ADVERTISEMENT

ಹಿಂಬಡ್ತಿ ಆದೇಶ ವಾಪಸ್‌ ಪದವೀಧರ ಶಿಕ್ಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಜುಲೈ 2021, 10:10 IST
Last Updated 7 ಜುಲೈ 2021, 10:10 IST
ಚನ್ನಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒಗೆ ಮನವಿ ನೀಡಿದರು
ಚನ್ನಪಟ್ಟಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಬಿಇಒಗೆ ಮನವಿ ನೀಡಿದರು   

ಚನ್ನಪಟ್ಟಣ: ಒಂದರಿಂದ ಏಳನೇ ತರಗತಿಯವರೆಗೆ ಬೋಧಿಸುವ ಆದೇಶದೊಂದಿಗೆ ಪ್ರಾಥಮಿಕ ಶಾಲಾ ಸಹಶಿಕ್ಷಕರನ್ನು ನೇಮಕ ಮಾಡಿಕೊಂಡ ಶಿಕ್ಷಣ ಇಲಾಖೆಯು, ಈಗ ಕೇವಲ ಒಂದರಿಂದ ಐದನೇ ತರಗತಿಗೆ ಸೀಮಿತಗೊಳಿಸಿ ಹಿಂಬಡ್ತಿ ನೀಡಿದೆ. ಈ ಆದೇಶವನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಪದಾಧಿಕಾರಿಗಳು ಸೋಮವಾರ ಕ್ಷೇತ್ರ ಶಿಕ್ಷಾಣಾಧಿಕಾರಿಗೆ ಮನವಿ ಸಲ್ಲಿಸಿದರು.

2016ಕ್ಕಿಂತ ಹಿಂದೆ ನೇಮಕವಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1ರಿಂದ 7ನೇ ತರಗತಿಯವರೆಗೆ ಬೋಧಿಸುವ ಆದೇಶದೊಂದಿಗೆ ನೇಮಕ ಮಾಡಲಾಗಿತ್ತು. ಆದರೆ ಈಗ ಯಾರ ಗಮನಕ್ಕೂ ತಾರದೇ ಈ ಅದೇಶವನ್ನು ಬದಲಾಯಿಸಲಾಗಿದೆ. 1ರಿಂದ 5ನೇ ತರಗತಿಯವರೆಗೆ ಎಂದು ಪದನಾಮಕರಿಸಲಾಗಿದೆ. ಇದರಿಂದ ಶಿಕ್ಷಕರ ಸೇವಾ ಜೇಷ್ಠತೆ ಮತ್ತು ವಿದ್ಯಾರ್ಹತೆಯನ್ನು ಪರಿಗಣಿಸಿದೆ ಅವರಿಗೆ ಹಿಂಬಡ್ತಿ ನೀಡಿದಂತಾಗಿದೆ. ಈ ಕೂಡಲೇ ಈ ಆದೇಶವನ್ನು ರದ್ದು ಮಾಡಬೇಕು ಎಂದು ಅವರು ಆಗ್ರಹಿಸಿದರು.

20ರಿಂದ 25 ವರ್ಷಗಳಿಂದ 6ರಿಂದ 8ನೇ ತರಗತಿಯವರೆಗೆ ಬೋಧಿಸುತ್ತಿರುವ ಅರ್ಹ ಪದವೀಧರ ಶಿಕ್ಷಕರಿಗೂ ಅನ್ಯಾಯವಾಗಿದೆ. ಇದಲ್ಲದೇ ಶಿಕ್ಷಕರ ಗ್ರೇಡ್-2 ಹುದ್ದೆಗಳಿಗೆ ಮುಂಬಡ್ತಿ ನೀಡುವ ವಿಚಾರದಲ್ಲೂ ಅನ್ಯಾಯ ಮಾಡಲಾಗುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರು ಪಡೆದಿರುವ ಪದವಿ ಮತ್ತು ಜೇಷ್ಠತೆಗೆ ಯಾವುದೇ ಮಾನ್ಯತೆ ಇಲ್ಲದಂತಾಗಿದೆ. ಈ ಪ್ರಮಾದವನ್ನು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಈ ಸಮಸ್ಯೆಗಳು ಸೇರಿದಂತೆ ಶಿಕ್ಷಕರ ಹಲವಾರು ಸಮಸ್ಯೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ, ಬೆಂಗಳೂರು ಚಲೋ ಹೋರಾಟ ಸೇರಿದಂತೆ ಸಾಕಷ್ಟು ಹೋರಾಟಗಳನ್ನು ನಡೆಸಲಾಗಿದೆ. ಇದಲ್ಲದೇ ಸಾಕಷ್ಟು ಬಾರಿ ಮನವಿಗಳನ್ನು ಸಲ್ಲಿಸಲಾಗಿದ್ದರೂ ಸಹ ಸರ್ಕಾರ ನಮ್ಮ ಮನವಿಯನ್ನು ಪರಿಗಣಸದಿರುವುದು ಬೇಸರ ಮೂಡಿಸಿದೆ. ನಮ್ಮ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸದಿದ್ದರೆ, ಬೋಧನೆಯನ್ನು ಬಹಿಷ್ಕರಿಸುವ ಜತೆಗೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಸಂಘದ ಗೌರವಾಧ್ಯಕ್ಷ ದ್ಯಾವೇಗೌಡ, ಅಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್, ಉಪಾಧ್ಯಕ್ಷರಾದ ಸೋಮಣ್ಣ, ಕೌಸಲ್ಯ, ಸಹ ಕಾರ್ಯದರ್ಶಿಗಳಾದ ವೈದ್ಯರಾಜು, ಪ್ರಸನ್ನ, ಪದಾಧಿಕಾರಿಗಳಾದ ರವಿ, ವೆಂಕಟೇಶ್, ರಾಘವೇಂದ್ರ, ಕವಿತಾ, ಅಪ್ಪಾಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.