ADVERTISEMENT

ಇಂದಿನಿಂದ ‘ನಮೂನೆ 3ಎ’ ಇ–ಖಾತೆ ಅಭಿಯಾನ: ಶಶಿ

ಮೂರು ತಿಂಗಳು ನಡೆಯುವ ಅಭಿಯಾನ; ನಗರಸಭೆಯಲ್ಲಿ ಪ್ರತ್ಯೇಕ ಕೌಂಟರ್ ಇಂದು ಆರಂಭ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2025, 4:50 IST
Last Updated 19 ಫೆಬ್ರುವರಿ 2025, 4:50 IST
ರಾಮನಗರ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ ಹಾಗೂ ಸದಸ್ಯರು ಇದ್ದಾರೆ
ರಾಮನಗರ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಮಾತನಾಡಿದರು. ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ ಹಾಗೂ ಸದಸ್ಯರು ಇದ್ದಾರೆ   

ರಾಮನಗರ: ‘ನಗರಸಭೆ ವ್ಯಾಪ್ತಿಯಲ್ಲಿರುವ ಅನಧಿಕೃತ ಬಡಾವಣೆಗಳಲ್ಲಿ ಮನೆ ಹಾಗೂ ನಿವೇಶನಗಳನ್ನು ಹೊಂದಿರುವವರಿಗೂ ಸರ್ಕಾರ ಇ–ಖಾತೆ ಭಾಗ್ಯ ನೀಡಲು ಮುಂದಾಗಿದೆ. ಅದರಂತೆ ನಗರಸಭೆಯಲ್ಲಿ ಬುಧವಾರದಿಂದ ‘ನಮೂನೆ–3ಎ’ ಇ-ಖಾತೆ ನೀಡುವ ಅಭಿಯಾನ ಆರಂಭಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ನಗರದ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಅವರು, ‘ಮೂರು ತಿಂಗಳು ಅಂದರೆ ಮೇ 10ರವರೆಗೆ ಅಭಿಯಾನ ನಡೆಯಲಿದೆ. ಅನಧಿಕೃತ ಬಡಾವಣೆಗಳಲ್ಲಿ ಮನೆ ಮತ್ತು ನಿವೇಶನ ಹೊಂದಿರುವವರು ಕೂಡಲೇ ಅರ್ಜಿ ಸಲ್ಲಿಸಿ ನಮೂನೆ–3ಎ ಇ–ಖಾತೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

‘ಅಭಿಯಾನವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಈಗಾಗಲೇ ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಪೂರ್ವಭಾವಿ ಸಭೆ ನಡೆಸಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 7 ಸಾವಿರ ಅನಧಿಕೃತ ಆಸ್ತಿಗಳಿವೆ. 2024ರ ಸೆ. 10ರೊಳಗೆ ನೋಂದಣಿಯಾಗಿರುವ ಆಸ್ತಿಗಳಿಗೆ ಇ–ಖಾತೆ ನೀಡಲು ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ. ಇದರಿಂದ ಮನೆ ಮಾರಾಟ, ಬ್ಯಾಂಕ್ ಸಾಲ ಸೇರಿದಂತೆ ಹಲವು ರೀತಿಯ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಸಾರ್ವಜನಿಕರು ಅಭಿಯಾನ ಸೇರಿದಂತೆ ನಗರಸಭೆಯ ಯಾವುದೇ ಕೆಲಸ–ಕಾರ್ಯಗಳಿಗೆ ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು. ಬದಲಿಗೆ, ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸಂಪರ್ಕಿಸಿ ಕೆಲಸ ಮಾಡಿಸಿಕೊಳ್ಳಬೇಕು. ದಾಖಲೆಗಳು ಸರಿಯಾಗಿದ್ದರೂ ಅಧಿಕಾರಿಗಳು ಸರಿಯಾಗಿ ಸ್ಪಂದಿಸದಿದ್ದರೆ ನನಗೆ ಮತ್ತು ಪೌರಾಯುಕ್ತರ ಗಮನಕ್ಕೆ ತರಬೇಕು’ ಎಂದು ಹೇಳಿದರು.

