ADVERTISEMENT

ದೇವರಹೊಸಹಳ್ಳಿ ಬ್ರಹ್ಮರಥೋತ್ಸವ ಸಂಭ್ರಮ

ಜಾತ್ರೆಯಲ್ಲಿ ಎಲ್ಲರ ಗಮನ ಸೆಳೆದ ನವ ದಂಪತಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2019, 13:33 IST
Last Updated 13 ಜುಲೈ 2019, 13:33 IST
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು
ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿಯಲ್ಲಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ನಡೆಯಿತು   

ಚನ್ನಪಟ್ಟಣ: ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ದೇವರಹೊಸಹಳ್ಳಿ ಶ್ರೀಲಕ್ಷ್ಮಿವೆಂಕಟೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಸಂಜೀವರಾಯಸ್ವಾಮಿ ತೋಮಾಲ ಸೇವೆ, ವೈಕುಂಠ ಸೇವಾದರ್ಶನ ಶನಿವಾರ ಶ್ರದ್ಧಾಭಕ್ತಿಯಿಂದ ನಡೆಯಿತು.

ಮಧ್ಯಾಹ್ನ 1.30ರಿಂದ 2.30ರೊಳಗೆ ತುಲಾ ಲಗ್ನದಲ್ಲಿ ನಡೆದ ರಥೋತ್ಸವಕ್ಕೆ ತಹಶೀಲ್ದಾರ್ ಜಯಣ್ಣ, ಉಪ ತಹಶೀಲ್ದಾರ್ ಮಹದೇವಯ್ಯ ಚಾಲನೆ ನೀಡಿದರು. ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ಸಂಜೀವರಾಯಸ್ವಾಮಿ ದೇವಸ್ಥಾನದ ಟ್ರಸ್ಟ್ ಪದಾಧಿಕಾರಿಗಳ ಸಮ್ಮುಖದಲ್ಲಿ ರಥವನ್ನು ಭಕ್ತಿಭಾವದಿಂದ ಎಳೆಯುವ ಮೂಲಕ ದೇವರ ಕೃಪೆಗೆ ಪಾತ್ರರಾದರು.

ಇದಕ್ಕೂ ಮೊದಲು ಸಂಜೀವರಾಯಸ್ವಾಮಿ ಶಿಲ್ಪಕಲಾ ಸುವರ್ಣ ಮಂಟಪದ ಮಧ್ಯೆ ವೈಕುಂಠ ಸೇವಾದರ್ಶನ, ತೋಮಾಲ ಸೇವೆ, ಮಹಾ ಮಂಗಳಾರತಿ, ವಿಮಾನ ಗೋಪುರಕ್ಕೆ ವಿದ್ಯುತ್ ಲಕ್ಷದೀಪೋತ್ಸವ, ಪುಷ್ಪಾಲಂಕಾರ, ವಿಶ್ವರೂಪ ದರ್ಶನ ಸೇವೆ, ಅನ್ನರಾಶಿ ಪೂಜೆ, ಮಜ್ಜಿಗೆ, ಪಾನಕ ವಿತರಣೆ ನಂತರ ತಿರುಪ್ಪಾವಡೆ ಸೇವೆ, ಗೋವು, ಅಶ್ವ, ಗಜಪೂಜೆ ನಡೆಯಿತು.

ADVERTISEMENT

ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು. ಸಂಜೆ ಡೋಲೋತ್ಸವ ಮತ್ತು ಮಂದಹಾಸ ದೀಪೋತ್ಸವ, ತೆಪ್ಪೋತ್ಸವ ಮತ್ತು ವರ್ಣರಂಜಿತ ಬಾಣ ಬಿರುಸುಗಳ ಪ್ರದರ್ಶನ ನಡೆಯಿತು. ವಿದ್ಯುತ್ ದೀಪದೊಂದಿಗೆ ಚಂದ್ರಮಂಡಲ ಪಲ್ಲಕ್ಕಿ ಉತ್ಸವ, ಶಾಸ್ತ್ರೀಯ ಸಂಗೀತ ಕಛೇರಿ ಏರ್ಪಡಿಸಲಾಗಿತ್ತು.

ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಲು ಹಾಗೂ ಸಂಜೀವರಾಯಸ್ವಾಮಿ ದರ್ಶನ ಪಡೆಯಲು ಬೆಳಿಗ್ಗೆಯಿಂದಲೇ ನೂರಾರು ಭಕ್ತರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ರಥೋತ್ಸವ ಸಂದರ್ಭದಲ್ಲಿ ಲಕ್ಷ್ಮಿವೆಂಕಟೇಶ್ವರಸ್ವಾಮಿಗೆ ಜೈಕಾರ ಹಾಕಿದ ಭಕ್ತಾಧಿಗಳು, ರಥಕ್ಕೆ ಹಣ್ಣು-ಜವನ ಅರ್ಪಿಸಿ ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿದರು.

ವಿವಾಹ ಜೀವನಕ್ಕೆ ಕಾಲಿಟ್ಟ ನವ ದಂ‍‍ಪತಿ ಜಾತ್ರೆಯಲ್ಲಿ ಪಾಲ್ಗೊಂಡು ಎಲ್ಲರ ಗಮನ ಸೆಳೆದರು. ಭಕ್ತಾಧಿಗಳ ಅನುಕೂಲಕ್ಕಾಗಿ ಚನ್ನಪಟ್ಟಣ ಹಾಗೂ ರಾಮನಗರ ಬಸ್ ನಿಲ್ದಾಣಗಳಿಂದ ವಾಹನ ಸೌಕರ್ಯ ಕಲ್ಪಿಸಲಾಗಿತ್ತು.

ಜುಲೈ 14ರ ಭಾನುವಾರ ಬೆಳಿಗ್ಗೆ ಶಾಂತಿಹೋಮ, ಕಳಸಪೂಜೆ, ಅಷ್ಟೋತ್ತರಶತ, ಅಮೃತ ಕಲಶ ಪೂಜೆ, ಮಹಾಕುಂಭಾಭಿಷೇಕ, ನೈವೇದ್ಯ ನಡೆಯಲಿದೆ. ಸಾಯಂಕಾಲ ಪೂರ್ಣಾಹುತಿ, ಧ್ವಜಾವರೋಹಣ, ಅಷ್ಟಾವಧಾನ ಸೇವೆ, ರಾತ್ರಿ ಪುಷ್ಪಯಾಗ ಜರುಗಲಿದೆ.

ಜುಲೈ 15ರ ಸೋಮವಾರ ಬೆಳಿಗ್ಗೆ ಅಭಿಷೇಕ ಮತ್ತು ಮಹಾಮಂಗಳಾರತಿ, ರಾತ್ರಿ ಶಯನೋತ್ಸವ ನಂತರ ನಾದಸ್ವರ ಕಾರ್ಯಕ್ರಮ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.