ADVERTISEMENT

ಬೆಂಗಳೂರು ಗ್ರಾಮಾಂತರ ಕ್ಷೇತ್ರ: ಜೆಡಿಎಸ್‌ ಅಭ್ಯರ್ಥಿ ಇಲ್ಲದ ಮೊದಲ ಚುನಾವಣೆ!

ಮೈತ್ರಿ ಅಭ್ಯರ್ಥಿಯಾಗಲಿದ್ದಾರೆ ಡಿ.ಕೆ. ಸುರೇಶ್‌

ಆರ್.ಜಿತೇಂದ್ರ
Published 3 ಮೇ 2019, 15:43 IST
Last Updated 3 ಮೇ 2019, 15:43 IST

ರಾಮನಗರ: ಎಚ್‌.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ಅಂತಹ ಘಟಾನುಘಟಿಗಳನ್ನು ಸಂಸದರಾಗಿ ಆರಿಸಿ ಕಳುಹಿಸಿದ ನೆಲದಲ್ಲಿ ಇದೀಗ ಜೆಡಿಎಸ್‌ ಅಭ್ಯರ್ಥಿಯೇ ಇಲ್ಲದೇ ಚುನಾವಣೆ ನಡೆಯುತ್ತಿದೆ.

ರಾಜ್ಯದಲ್ಲಿ ಜೆಡಿಎಸ್–ಕಾಂಗ್ರೆಸ್ ನಡುವಿನ ಮೈತ್ರಿಯು ಲೋಕಸಭೆ ಚುನಾವಣೆಗೂ ಮುಂದುವರಿದಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಕೈ ಪಾಳಯಕ್ಕೆ ಬಿಟ್ಟುಕೊಡಲಾಗಿದೆ. ಮೈತ್ರಿಕೂಟದ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌ ಸ್ಪರ್ಧೆ ಖಚಿತವಾಗಿದೆ. ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿಯ ಹೋರಾಟ ನಡೆಸಿದ್ದ ಎರಡು ಪಕ್ಷಗಳು ಒಟ್ಟಾಗಿ ಸಂಸತ್‌ ಚುನಾವಣೆ ಎದುರಿಸುತ್ತಿರುವುದು ಇದೇ ಮೊದಲು.

ಕ್ಷೇತ್ರ ಬಿಟ್ಟುಕೊಡುವ ನಿರ್ಧಾರ ಜೆಡಿಎಸ್‌ಗೆ ಹೆಚ್ಚೇನು ನಷ್ಟವಾದಂತೆ ತೋರುತ್ತಿಲ್ಲ. ಏಕೆಂದರೆ ಕಳೆದ ಎರಡು ಚುನಾವಣೆಗಳಲ್ಲಿ ಇಲ್ಲಿ ಪಕ್ಷದ ಹಿಡಿತ ಸಡಿಲಗೊಳ್ಳುತ್ತಲೇ ಬಂದಿದೆ. 2008ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರವು ರಚನೆಯಾದ ಬಳಿಕ ನಡೆಯಲಿರುವ ನಾಲ್ಕನೇ ಲೋಕಸಭಾ ಚುನಾವಣೆಯು ಇದಾಗಿದೆ. ಈ ಹಿಂದೆ ಇಲ್ಲಿ ಎರಡು ಸಾರ್ವತ್ರಿಕ ಚುನಾವಣೆಗಳು ಹಾಗೂ ಒಂದು ಉಪ ಚುನಾವಣೆ ನಡೆದಿತ್ತು. ಮೊದಲ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸಿದ್ದರೆ, ಇನ್ನೆರಡು ಚುನಾವಣೆಗಳಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ADVERTISEMENT

2009ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಎಚ್‌.ಡಿ. ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿದ್ದರು. ಆ ಚುನಾವಣೆಯಲ್ಲಿ ಅವರಿಗೆ ಎದುರಾಳಿಯಾಗಿದ್ದು ಬಿಜೆಪಿಯ ಸಿ.ಪಿ. ಯೋಗೇಶ್ವರ್‌ ಹಾಗೂ ಕಾಂಗ್ರೆಸ್‌ನ ತೇಜಸ್ವಿನಿ ಗೌಡ. ಆ ಚುನಾವಣೆಯಲ್ಲಿ ಎಚ್‌ಡಿಕೆ ಬರೋಬ್ಬರಿ 1.3 ಲಕ್ಷ ಮತಗಳ ಅಂತರದಿಂದ ಗೆದ್ದು ಎರಡನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು.

ಕುಮಾರಸ್ವಾಮಿ 2013ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ಕಾರಣ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹೀಗಾಗಿ ಉಪ ಚುನಾವಣೆ ಏರ್ಪಟ್ಟಿತು. ಅಲ್ಲಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾರನ್ನೇ ಕಣಕ್ಕೆ ಇಳಿಸಿದರು. ಕೇವಲ ಒಂದು ವರ್ಷದ ಆಡಳಿತಾವಧಿಗಾಗಿ ನಡೆದ ಚುನಾವಣೆಯಾದ್ದರಿಂದ ಬಿಜೆಪಿ ಅಭ್ಯರ್ಥಿ ಹಾಕಲಿಲ್ಲ. ಹೀಗಾಗಿ ಜೆಡಿಎಸ್‌–ಕಾಂಗ್ರೆಸ್‌ ನಡುವೆ ನೇರ ಪೈಪೋಟಿ ಏರ್ಪಟ್ಟಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಡಿ.ಕೆ. ಸುರೇಶ್‌ 1,37,007 ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಸಂಸದರಾದರು. ಜೆಡಿಎಸ್ ಎರಡನೇ ಸ್ಥಾನಕ್ಕೆ ಕುಸಿಯಿತು.

