ADVERTISEMENT

ಸಾತನೂರು: ಡಾಬಾ ಎದುರು ಗ್ರಾ.ಪಂ. ಸದಸ್ಯನ ಕೊಲೆ

ಕಾಂಗ್ರೆಸ್ ಮುಖಂಡನ ಕೊಲೆಗೆ ಕಾರಣವಾದ ನಿವೇಶನ ವಿವಾದ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 5:38 IST
Last Updated 28 ಜುಲೈ 2025, 5:38 IST
ಕೊಲೆಯಾದ ಎನ್. ನಂಜೇಶ್
ಕೊಲೆಯಾದ ಎನ್. ನಂಜೇಶ್   

ಕನಕಪುರ: ತಾಲ್ಲೂಕಿನ ಸಾತನೂರಿನ ಡಾಬಾ ಎದುರು ಅಚ್ಚಲು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಹೊಂಗಾಣಿದೊಡ್ಡಿಯ ಎನ್. ನಂಜೇಶ್ (46) ಅವರನ್ನು ನಾಲ್ಕೈದು ಮಂದಿಯ ತಂಡ ಶನಿವಾರ ರಾತ್ರಿ ಮಾರಕಾಸ್ತ್ರಗಳಿಂದ ಹೊಡೆದ ಕೊಲೆ ಮಾಡಿದೆ.

ಸ್ಥಳೀಯ ಕಾಂಗ್ರೆಸ್ ಮುಖಂಡ, ಮೂರು ಸಲ ಪಂಚಾಯಿತಿ ಸದಸ್ಯ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ನಂಜೇಶ್ ಕೊಲೆಗೆ ನಿವೇಶನಕ್ಕೆ ಸಂಬಂಧಿಸಿದ ವಿವಾದ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.

ಸಾತನೂರಿನ ಕನಕಪುರ ರಸ್ತೆಯಲ್ಲಿರುವ ಆರ್.ಕೆ. ಡಾಬಾದಲ್ಲಿ ನಂಜೇಶ್ ಅವರು ರಾತ್ರಿ 8.30ರ ಸುಮಾರಿಗೆ ಸ್ನೇಹಿತ ಚೇತನ್ ಜೊತೆ ಊಟ ಮಾಡಿಕೊಂಡು ಹೊರಬಂದರು. ಇದೇ ವೇಳೆ, ಹೊರಗೆ ಕಾಯುತ್ತಿದ್ದ ಹಂತಕರು ಏಕಾಏಕಿ ಲಾಂಗು ಮತ್ತು ಮಚ್ಚುಗಳೊಂದಿಗೆ ನಂಜೇಶ್ ಮೇಲೆರಗಿ ಮನಸೋ ಇಚ್ಛೆ ಹೊಡೆದರು.

ADVERTISEMENT

ಬಿಡಿಸಲು ಯತ್ನಿಸಿದ ಚೇತನ್‌ಗೂ ಮಚ್ಚು ತೋರಿಸಿ ಬೆದರಿಸಿದ ಹಂತಕರು, ನಂಜೇಶ್ ಅವರನ್ನು ರಕ್ತದ ಮಡುವಿನಲ್ಲಿ ಬಿಟ್ಟು ಪರಾರಿಯಾದರು. ಚೇತನ್ ಅವರು ಸ್ಥಳೀಯರ ನೆರವಿನೊಂದಿಗೆ ಹಾರೋಹಳ್ಳಿ ಬಳಿಯ ದಯಾನಂದ ಸಾಗರ್ ಆಸ್ಪತ್ರೆಗೆ ಕರೆತಂದರು.

ಆದರೆ, ಚಿಕಿತ್ಸೆಗೆ ಸ್ಪಂದಿಸದೆ ನಂಜೇಶ್ ಕೊನೆಯುಸಿರೆಳೆದರು. ಮೇಲ್ನೋಟಕ್ಕೆ ನಿವೇಶನ ವಿವಾದ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ಚೇತನ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಹಂತಕರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ನಿವೇಶನ ಗಲಾಟೆ ಕಾರಣ: ಹೊಂಗಾಣಿದೊಡ್ಡಿಯಲ್ಲಿ ಮೂರು ದಿನದ ಹಿಂದೆ ನಿವೇಶನವೊಂದರಲ್ಲಿ ಶ್ರೀನಿವಾಸ್ ಎಂಬಾತ ಕುರಿಗಳಿಗಾಗಿ ಶೆಡ್ ನಿರ್ಮಿಸಿದ್ದ. ಆ ಜಾಗ ತಮಗೆ ಸೇರಿದ್ದೆಂದು ಮಂಡ್ಯ ಜಿಲ್ಲೆ ಕೋಲೂರುದೊಡ್ಡಿಯ ಜಯಮ್ಮ ಎಂಬುವರು ಗಲಾಟೆ ಮಾಡಿದ್ದರು. ನಂಜೇಶ್ ಅವರಿಗೆ ಬೆಂಬಲ ನೀಡಿದ್ದರು.

