ADVERTISEMENT

ಸಮುದಾಯಗಳ ಮಧ್ಯೆ ದ್ವೇಷ ಬಿತ್ತಿದ ಆರೋಪ: ಪ್ರಕಾಶ್ ಮಂಟೇದ ವಿರುದ್ಧ ಎಫ್‌ಐಆರ್‌

ವಿಚಾರಣೆಗೆ ಹಾಜರಾಗಲು ಪೊಲೀಸರಿಂದ ನೋಟಿಸ್

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 14:10 IST
Last Updated 31 ಅಕ್ಟೋಬರ್ 2023, 14:10 IST
   

ರಾಮನಗರ: ವೆಬ್‌ಸೈಟ್‌ವೊಂದಕ್ಕೆ ಬರೆದಿರುವ ಲೇಖನದಲ್ಲಿ ಭೋವಿ ಮತ್ತು ಆದಿ ಕರ್ನಾಟಕ ಸಮುದಾಯಗಳ ಮಧ್ಯೆ ದ್ವೇಷ ಬಿತ್ತುವ ಪ್ರಯತ್ನ ಮಾಡಿದ್ದಾರೆ ಎಂಬ ಆರೋಪದ ಮೇಲೆ, ಲೇಖಕ ಪ್ರಕಾಶ್ ಮಂಟೇದ ಅವರ ವಿರುದ್ಧ ಇಲ್ಲಿನ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲ್ಲೂಕಿನ ಕುಂಬಾಪುರದವರಾದ ಪ್ರಕಾಶ್ ಅವರ ವಿರುದ್ಧ ಅದೇ ಗ್ರಾಮದ ಭೋವಿ ಸಮುದಾಯದ ಶಾಂತಕುಮಾರ್ ಎಂಬುವರು ನೀಡಿದ ದೂರಿನ ಮೇರೆಗೆ, ಪೊಲೀಸರು ಅ. 28ರಂದು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಆರೋಪದಲ್ಲೇನಿದೆ?: ಗ್ರಾಮದಲ್ಲಿರುವ ಪರಿಶಿಷ್ಟ ಸಮುದಾಯದವರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಅಂತರ್ಜಾತಿ ವಿವಾಹಗಳು ಸಹ ಆಗಿವೆ. ಹೀಗಿರುವಾಗ ಪ್ರಕಾಶ ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಇತ್ತೀಚೆಗೆ ಪ್ರಚೋದನಾತ್ಮಕ ಹೇಳಿಕೆಗಳನ್ನು ಹಾಕುತ್ತಾ, ಎರಡೂ ಜಾತಿಗಳ ಮಧ್ಯೆ ವೈಮನಸ್ಸು ಸೃಷ್ಟಿಸುತ್ತಿದ್ದಾರೆ.

ADVERTISEMENT

ಏಕವಚನದಲ್ಲಿ ವಡ್ಡ, ಭೋವಿ, ವಡ್ಡರು, ಹೊಲಯ ಎಂಬ ಪದಗಳನ್ನು ಬಳಸುತ್ತಿದ್ದಾರೆ. ಯುವಕರು ಪುಂಡಾಟಿಕೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕವಾಗಿ ನಿಂದಿಸುವಂತಹ ಪ್ರಚೋದನಾತ್ಮಕ ಹೇಳಿಕೆಯನ್ನು ಮಾಧ್ಯಮವೊಂದರಲ್ಲಿ ಬಳಸಿದ್ದಾರೆ. ಇದರಿಂದ, ಗ್ರಾಮದಲ್ಲಿ ಜಾತಿ ಸಂಘರ್ಷ ಉಲ್ಭಣಗೊಂಡಿದ್ದು, ಅಶಾಂತಿಗೆ ಕಾರಣವಾಗಿದೆ.

