ADVERTISEMENT

ಪ್ರಸಾದ ಪರೀಕ್ಷೆ: ಪೇಚಿಗೆ ಸಿಲುಕಿದ ಆರೋಗ್ಯ ಇಲಾಖೆ

ಆಹಾರ ಮಾದರಿ ಪರೀಕ್ಷೆ ವರದಿಗೆ ಬೇಕು ಕನಿಷ್ಠ ಎರಡು ದಿನ

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:07 IST
Last Updated 3 ಮೇ 2019, 13:07 IST

ರಾಮನಗರ: ಜಿಲ್ಲೆಯಲ್ಲಿ ಜಾತ್ರಾ ಮಹೋತ್ಸವಗಳು ಪ್ರಾರಂಭವಾಗಿವೆ. ಈ ಸಂದರ್ಭ ವಿತರಣೆಯಾಗುವ ಪ್ರಸಾದವನ್ನು ಪರೀಕ್ಷಿಸುವ ಜವಾಬ್ದಾರಿ ಆರೋಗ್ಯ ಇಲಾಖೆಯ ಹೆಗಲೇರಿರುವುದು ಅಧಿಕಾರಿಗಳಿಗೆ ತಲೆನೋವು ತಂದೊಡ್ಡಿದೆ.

ಜಿಲ್ಲೆಯಲ್ಲಿ ಸಣ್ಣಪುಟ್ಟ ದೇಗುಲಗಳು ಸೇರಿದಂತೆ ಸುಮಾರು 500ಕ್ಕೂ ಅಧಿಕ ದೇವಸ್ಥಾನಗಳು ಇವೆ. ಇಲ್ಲಿ ವಾರ್ಷಿಕೋತ್ಸವ, ಜಾತ್ರೆ, ಮಹೋತ್ಸವ ಸೇರಿದಂತೆ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಸಾಲು ಸಾಲಾಗಿ ನಡೆಯುತ್ತಿವೆ.

2018ರ ಡಿಸೆಂಬರ್‌ನಲ್ಲಿ ಚಾಮರಾಜನಗರ ಸುಳುವಾಡಿಯಲ್ಲಿ ಪ್ರಸಾದ ಸೇವಿಸಿದ ಹತ್ತಾರು ಮಂದಿ ಮೃತಪಟ್ಟಿದ್ದರು. ಹಲವರು ಅಸ್ವಸ್ಥರಾಗಿದ್ದರು. ಈ ಪ್ರಕರಣ ಇಡೀ ರಾಜ್ಯವನ್ನೆ ಬೆಚ್ಚಿಬಿಳಿಸಿತ್ತು. ಇಂಥ ದುರ್ಘಟನೆ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಮರುಕಳಿಸಬಾರದೆಂಬ ಉದ್ದೇಶದಿಂದ ಸರ್ಕಾರವು ಪ್ರಸಾದವನ್ನು ಪರೀಕ್ಷಿಸುವ ಕಾರ್ಯ ಆರೋಗ್ಯ ಇಲಾಖೆಗೆ ಒಪ್ಪಿಸಿದೆ.

ADVERTISEMENT

ಏಪ್ರಿಲ್, ಮೇ ತಿಂಗಳಲ್ಲಿ ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ಜಾತ್ರೋತ್ಸವ, ವಾರ್ಷಿಕೋತ್ಸವಗಳು ಸಾಲು ಸಾಲಾಗಿ ನಡೆಯುತ್ತದೆ. ಅಲ್ಲದೆ ವಿಶೇಷ ಪೂಜೆಗಳ ಸಂದರ್ಭಗಳಲ್ಲೂ ಭಕ್ತರಿಗೆ ಪ್ರಸಾದ ವಿತರಿಸುವ ಪರಿಪಾಟ ಜಾರಿಯಲ್ಲಿದೆ.