ಪೌರಾಯುಕ್ತ ಡಾ. ಜಯಣ್ಣ ಮಾತನಾಡಿ, ‘ಸರ್ಕಾರದ ಸೂಚನೆಯಂತೆ ನಡೆಯುತ್ತಿರುವ ಅಭಿಯಾನದಡಿ ಮಾಡಿಕೊಡುವ ಇ–ಖಾತೆಗಳಿಗೆ ಸರ್ಕಾರ ದುಪ್ಪಟ್ಟು ಶುಲ್ಕ ನಿಗದಿಪಡಿಸಲಿದೆ. ಮುಂದೆ ಏಕ ಶುಲ್ಕ ಅನ್ವಯಿಸಲಿದೆ. ಮೂರು ತಿಂಗಳು ಸಮರೋಪಾದಿಯಲ್ಲಿ ನಡೆಯಲಿರುವ ಅಭಿಯಾನಕ್ಕೆ ಲಭ್ಯ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನೇ ಬಳಸಿಕೊಳ್ಳಲಾಗುವುದು’ ಎಂದು ತಿಳಿಸಿದರು.

‘ಅಭಿಯಾನದಡಿ ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸಲು ನಗರಸಭೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು. ಮೊದಲು ಬಂದವರಿಗೆ ಆದ್ಯತೆ ತತ್ವದಡಿ ಅರ್ಜಿಗಳಿಗೆ ಕ್ರಮ ಸಂಖ್ಯೆ ನೀಡಿ ತ್ವರಿತವಾಗಿ ವಿಲೇವಾರಿ ಮಾಡಲಾಗುವುದು. ಅರ್ಜಿಗಳ ಹರಿವು ನೋಡಿಕೊಂಡು ವಾರ್ಡ್‌ ಮಟ್ಟದಲ್ಲೂ ಅಭಿಯಾನ ನಡೆಸುವ ಕುರಿತು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಕೌಂಟರ್‌ಗೆ ಬಂದು ಕೊಟ್ಟು ಇ–ಖಾತೆ ಮಾಡಿಸಿಕೊಳ್ಳಬಹುದು. ಇಲ್ಲದಿದ್ದರೆ, ಜನಹಿತ ಮೂಲಕ ಆನ್‌ಲೈನ್‌ನಲ್ಲೇ ಅಪ್ಲೋಡ್‌ ಮಾಡಬಹುದು. ಅದನ್ನು ನಮ್ಮ ಸಿಬ್ಬಂದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರಿಗೆ ಎರಡೂ ರೀತಿಯ ಆಯ್ಕೆಗಳಿವೆ’ ಎಂದು ಹೇಳಿದರು.

‘ಲೋಕಾಯುಕ್ತ ತನಿಖೆಗೆ ಒಳಪಟ್ಟಿರುವ 1,800 ಖಾತೆಗಳಿಗೆ ಸಂಬಂಧಿಸಿದಂತೆ ಏನು ಮಾಡಬೇಕು ಎಂಬುದರ ಕುರಿತು ಸ್ಪಷ್ಟನೆ ಕೋರಿ, ಲೋಕಾಯುಕ್ತ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು. ಅಲ್ಲಿಂದ ಬರುವ ನಿರ್ದೇಶನದಂತೆ ಮುಂದುವರಿಯಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಜಯಣ್ಣ ಪ್ರತಿಕ್ರಿಯಿಸಿದರು.

