ADVERTISEMENT

ರಾಮನಗರ | ಜಿಲ್ಲಾ ಮಟ್ಟದ ಯುವ ಜನೋತ್ಸವ: ಪರಂಪರೆ ಕಾಪಿಡುವ ಸಾಂಸ್ಕೃತಿಕ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:23 IST
Last Updated 16 ಅಕ್ಟೋಬರ್ 2025, 2:23 IST
<div class="paragraphs"><p>ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ‌ ಬುಧವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.&nbsp;&nbsp;</p></div>

ರಾಮನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ‌ ಬುಧವಾರ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಗಣ್ಯರು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.  

   

ರಾಮನಗರ: ‘ಸಾಂಸ್ಕೃತಿಕ ಚಟುವಟಿಕೆಗಳು ನಮ್ಮ ಪರಂಪರೆಯನ್ನು ಕಾಪಿಡುವ ಜೊತೆಗೆ ಅವುಗಳ ಸ್ವಾದವನ್ನು ಮುಂದಿನ ತಲೆಮಾರಿಗೆ ತಲುಪಿಸುವ ವಾಹಕಗಳಾಗಿವೆ. ಯುವಜನರು ಶಿಕ್ಷಣಕ್ಕಷ್ಟೇ ಸೀಮಿತವಾಗದೆ ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಆ ಮೂಲಕ ನಮ್ಮ ಸಂಸ್ಕೃತಿ ಮತ್ತು ಸಾಂಸ್ಕೃತಿಕತೆಯನ್ನು ಅರಿಯಬೇಕು’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೆ. ಸತೀಶ್ ಸಲಹೆ ನೀಡಿದರು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ಇತ್ತೀಚೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯುವ ಸಮುದಾಯದ ಭಾಗವಹಿಸುವಿಕೆ ಕಡಿಮೆಯಾಗುತ್ತಿದೆ. ಶಿಕ್ಷಣದ ಜೊತೆಗೆ ಶಿಕ್ಷಣೇತರ ಚಟುವಟಿಕೆಗಳಾದ ನೃತ್ಯ, ಗಾಯನ, ಕ್ರೀಡೆ ಸೇರಿದಂತೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇವು ನಮ್ಮ ಒತ್ತಡ ತಗ್ಗಿಸುವ ಜೊತೆಗೆ ಮಾನಸಿಕವಾಗಿ ಮತ್ತಷ್ಟು ಸದೃಢಗೊಳಿಸುತ್ತವೆ’ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಮಾತನಾಡಿ, ‘ಸಂಸ್ಕೃತಿ ಉಳಿಸಿ, ಬೆಳೆಸುವಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಯುವಜನರು ನಾಟಕ, ನೃತ್ಯ, ಜನಪದ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ಪ್ರದರ್ಶಿಸಬೇಕು’ ಎಂದು ತಿಳಿಸಿದರು.

‘ಯುವಜನೋತ್ಸವ ಕಾರ್ಯಕ್ರಮದಲ್ಲಿ ಸುಮಾರು 350ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದಾರೆ. ಸ್ಪರ್ಧೆಯಲ್ಲಿ ಜನಪದ ಗೀತೆ, ಜನಪದ ನೃತ್ಯ, ಕಥೆ ಬರೆಯುವುದು, ಕವಿತೆ ಬರೆಯುವುದು, ಘೋಷಣೆ, ವಿಜ್ಞಾನ ಮೇಳ ಹೀಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಸುಪ್ತ ಪ್ರತಿಭೆ ಅನಾವರಣಕ್ಕೆ ವೇದಿಕೆ ಒದಗಿಸಲಾಗಿದೆ’ ಎಂದರು.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಗಮನ ಸೆಳೆದ ಜಾನಪದ ನೃತ್ಯ