ದೇವಸ್ಥಾನಕ್ಕೆ ಸೇರಿಸುತ್ತಿಲ್ಲ, ಕುಡಿಯುವ ನೀರು ಬಳಸಲು ಬಿಡುತ್ತಿಲ್ಲ, ಜಾತಿ ದೌರ್ಜನ್ಯಕ್ಕೆ ಕೊಲೆಗಳು ನಡೆದಿವೆ ಹಾಗೂ ಆಯುಧಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಶಾಂತಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ವಿಚಾರಣೆಗೆ ಹಾಜರಾಗಲು ನೋಟಿಸ್

ಪ್ರಕಾಶ್ ಅವರ ವಿರುದ್ಧ ಐಪಿಸಿ ಕಲಂ 505 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆ) ಹಾಗೂ 153A ಕಲಂನಡಿ (ವಿವಿಧ ಸಮುದಾಯ/ಗುಂಪುಗಳ ನಡುವೆ ದ್ವೇಷ ಉತ್ತೇಜಿಸುವುದು) ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಪೊಲೀಸರು ನ. 1ರಂದು ಠಾಣೆಗೆ ಬಂದು ವಿಚಾರಣೆಗೆ ಹಾಜರಾಗುವಂತೆ ಪ್ರಕಾಶ್ ಅವರಿಗೆ ನೋಟಿಸ್ ಕಳಿಸಿದ್ದಾರೆ.

‘ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸ್ ಇನ್‌ಸ್ಪೆಕ್ಟರ್ ರಮೇಶ್ ತಿಳಿಸಿದ್ದಾರೆ.

‘ಜಾತಿ ಸೂಕ್ಷ್ಮತೆ, ವೈಯಕ್ತಿಕ ಅನುಭವದ ಆತ್ಮಕತೆ’

ಪ್ರಕರಣ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೇಖಕ ಪ್ರಕಾಶ್ ಮಂಟೇದ ಅವರು, ‘ಗ್ರಾಮದಲ್ಲಿರುವ ಪರಿಶಿಷ್ಟ ಜಾತಿಯವರಾದ ಭೋವಿಗಳು ಸ್ಪೃಶ್ಯರಾಗಿದ್ದರೆ, ಆದಿ ಕರ್ನಾಟಕ ಸಮುದಾಯದವರಾದ ನಾವು ಅಸ್ಪೃಶ್ಯರು. ಹಿಂದೆ ಸ್ಪೃಶ್ಯರು ಸಹ ಅಸ್ಪೃಶ್ಯತೆ ಆಚರಿಸುತ್ತಿದ್ದರು. ನಾನು ಸಹ ಚಿಕ್ಕಂದಿನಲ್ಲಿ ಅನುಭವಿಸಿದ್ದೇನೆ. ಕಣ್ಣಾರೆ ಕಂಡಿದ್ದೇನೆ. ಇದೆಲ್ಲವನ್ನೂ ಮೀರಿಯೂ ನಮ್ಮೂರಿನವರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಪರಿಶಿಷ್ಟರೊಳಗಿರುವ ಇಂತಹ ಜಾತಿ ಸೂಕ್ಷ್ಮತೆಗಳು ಮತ್ತು ವೈಯಕ್ತಿಕ ಅನುಭವಗಳನ್ನು ಆಧರಿಸಿ, ಆತ್ಮಕತೆಯ ರೂಪದಲ್ಲಿ ವೆಬ್‌ಸೈಟ್‌ಗೆ ಸರಣಿ ಲೇಖನ ಬರೆದಿದ್ದೇನೆ. ಇದನ್ನೇ ಕೆಲವರು ತಮ್ಮ ಸ್ವಾರ್ಥಕ್ಕಾಗಿ ಅಮಾಯಕರನ್ನು ಬಳಸಿಕೊಂಡು, ನನ್ನ ತೇಜೋವಧೆ ಮಾಡಲು ಮುಂದಾಗಿದ್ದಾರೆ. ಸುಳ್ಳು ಆರೋಪಗಳನ್ನು ಮಾಡುತ್ತಾ, ಅವರೇ ಜಾತಿಗಳ ಮಧ್ಯೆ ದ್ವೇಷ ಬಿತ್ತುತ್ತಿದ್ದಾರೆ’ ಎಂದರು.

