳೆದ ತಿಂಗಳು ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ, ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದನ್ನು ಟೀಕಿಸಿದ್ದ ವಿವಿಧ ಸಂಘಟನೆಗಳ ನಾಲ್ವರ ವಿರುದ್ಧ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ದೀಪಾ ಮುನಿರಾಜು ನೀಡಿದ ದೂರಿನ ಮೇರೆಗೆ ಕನಕಪುರದ ಜಯ ಕರ್ನಾಟಕ ಜನಪರ ವೇದಿಕೆಯ ಕುಮಾರಸ್ವಾಮಿ, ರಾಮನಗರದ ಜೆಡಿಎಸ್‌ನ ಮುಖಂಡ ಅಂಜನಾಪುರ ವಾಸು, ಕೊತ್ತಿಪುರ ಗೋವಿಂದರಾಜು ಹಾಗೂ ಡಿಎಸ್‌ಎಸ್ ಮುಖಂಡ ಪುನೀತ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಜೂನಿಯರ್ ಕಾಲೇಜು ಮೈದಾನದಲ್ಲಿ ಏಪ್ರಿಲ್ 24ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಮಹಿಳಾ ಮುಖಂಡರು, ಗ್ರಾಮ ಪಂಚಾಯಿತಿ ಸದಸ್ಯೆಯರು, ವಿವಿಧ ಸಂಘ–ಸಂಸ್ಥೆ, ಮಹಿಳಾ ಒಕ್ಕೂಟಗಳು, ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಸುಮಾರು 25 ಸಾವಿರ ಮಹಿಳೆಯರು ಭಾಗವಹಿಸಿದ್ದರು. ಶಾಸಕ ಹುಸೇನ್ ಅವರು ಅಣ್ಣನಾಗಿ ಹೆಣ್ಣು ಮಕ್ಕಳಿಗೆ ಸೀರೆಯೊಂದಿಗೆ ಬಾಗಿನ ಕೊಟ್ಟಿದ್ದರು.
ಕಾರ್ಯಕ್ರಮದ ಯಶಸ್ಸನ್ನು ಸಹಿಸಲಾಗದ ನಾಲ್ವರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದ್ದಾರೆ. ಹೆಣ್ಣು ಮಕ್ಕಳು ಗತಿ ಇಲ್ಲದೆ ಸೀರೆ ತೆಗೆದುಕೊಳ್ಳಲು ಬಂದಿದ್ದಾರೆ. ಅವರಿಗೆ ಗಂಡಂದಿರು ಇಲ್ಲವೆ? ಎಂದು ಅವಹೇಳನಕಾರಿಯಾಗಿ ಮಾತನಾಡಿ, ಆತ್ಮಗೌರವಕ್ಕೆ ಧಕ್ಕೆ ತಂದಿದ್ದಾರೆ. ಪೊಲೀಸರಿಂದಲೂ ಸೀರೆ ಹಂಚಿಸಿದ್ದು, ಅವರಿಗೆ ಎಸ್‌ಪಿ ಅಥವಾ ಡಿಸಿ ಹೇಳಿದ್ದರೇ ಎಂದು ಪ್ರಶ್ನಿಸಿದ್ದಾರೆ. ಸುಳ್ಳು ಸಂಘಟನೆಗಳ ಹೆಸರಿನಲ್ಲಿ ಮಾಧ್ಯಮಗಳಲ್ಲಿ ಸುಳ್ಳು ಆರೋಪಗಳನ್ನು ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆರೋಪಿಸಿ ದೀಪಾ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.