‘ಈ ಬಾರಿ ಅಂಬೇಡ್ಕರ್ ಭವನದಲ್ಲಿ ಜನಪದ ನೃತ್ಯ ಮತ್ತು ಜನಪದ ಗೀತೆಗೆ ವೇದಿಕೆ ಕಲ್ಪಿಸಲಾಗಿದೆ. ಭಾರತೀಯ ವಿದ್ಯಾಪೀಠದಲ್ಲಿ ಕವಿತೆ ವಾಚನ, ಕವನ ಬರೆಯುವ, ಕಥೆ ಬರೆಯುವ ಸ್ಪರ್ಧೆ, ಚಿತ್ರಕಲೆ, ವಿಜ್ಞಾನ ಮೇಳ ಹತ್ತು ಹಲವು ರೀತಿಯ ಸ್ಪರ್ಧೆ ಆಯೋಜಿಸಲಾಗಿದೆ. ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳು ರಾಜ್ಯಮಟ್ಟದ ಯುವಜನೋತ್ಸವಕ್ಕೆ ಆಯ್ಕೆಗೊಳ್ಳುತ್ತಾರೆ’ ಎಂದು ಹೇಳಿದರು.

ಯುವಜನೋತ್ಸವ ಕಾರ್ಯಕ್ರಮದಲ್ಲಿ ಜಾನಪದ ಗೀತೆ ಗಾಯನ

‘ಯಾದಗಿರಿ ಜಿಲ್ಲೆಯಲ್ಲಿ ರಾಜ್ಯಮಟ್ಟದ ಸ್ಪರ್ಧೆ ನಡೆಯಲಿದೆ. ಅಲ್ಲಿ ವಿಜೇತರಾದವರು ರಾಷ್ಟ್ರೀಯ ಮಟ್ಟಕ್ಕೆ ಅರ್ಹರಾಗುತ್ತಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಂದ ಬಂದಿರುವ ಸ್ಪರ್ಧಿಗಳು ಉತ್ಸುಕರಾಗಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಎಲ್ಲ ಸ್ಪರ್ಧಿಗಳಿಗೆ ಹಾಗೂ ತೀರ್ಪುಗಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ತಿಳಿಸಿದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಕುಂಬಾಪುರ ಬಾಬು, ಸುಂದರ್ ಗೌಡ, ಹನುಮಂತ ನಾಯ್ಕ, ನಂಜುಂಡಿ, ಅಂಕನಳ್ಳಿ ಪಾರ್ಥ,  ಕನ್ನಡ ಜಾಗೃತಿ ಸಮಿತಿ ಸದಸ್ಯ ನಮನ ಚಂದ್ರು, ಹಿರಿಯ ಕಲಾವಿದರಾದ ಗೋವಿಂದಯ್ಯ, ಪುಟ್ಟರಾಜು, ಬ್ಯಾಡರಹಳ್ಳಿ ಶಿವಕುಮಾರ್ ಹಾಗೂ ಇತರರು ಇದ್ದರು.

ಯುವಜನೋತ್ಸವದಲ್ಲಿ ಯುವತಿಯರು ಡೊಳ್ಳು ಕುಣಿತ ಪ್ರದರ್ಶನ ನೀಡಿದರು

ಸುಳಿಯದ ಜನಪ್ರತಿನಿಧಿಗಳು

ಜಿಲ್ಲಾ ಮಟ್ಟದ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಯಾವೊಬ್ಬ ಜನಪ್ರತಿನಿಧಿಯೂ ಸುಳಿಯಲಿಲ್ಲ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಕಣ್ತುಂಬಿಕೊಳ್ಳಲು ಭವನದ ತುಂಬಾ ವಿದ್ಯಾರ್ಥಿಗಳು ತುಂಬಿದ್ದರು. ಡೊಳ್ಳು ಕುಣಿತ ಪಟ ಕುಣಿತ ಪೂಜಾ ಕುಣಿತ ಜಾನಪದ ಗೀತೆ ಗಾಯನ ಚಿತ್ರಕಲೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಜಾನಪದ ನೃತ್ಯ ಹಾಗೂ ಹಾಡಿಗೆ ಯುವಜನರು ಸಹ ಹೆಜ್ಜೆ ಹಾಕಿ ಸಂಭ್ರಮಿಸಿದರು. ಅಧಿಕಾರಿಗಳು ಹಾಗೂ ಇತರ ಗಣ್ಯರು ಕಾರ್ಯಕ್ರಮದ ಕಡೆವರೆಗೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.