ಹೆದರುವವರು ನಾವಲ್ಲ

‘ನಮಗಾದ ನೋವು ಮತ್ತು ಅವಮಾನಗಳನ್ನು ಬರೆದುಕೊಂಡರೆ, ಈ ವ್ಯವಸ್ಥೆ ಕಿಡಿಗೇಡಿ ಪ್ರಕರಣ ದಾಖಲು ಮಾಡುತ್ತದೆ. ಇರಲಿ ಆರು ಮುನಿದು ನಮ್ಮನೇನ ಮಾಡುವರು. ಪುಂಡರು ಮತ್ತು ದೂರ್ತರನ್ನು ಪೋಷಿಸುವ ಸಮುದಾಯ ಕೇಡಿನ ಕೊಚ್ಚೆಯಲ್ಲಿ ಬಿದ್ದಿದೆ ಎಂದೇ ಅರ್ಥ. ಕಾನೂನಿಗೆ ಸಾಮಾಜಿಕ ವಿವೇಕ ಮತ್ತು ಸೂಕ್ಷ್ಮತೆಗಳ ಅರಿವಿಲ್ಲ ಎಂಬುದು ವಿಪರ್ಯಾಸ. ಸತ್ಯ ಹೇಳಿ ಅದರ ಪರಿಣಾಮಕ್ಕೆ ಹೆದರುವ ಸಮುದಾಯದವರು ನಾವಲ್ಲ. ಜೈ ಭೀಮ್...’ ಎಂದು ಪ್ರಕಾಶ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಾವು ಹೇಳಿರುವುದನ್ನು ನಿರೂಪಿಸಲಿ: ದೂರುದಾರ

‘ಪ್ರಕಾಶ್ ಅವರು ಲೇಖನದಲ್ಲಿ ಹೇಳಿರುವುದೆಲ್ಲವೂ ಸುಳ್ಳು. ಅದನ್ನು ನಿರೂಪಿಸಲು ನಾವು ಸಿದ್ಧ. ನಿಜವಾಗಿದ್ದರೆ ಅವರ ನಿರೂಪಿಸಲಿ. ಅವರ ಮಾತುಗಳನ್ನುಅವರ ಸಮುದಾಯವೇ ಒಪ್ಪುವುದಿಲ್ಲ. ವೈಯಕ್ತಿಕವಾಗಿ ನಾವು ಚನ್ನಾಗಿದ್ದೇವೆ. ಆದರೆ, ಜಾತಿ ವಿಚಾರ ಬಂದಾಗ ಮತ್ತು ಅದರ ವಿರುದ್ಧ ಹೇಳಿಕೆ ಕೊಟ್ಟಾಗ ಕೋಪ ಬರುತ್ತದೆ. ಊರಿನಲ್ಲಿ ಎರಡೂ ಸಮುದಾಯಗಳ ನಡುವೆ ಅಣ್ಣ–ತಮ್ಮಂದಿರೆಂಬ ಭಾವನೆ ಇತ್ತು. ಇವರಿಂದಾಗಿ ಜಗಳಕ್ಕೆ ನಿಲ್ಲುವ ಪರಿಸ್ಥಿತಿ ಸೃಷ್ಟಿಯಾಗಿದೆ. ಅದನ್ನು ತಪ್ಪಿಸುವುದಕ್ಕಾಗಿ ಪೊಲೀಸರಿಗೆ ದೂರು ಕೊಟ್ಟಿದ್ದೇನೆ’ ಎಂದು ದೂರುದಾರ ಶಾಂತಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಜಾಲತಾಣದಲ್ಲಿ ಪ್ರಕಾಶ್‌ಗೆ ಬೆಂಬಲ

ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿವೆ. ಫೇಸ್‌ಬುಕ್‌ನಲ್ಲಿ #Stand_With_ಮಂಟೇದ Prakash Manteda ಹ್ಯಾಷ್‌ಟ್ಯಾಗ್ ಮಾಡುವ ಮೂಲಕ, ಹಲವು ಲೇಖಕರು ಪ್ರಕಾಶ್ ಅವರನ್ನು ಬೆಂಬಲಿಸಿದ್ದಾರೆ.