2014ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಡಿ.ಕೆ. ಸುರೇಶ್‌ ಮತ್ತೊಮ್ಮೆ ಕೈ ಪಾಳಯದ ಅಭ್ಯರ್ಥಿಯಾದರು. ಬಿಜೆಪಿಯಿಂದ ತುಳಸಿ ಮುನಿರಾಜುಗೌಡ ಹಾಗೂ ಜೆಡಿಎಸ್‌ನಿಂದ ಪ್ರಭಾಕರ ರೆಡ್ಡಿ ಸ್ಪರ್ಧೆ ಒಡ್ಡಿದ್ದರು. ಸುರೇಶ್ ಈ ಚುನಾವಣೆಯಲ್ಲಿ ತಮ್ಮ ಗೆಲುವಿನ ಅಂತರವನ್ನು 2,31,480ಕ್ಕೆ ಏರಿಸಿಕೊಂಡರು. ಜೆಡಿಎಸ್ ಇಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಿತು.

**
ಕನಕಪುರದಲ್ಲೂ ಜೆಡಿಎಸ್ ಛಾಪು
ಈ ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರದಲ್ಲೂ ಕಡೆಯ ಕೆಲವು ಚುನಾವಣೆಗಳಲ್ಲಿ ಜನತಾದಳ/ಜೆಡಿಎಸ್ ತನ್ನ ಛಾಪು ಮೂಡಿಸಿತ್ತು. ತಂದೆ ಒಮ್ಮೆ, ಮಗ ಒಮ್ಮೆ ಇಲ್ಲಿಂದ ಸಂಸದರಾಗಿ ಆಯ್ಕೆಯಾಗಿದ್ದರು.

1996ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಚ್‌.ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಈ ಮೂಲಕ ಕಾಂಗ್ರೆಸ್‌ನ ಭದ್ರಕೋಟೆಯನ್ನು ಛಿದ್ರ ಮಾಡಿದ್ದರು. ಆದರೆ ನಂತರದ ಚುನಾವಣೆಯಲ್ಲಿ ಅವರು ಠೇವಣಿ ಕಳೆದುಕೊಳ್ಳಬೇಕಾಯಿತು.

2002ರ ಉಪ ಚುನಾವಣೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್.ಡಿ. ದೇವೇಗೌಡರು ಡಿ.ಕೆ. ಶಿವಕುಮಾರ್ ವಿರುದ್ಧ ಗೆಲುವು ದಾಖಲಿಸುವ ಮೂಲಕ ಕ್ಷೇತ್ರದಲ್ಲಿ ಮತ್ತೊಮ್ಮೆ ಜೆಡಿಎಸ್‌ ಬಾವುಟ ಹಾರಿಸಿದರು. ಆದರೆ ಈ ಖುಷಿ ಹೆಚ್ಚು ಕಾಲ ಉಳಿಯಲಿಲ್ಲ. 2004ರ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ ಅವರು ತೇಜಸ್ವಿನಿ ರಮೇಶ್‌ ಎದುರು ಮುಖಭಂಗ ಅನುಭವಿಸಿದರು.

**
ಉಪ ಚುನಾವಣೆಯಲ್ಲೇ ನಿರ್ಧಾರ
‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್‌ರನ್ನು ಬೆಂಬಲಿಸುವುದು ರಾಮನಗರ ಉಪ ಚುನಾವಣೆಯ ಸಂದರ್ಭವೇ ನಿರ್ಧಾರವಾಗಿತ್ತು’ ಎನ್ನುತ್ತಾರೆ ಜೆಡಿಎಸ್ ಮುಖಂಡರು.

‘ಮೈತ್ರಿ ಅಭ್ಯರ್ಥಿಯಾಗಿದ್ದ ಅನಿತಾ ಅವರ ಪ್ರಚಾರದ ಉಸ್ತುವಾರಿಯನ್ನು ಸ್ವತಃ ಡಿ.ಕೆ. ಸುರೇಶ್‌ ವಹಿಸಿಕೊಂಡಿದ್ದರು. ಅಭ್ಯರ್ಥಿಗೆ ಸರಿಸಮನಾಗಿ ಪ್ರಚಾರ ನಡೆಸಿದರು. ಈ ಮೂಲಕ ಲೋಕಸಭೆ ಚುನಾವಣೆಗೆ ಅವರು ಆಗಲೇ ಸಿದ್ಧತೆ ನಡೆಸಿದ್ದರು’ ಎನ್ನುತ್ತಾರೆ ಅವರು.

‘ಉಪ ಚುನಾವಣೆಯ ಆರಂಭದಲ್ಲಿ ಕಾಂಗ್ರೆಸ್‌ನಲ್ಲಿ ಬಂಡಾಯವಿತ್ತು. ಆದರೆ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಸದ್ಯ ಅಂತಹ ಪರಿಸ್ಥಿತಿ ಇಲ್ಲ. ನಾವಾಗಲೇ ಮೈತ್ರಿಯನ್ನು ಒಪ್ಪಿಕೊಂಡು ನಡೆದಿದ್ದೇವೆ’ ಎನ್ನುವುದು ಅವರ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.