ನಗರಸಭೆ ಉಪಾಧ್ಯಕ್ಷ ಆಯೇಷಾ ಬಾನು, ಸದಸ್ಯರಾದ ಬಿ.ಸಿ. ಪಾರ್ವತಮ್ಮ, ಸೋಮಶೇಖರ್, ಅಸ್ಮತ್‌ಉಲ್ಲಾ ಖಾನ್, ಗೋವಿಂದರಾಜು, ಸಮದ್ ಸೇರಿದಂತೆ ಇತರ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

– ಆಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ಮಾಲೀಕತ್ವ ಸಾಬೀತುಪಡಿಸುವ ನೋಂದಾಯಿತ ಮಾರಾಟ ಪತ್ರ, ದಾನಪತ್ರ, ವಿಭಾಗ ಪತ್ರ, ಸರ್ಕಾರ ಅಥವಾ ಸರ್ಕಾರದ ನಿಗಮ ಮಂಡಳಿಗಳಿಂದ ನೀಡಲಾದ ಹಕ್ಕುಪತ್ರ, ಮಂಜೂರಾತಿ ಪತ್ರ ಅಥವಾ ಕಂದಾಯ ಇಲಾಖೆಯಿಂದ ‘94 ಸಿಸಿ’ಯಡಿ ನೀಡಿರುವ ಹಕ್ಕುಪತ್ರ.

– ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಯಾದ ದೃಢೀಕೃತ ಪ್ರತಿ ಮತ್ತು ನಿವೇಶನ ಬಿಡುಗಡೆ ಪತ್ರ.– ಪ್ರಸಕ್ತ ಸಾಲಿನವರೆಗೆ ಋಣಭಾರ ಪ್ರಮಾಣಪತ್ರ.

– ಚಾಲ್ತಿ ಸಾಲಿನ ಆಸ್ತಿ ತೆರಿಗೆ ಪಾವತಿ ರಸೀತಿ.

– ಮಾಲೀಕರ ಇತ್ತೀಚಿನ ಭಾವಚಿತ್ರ ಮತ್ತು ಸ್ವತ್ತಿನ ಚಿತ್ರ.– ಮಾಲೀಕರ ಗುರುತಿನ ದಾಖಲೆ ಪ್ರತಿ.

ಈ ಅಭಿಯಾನ ಅಕ್ರಮ ಸಕ್ರಮವಲ್ಲ. ಸರ್ಕಾರಿ ಜಾಗದಲ್ಲಿ ಒತ್ತುವರಿ ಜಾಗದಲ್ಲಿ ನಗರಸಭೆಗೆ ಸೇರಿದ ಆಸ್ತಿಯಲ್ಲಿರುವ ಮನೆ ಹಾಗೂ ಕಟ್ಟಡಗಳಿಗೆ ‘ನಮೂನೆ 3ಎ’ ಇ–ಖಾತೆ ಅಭಿಯಾನವು ಅನ್ವಯಿಸುವುದಿಲ್ಲ
ಕೆ. ಶೇಷಾದ್ರಿ ಶಶಿ ಅಧ್ಯಕ್ಷ ರಾಮನಗರ ನಗರಸಭೆ

ಅಭಿಯಾನಕ್ಕೆ ವ್ಯಾಪಕ ಪ್ರಚಾರ

‘ಮೂರು ತಿಂಗಳು ನಡೆಯುವ ಇ–ಖಾತೆ ಅಭಿಯಾನದ ಕುರಿತು ನಗರಸಭೆ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ನಡೆಸಲಾಗುವುದು. ಕರಪತ್ರ ಮುದ್ರಿಸಿ ವಾರ್ಡ್‌ಮಟ್ಟದಲ್ಲಿ ಹಂಚಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಅಭಿಯಾನದ ಮಾಹಿತಿ ಒಳಗೊಂಡ ಫ್ಲೆಕ್ಸ್‌ ಅಳವಡಿಸಲಾಗುವುದು. ಮನೆ ಬಾಗಿಲಿಗೆ ಬಂದು ಕಸ ಸಂಗ್ರಹಿಸುವ ಆಟೊ ಟಿಪ್ಪರ್‌ಗಳಲ್ಲಿ ಘೋಷಣೆ ಮಾಡಲಾಗುವುದು. ಮಾಧ್ಯಮಗಳ ಮೂಲಕವೂ ಪ್ರಚಾರ ಮಾಡಲಾಗುವುದು’ ಎಂದು ಕೆ. ಶೇಷಾದ್ರಿ ಹಾಗೂ ಡಾ. ಜಯಣ್ಣ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.