‘ಅಸ್ಪೃತೆಯ ಆಚರಣೆಯ #MeToo ಚಳವಳಿಗೆ ಸಕಾಲ’ ಎಂದು ಫೇಸ್‌ಬುಕ್‌ನಲ್ಲಿ ಬರೆದಿರುವ ಲೇಖಕ ಡಾ. ಅರುಣ್ ಜೋಳದಕೂಡ್ಲಿಗಿ ಅವರು, ‘ಪೊಲೀಸರು ಪ್ರಕಾಶ್ ಅವರ ವಿರುದ್ಧ ಹಾಕಿರುವ ಐಪಿಸಿ ಕಲಂಗಳನ್ನು ನೋಡಿದರೆ ಗಾಬರಿಯಾಗುತ್ತದೆ. ಸರ್ಕಾರವೇ ಪ್ರಕಟಿಸಿದ ಅಂಬೇಡ್ಕರ್ ಬರಹಗಳಲ್ಲಿ ಸಾವಿರಾರು ಅಸ್ಪೃಶ್ಯತೆಯ ಘಟನೆಗಳನ್ನು ಉಲ್ಲೇಖಿಸುತ್ತಾರೆ. ಅವೆಲ್ಲವಕ್ಕೂ FIR ದಾಖಲಿಸಬೇಕಲ್ಲಾ? ಉಚಲ್ಯಾ, ಗೌರ್ನಮೆಂಟ್ ಬ್ರಾಹ್ಮಣ, ಮಣೆಗಾರ ಮುಂತಾದ ದಲಿತ ಆತ್ಮಕಥನಗಳಲ್ಲೆಲ್ಲಾ ಅಸ್ಪೃಶ್ಯತೆಯ ಆಚರಣೆ, ಆಚರಿಸಿದವರ ಹೆಸರುಗಳಿವೆಯಲ್ಲಾ? ದಲಿತ ಕಥನ ಬರೆದವರ ಮೇಲೆ FIR ದಾಖಲಿಸುತ್ತೀರಾ?’ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಶೋಭಾ ರಾಣಿ ಎಂಬುವರು, ‘ಪ್ರಕಾಶ್ ಅವರ ಲೇಖನಗಳು ಸಮಾಜದ ಸ್ವಾಸ್ಥ್ಯ ಕಾಪಾಡುವ ಅಂಶಗಳನ್ನೊಳಗೊಂಡ ಪ್ರಬುದ್ಧ ಬರಹಗಳು. ಶಾಂತಿ, ಸೌಹಾರ್ದತೆ ಹಾಗೂ ಸಾಮರಸ್ಯಕ್ಕೆ ಹೆಚ್ಚಿನ ಮಹತ್ವ ಕೊಟ್ಟು ಬರೆಯುವ ಒಳ್ಳೆಯ ಸಮಾಜಿಕ ಚಿಂತಕ. ಅವರ ಧ್ವನಿ ಅಡಗಿಸುವ ಪ್ರಯತ್ನ ಇದು’ ಎಂದಿದ್ದಾರೆ. ‘ನಾವು ನಿಮ್ಮೊಡನಿದ್ದೇವೆ. ಪ್ರಜ್ಞಾವಂತ ಟಚಬಲ್ ಎಸ್‌ಸಿಗಳೂ ನಿಮ್ಮೊಡನೆ ನಿಲ್ಲಬೇಕು. ತಮ್ಮ ಸಮುದಾಯದ ಪುಡಾರಿಗಳಿಗೆ ಬುದ್ದಿ ಹೇಳಬೇಕು’ ಎಂದು ಮೈಸೂರಿನ ಕೃಷ್ಣಮೂರ್ತಿ ಚಮರಂ ಬೆಂಬಲ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.