ನಂತರ ಶೆಡ್ ಅನ್ನು ಧ್ವಂಸಗೊಳಿಸಲಾಗಿತ್ತು. ಈ ಕುರಿತು ಶ್ರೀನಿವಾಸ್ ಮಾವ ನಂಜೇಶ್, ಜಯಮ್ಮ ಮತ್ತು ಅವರ ಮಗನ ವಿರುದ್ಧ ಠಾಣೆಗೆ ದೂರು ಕೊಟ್ಟಿದ್ದರು. ಇದೇ ಕಾರಣಕ್ಕೆ ಶ್ರೀನಿವಾಸ್ ಸುಪಾರಿ ಹಂತಕರೊಂದಿಗೆ ಕೃತ್ಯ ಎಸಗಿರುವ ಅನುಮಾನವಿದೆ. ಡಾಬಾ ಬಳಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಡಿ.ಕೆ. ಸುರೇಶ್ ಭೇಟಿ: ಹೊಂಗಾಣಿದೊಡ್ಡಿಯಲ್ಲಿ ಭಾನುವಾರ ನಂಜೇಶ್ ಅಂತ್ಯಕ್ರಿಯೆ ನಡೆಯಿತು. ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್, ವಿಧಾನ ಪರಿಷತ್ ಸದಸ್ಯ ಎಸ್. ರವಿ ಸೇರಿದಂತೆ ಕಾಂಗ್ರೆಸ್ ಮುಖಂಡರು ಗ್ರಾಮಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಸಾಂತ್ವನ ಹೇಳಿದರು.

ಕನಕಪುರ ತಾಲ್ಲೂಕಿನ ಸಾತನೂರಿನಲ್ಲಿ ಕೊಲೆಯಾದ ಅಚ್ಚಲು ಗ್ರಾಮ ಪಂಚಾಯಿತಿ ಸದಸ್ಯ ಹೊಂಗಾಣಿದೊಡ್ಡಿಯ ಎನ್. ನಂಜೇಶ್ ಅವರ ಅಂತಿಮ ದರ್ಶನವನ್ನು ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಪಡೆದರು

ಬಿಜೆಪಿ ಮುಖಂಡನ ಮೇಲೆ ಹಲ್ಲೆ

ನಂಜೇಶ್ ಅಂತಿಮ ದರ್ಶನ ಪಡೆಯಲು ಭಾನುವಾರ ಬಂದಿದ್ದ ಬಿಜೆಪಿ ಮುಖಂಡ ಕುಮಾರಸ್ವಾಮಿ ಅವರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲೇ ಹಲ್ಲೆ ನಡೆಸಿದರು. ಸ್ಥಳಕ್ಕೆ ಡಿ.ಕೆ. ಸುರೇಶ್ ಬಂದು ಹೋದ ಕೆಲವೇ ನಿಮಿಷದಲ್ಲಿ ಈ ಘಟನೆ ನಡೆಯಿತು. ಪೊಲೀಸರು ತಕ್ಷಣ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಹಲ್ಲೆಯಿಂದ ಗಾಯಗೊಂಡ ಕುಮಾರಸ್ವಾಮಿ ಅವರನ್ನು ಆಸ್ಪತ್ರೆಗೆ ಕಳಿಸಿ ಕೊಟ್ಟರು.

ನಂಜೇಶರ್ ಕೊಲೆಯು ರಾಜಕೀಯ ತಿರುವು ಪಡೆದಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ಜಟಾಪಟಿಗೆ ಕಾರಣವಾಗಿದೆ. ‘ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೃಷ್ಣಪ್ಪ ಮತ್ತು ಅಚ್ಚಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪತಿ ಶಿವರಾಜು ಕುಮ್ಮಕ್ಕಿನಿಂದ ನನ್ನ ಮೇಲೆ ಹಲ್ಲೆಯಾಗಿದೆ. ಸ್ಥಳದಲ್ಲಿದ್ದ ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಸ್ಪತ್ರೆಯಿಂದ ಮರಳಿದ ಬಳಿಕ ಇಬ್ಬರ ಮೇಲೂ ದೂರು ನೀಡಲಾಗುವುದು’ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.