ADVERTISEMENT

ಗಾಂಜಾ ನಿಯಂತ್ರಣಕ್ಕೆ ಜಿಪಿಎಸ್‌ ಬಳಕೆ!

ಮ್ಯಾಪಿಂಗ್‌ ಮೂಲಕ ನಿಗಾ; ಅಪರಾಧ ಕೃತ್ಯ ನಿಯಂತ್ರಣಕ್ಕೆ ಅನುಕೂಲ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2020, 19:49 IST
Last Updated 19 ಸೆಪ್ಟೆಂಬರ್ 2020, 19:49 IST

ರಾಮನಗರ: ರಾಜ್ಯದಲ್ಲಿ ಗಾಂಜಾ ಹಾವಳಿ ನಿಯಂತ್ರಣಕ್ಕೆ ಗೃಹ ಇಲಾಖೆ ಹೊಸ ಯೋಜನೆ ರೂಪಿಸಿದ್ದು, ಈ ಮಾದಕ ವಸ್ತು ಬೆಳೆಯಲಾಗುತ್ತಿರುವ ಪ್ರದೇಶಗಳನ್ನು ಜಿಪಿಎಸ್ ಮೂಲಕ ಮ್ಯಾಪಿಂಗ್‌ ಮಾಡಲು ಮುಂದಾಗಿದೆ.

ಈ ಕುರಿತು ಗೃಹ ಇಲಾಖೆ ಎಲ್ಲ ಜಿಲ್ಲೆಗಳ ಪೊಲೀಸ್‌ ವರಿಷ್ಟಾಧಿಕಾರಿಗಳಿಗೆ ಆದೇಶ ರವಾನಿಸಿದೆ. ಕಳೆದೊಂದು ವರ್ಷದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಗಾಂಜಾ ಬೆಳೆಯಲಾಗಿತ್ತೋ ಆ ಪ್ರದೇಶಗಳ ಮ್ಯಾಪಿಂಗ್‌ ಕಾರ್ಯ ನಡೆಸಿ ಅವುಗಳ ಲೊಕೇಶನ್ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಶುಕ್ರವಾರ ಈ ಆದೇಶ ಹೊರಬಿದ್ದಿದ್ದು, ಸದ್ಯ ಅಧಿಕಾರಿಗಳ ತಂಡ ಈ ಕಾರ್ಯಕ್ಕೆ ಸನ್ನದ್ಧವಾಗುತ್ತಿದೆ.

ಒಮ್ಮೆ ಗಾಂಜಾ ಬೆಳೆಯುವ ಭೂಮಿ ಸಿಕ್ಕಲ್ಲಿ ಅದನ್ನು ಇಲಾಖೆ ಮ್ಯಾಪಿಂಗ್‌ ಮಾಡಿಕೊಂಡು ಅದರ ದತ್ತಾಂಶ ಸಂಗ್ರಹಿಸಲಿದೆ. ಇದರಿಂದ ಮುಂದಿನ ವರ್ಷಗಳಲ್ಲಿ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಆಗಿ ಬರುವ ಇನ್‌ಸ್ಪೆಕ್ಟರ್‌, ಸಬ್‌ ಇನ್‌ಸ್ಪೆಕ್ಟರ್‍ ಹಾಗೂ ಸಿಬ್ಬಂದಿಗೆ ತಮ್ಮ ವ್ಯಾಪ್ತಿಯಲ್ಲಿ ಎಲ್ಲೆಲ್ಲಿ ಹೀಗೆ ಗಾಂಜಾ ಬೆಳೆಯಲಾಗುತ್ತದೆ ಎಂಬ ಮಾಹಿತಿ ಸಿಗಲಿದೆ. ಇದರಿಂದ ಅವರು ಇಂತಹ ಕೃತ್ಯಗಳನ್ನು ಆರಂಭದ ದಿನಗಳಿಂದಲೇ ನಿಯಂತ್ರಣದಲ್ಲಿ ಇಡಬಹುದಾಗಿದೆ ಎನ್ನುವುದು ಈ ಯೋಜನೆ ಉದ್ದೇಶವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.