ಈ ಸಂದರ್ಭಗಳಲ್ಲಿ ವಿವಿಧ ದೇವಸ್ಥಾನಗಳಲ್ಲಿ ಸಿದ್ಧಪಡಿಸಲಾಗುವ ಪ್ರಸಾದವನ್ನು ಆರೋಗ್ಯ ಇಲಾಖೆ ಪರೀಕ್ಷಿಸಿದ ಬಳಿಕವೇ ಭಕ್ತರಿಗೆ ವಿತರಿಸಬೇಕಾಗುತ್ತದೆ. ಪ್ರಸಾದ ಪರೀಕ್ಷಿಸಿ ತಕ್ಷಣ ವರದಿ ನೀಡುವ ಯಾವುದೇ ವ್ಯವಸ್ಥೆ ಇಲಾಖೆ ಬಳಿ ಇಲ್ಲದಿರುವುದು ಅಧಿಕಾರಿಗಳ ತಲೆನೋವಿಗೆ ಕಾರಣವಾಗಿದೆ. ಹಾಗಾಗಿ ಅಧಿಕಾರಿಗಳು ಪ್ರಸಾದ ಸಿದ್ಧಪಡಿಸಿದವರಿಗೆ ಮೊದಲು ಸೇವಿಸಲು ನೀಡಲಾಗುತ್ತದೆ. ಅವರಿಗೆ ಯಾವುದೇ ತೊಂದರೆಯಾಗದಿರುವುದನ್ನು ಖಚಿತ ಪಡಿಸಿಕೊಂಡ ಬಳಿಕವೇ ಭಕ್ತರಿಗೆ ವಿತರಿಸಲಾಗುತ್ತದೆ. ಆದರೂ ಪ್ರಸಾದ ಸೇವನೆಯಿಂದ ಏನಾದರೂ ತೊಂದರೆಯಾದರೆ ಅದಕ್ಕೆ ಆರೋಗ್ಯ ಇಲಾಖೆ ಪ್ರಥಮ ಚಿಕಿತ್ಸೆ ನೀಡಬಹುದೇ ಹೊರತು ಅನಾಹುತವನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ವರದಿಗೆ 2 ದಿನ ಬೇಕು: ಆರೋಗ್ಯ ಇಲಾಖೆ ಯಾವುದೇ ಆಹಾರ ಪದಾರ್ಥವನ್ನು ಪರೀಕ್ಷೆಗೆ ಕಳುಹಿಸಿದರೆ, ಅದರ ಅಧಿಕೃತ ವರದಿ ಸಂಬಂಧಪಟ್ಟ ಅಧಿಕಾರಿಗಳ ಕೈ ಸೇರಲು ಕನಿಷ್ಠ ಎರಡು ದಿನಗಳು ಬೇಕಾಗುತ್ತದೆ. ಈ ಪ್ರಸಾದದ ಪರೀಕ್ಷೆಯೂ ಇದೇ ಮಾದರಿಯಲ್ಲಿ ನಡೆಸಲಾಗುತ್ತದೆ. ಪ್ರಸಾದದ ಸ್ಯಾಂಪಲ್ ಅನ್ನು ಪ್ಯಾಕ್ ಮಾಡಿ, ಬೆಂಗಳೂರಿನ ಪರೀಕ್ಷಾ ಕೇಂದ್ರಕ್ಕೆ ರವಾನಿಸಲಾಗುತ್ತದೆ. ಇದರ ವರದಿ ಬರಲು ಕನಿಷ್ಠ 48 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ. ಅಷ್ಟರಲ್ಲಿ ಕಾರ್ಯಕ್ರಮವೇ ಮುಗಿದು ಎರಡು ದಿನಗಳು ಕಳೆದಿರುತ್ತದೆ. ನಂತರ ಬರುವ ಪ್ರಸಾದದ ಪರೀಕ್ಷಾ ವರದಿ ಪ್ರಯೋಜನಕ್ಕೆ ಬಾರದಂತಾಗುತ್ತದೆ.

‘ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿತರಿಸಲಾಗುವ ಪ್ರಸಾದವನ್ನು ಪರೀಕ್ಷಿಸಿ ತಕ್ಷಣ ವರದಿ ನೀಡಲು ಸಾಧ್ಯವಿಲ್ಲ. ಹಾಗಾಗಿ ಪ್ರಸಾದ ಸಿದ್ಧಪಡಿಸಿದವರಿಗೆ ಮೊದಲು ಸೇವಿಸಲು ಹೇಳುತ್ತೇವೆ. ನಂತರ ಪ್ರಸಾದ ವಿತರಣೆಗೆ ಅನುಮತಿ ನೀಡುತ್ತೇವೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದು ಸಂಕಷ್ಟಕ್ಕೆ ಸಿಲುಕಿಸಿದೆ’ ಎಂದು ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಟಿ. ಅಮರನಾಥ್ ತಿಳಿಸಿದರು.

*ಯಾವುದೇ ಆಹಾರ ಮಾದರಿಯ ವರದಿ ಕೈ ಸೇರಲು ಕನಿಷ್ಠ 48 ಗಂಟೆ ಬೇಕು. ಹೀಗಾಗಿ ಪ್ರಸಾದ ಸೇವಿಸಿದವರಿಗೆ ಮೊದಲು ತಿನ್ನಿಸಿ ನಂತರ ಭಕ್ತರಿಗೆ ವಿತರಣೆ ಮಾಡಿಸಲಾಗುತ್ತಿದೆ
-ಡಾ. ಅಮರ್‌ನಾಥ್‌,ಡಿಎಚ್‌ಒ, ರಾಮನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.