ಮಾಗಡಿ: ಪಟ್ಟಣದ ಹೊಸಪೇಟೆ ವೃತ್ತದ ಬಳಿ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಿಂದ ನಿರ್ಮಾಣವಾಗುತ್ತಿರುವ ಗೋದಾಮನ್ನು ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದ ಅಧಿಕಾರಿಗಳು ವೀಕ್ಷಿಸಿದರು.
ನಿಗಮದ ಎಂಡಿ ತನಿಶಾಲಾಲ್ ಹಾಗೂ ಡಿಡಿ ಹರಿಪ್ರಸಾದ್ ಅವರು ಗೋದಾಮು ವೀಕ್ಷಿಸಿ, ಸಂಘದ ಕಾರ್ಯ ವೈಖರಿ ಬಗ್ಗೆ ಪರಿಶೀಲನೆ ನಡೆಸಿದರು.
ಈ ವೇಳೆ ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್ ಮಾತನಾಡಿ, ₹3.5 ಕೋಟಿ ವೆಚ್ಚದಲ್ಲಿ ಗೋದಾಮು ನಿರ್ಮಾಣ ಮಾಡಲಾಗುತ್ತಿದ್ದು, ಕೇಂದ್ರ ಸರ್ಕಾರದ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮದಿಂದ ₹2 ಕೋಟಿ ಸಾಲ ನೀಡುವಂತೆ ಮನವಿ ಮಾಡಲಾಗಿದೆ. ಹಾಗಾಗಿ ಅಧಿಕಾರಿಗಳ ತಂಡ ಭೇಟಿ ನೀಡಿ ಸಂಘದ ಕಾರ್ಯ ವೈಖರಿಯನ್ನು ಪರಿಶೀಲಿಸಿ, ಸಾಲ ಬಿಡುಗಡೆ ಮಾಡುವ ಭರವಸೆ ನೀಡಿದರು ಎಂದರು.
ಅಂದಾಜು 2,300 ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮನ್ನು ನಿರ್ಮಾಣ ಮಾಡಲಾಗುತ್ತಿದೆ. ಇನ್ನು ಐದು ತಿಂಗಳಲ್ಲಿ ಗೋದಾಮು ಕಾಮಗಾರಿ ಪೂರ್ಣಗೊಳ್ಳಲಿದೆ.
ಮುಂದಿನ ವರ್ಷ ಮಾಗಡಿಯಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದರು.
ರಾಜಣ್ಣ, ಸೋಮಶೇಖರ್, ಮಹದೇವಯ್ಯ, ರಮೇಶ್, ಗಂಗಣ್ಣ, ರಘು, ನಾರಾಯಣ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.