ADVERTISEMENT

ಕಾಂಗ್ರೆಸ್, ಬಿಜೆಪಿ ಪರ ಮೃದುಧೋರಣೆ ಇಲ್ಲ: ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:38 IST
Last Updated 25 ಜೂನ್ 2022, 4:38 IST
ಚನ್ನಪಟ್ಟಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಕೃಷಿ ಅಭಿಯಾನಕ್ಕೆ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು
ಚನ್ನಪಟ್ಟಣದಲ್ಲಿ ಕೃಷಿ ಇಲಾಖೆಯಿಂದ ನಡೆದ ಕೃಷಿ ಅಭಿಯಾನಕ್ಕೆ ಶಾಸಕ ಎಚ್‌.ಡಿ. ಕುಮಾರಸ್ವಾಮಿ ಚಾಲನೆ ನೀಡಿದರು   

ಚನ್ನಪಟ್ಟಣ: ‘ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆ ಸಾಫ್ಟ್ ಕಾರ್ನರ್ ಆಗುವ ಪ್ರಶ್ನೆಯೇ ಇಲ್ಲ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ನಗರದಲ್ಲಿ ಶುಕ್ರವಾರ ಕೃಷಿ ಇಲಾಖೆಯಿಂದ ನಡೆದ ಕೃಷಿ ಅಭಿಯಾನಕ್ಕೆ ಚಾಲನೆ ನೀಡಿದ ನಂತರ ರಾಹುಲ್ ಗಾಂಧಿ ಬಗ್ಗೆ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ‘ರಾಹುಲ್ ಗಾಂಧಿ ವಿಚಾರದಲ್ಲಿ ಇರುವಂತಹ ವಾಸ್ತವಾಂಶ ಹೇಳಿದ್ದೇನೆ. ಯಾರ ಜೊತೆ ರಾಜಿಯಾಗಲಿ, ಅನುಕಂಪದ ಪ್ರಶ್ನೆಯಾಗಲಿ ಇಲ್ಲ’ ಎಂದರು.

‘ಈ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಯಾವ ರೀತಿ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸ್ವಾಯತ್ತ ಸಂಸ್ಥೆಗಳು ಯಾವ ರೀತಿ ಕೆಲಸ ಮಾಡುತ್ತಿವೆ ಎಂಬುದನ್ನು ಚರ್ಚೆ ಮಾಡಿದ್ದೇನೆ. ಕಾಂಗ್ರೆಸ್ ಬಗ್ಗೆ ನಾನ್ಯಾಕೆ ಸಾಫ್ಟ್ ಕಾರ್ನರ್ ಆಗಲಿ. ನಮ್ಮ ಕುತ್ತಿಗೆ ಕುಯ್ದಿದ್ದೆ ಕಾಂಗ್ರೆಸ್‌ನವರು. ನಾನು ಯಾಕೆ ಅವರ ಬಗ್ಗೆ ಸಾಫ್ಟ್ ಕಾರ್ನರ್ ತೋರಿಸಲಿ. ಅವರ ರೀತಿ ನಾನು ಬೀದಿಲಿ ಬ್ಯಾರಿಕೇಡ್ ಹತ್ತಿ ಡಾನ್ಸ್ ಮಾಡೋಕೆ ಹೋಗಬೇಕಾ’ ಎಂದು ವಾಗ್ದಾಳಿ ನಡೆಸಿದರು.

ADVERTISEMENT

‘ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ನಾಯಕರನ್ನು ಓಲೈಸಿಕೊಳ್ಳಲು ಈ ಹೇಳಿಕೆ ನೀಡಿಲ್ಲ. ನಾನು ಈ ಹೇಳಿಕೆ ಕೊಟ್ಟಾಗ ಒಬ್ಬ ಬಿಜೆಪಿ ಸಂಸದರೇ ನನಗೆ ಫೋನ್ ಮಾಡಿ ಶಹಬ್ಬಾಸ್‌ಗಿರಿ ಹೇಳಿದರು. ಈ ವ್ಯವಸ್ಥೆ ಬಗ್ಗೆ ಸರಿಯಾಗಿ ಕಾಮನ್ ಸೆನ್ಸ್ ಬಗ್ಗೆ ಮಾತನಾಡಿದ್ದೀರಿ ಎಂದಿದ್ದರು ಎಂದರು.

ಕಾಂಗ್ರೆಸ್ ಹಾಗೂ ಬಿಜೆಪಿಯ ನಡವಳಿಕೆ ನೋಡಿದ್ದೇವೆ. ಇದನ್ನೇ ಮುಂದಿಟ್ಟುಕೊಂಡು ಮುಂದಿನ ಚುನಾವಣೆಗೆ ಹೋಗುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳ ಕುತಂತ್ರದ ಬಗ್ಗೆ ಜನರಿಗೆ ಮನದಟ್ಟು ಮಾಡುವ ಕೆಲಸ ಮಾಡುತ್ತೇವೆ. ಪ್ರಾದೇಶಿಕ ಪಕ್ಷವನ್ನು ಬೆಂಬಲಿಸಲು ಜನರ ಮನವಿ ಮಾಡುತ್ತೇವೆ ಎಂದರು.

ಮಹಾರಾಷ್ಟ್ರದಲ್ಲಿ ಬಿಜೆಪಿ ಆಟ: ಮಹಾರಾಷ್ಟ್ರ ನಡೆಯುತ್ತಿರುವ ರಾಜಕೀಯ ಬಿಜೆಪಿ ಆಟ ಎಂಬುದು ಇಡೀ ದೇಶಕ್ಕೆ ಗೊತ್ತು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಮಹಾರಾಷ್ಟ್ರದಲ್ಲಿ ಸರ್ಕಾರ ತೆಗೆಯಲು ಬಿಜೆಪಿ ಹೊರಟಿದೆ. ನಮಗೆ ಏನು ಗೊತ್ತಿಲ್ಲ ಎಂಬಂತೆ ಬಿಜೆಪಿಯವರು ಇದ್ದಾರೆ. ಬಿಜೆಪಿ ಸರ್ಕಾರವಿರುವ ರಾಜ್ಯಗಳಿಗೆ ಶಾಸಕರನ್ನು ಕರೆದೊಯ್ದಿದ್ದಾರೆ. ಶಾಸಕರನ್ನು ಹೈಜಾಕ್ ಮಾಡಿಕೊಂಡು ಅಲ್ಲಿಟ್ಟುಕೊಂಡಿದ್ದಾರೆ. ಕರ್ನಾಟಕದ ಸರ್ಕಾರ ನಡೆಯುತ್ತಿದ್ದಾಗ ಇಲ್ಲಿನ ಶಾಸಕರನ್ನು ಮುಂಬೈಗೆ ಕರೆದೊಯ್ದಿದ್ದರು ಎಂದು ಟೀಕಿಸಿದರು.

ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವಂತದ್ದು ಮಾರಕ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ನಡೆ. ಕೇಂದ್ರ ಸರ್ಕಾರ ಒಳಗೊಂಡಂತೆ ಎಲ್ಲಾ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರಬೇಕು ಎನ್ನುವುದು ಅವರ ಉದ್ದೇಶ. ಅವರ ಈ ರೀತಿಯ ಕುತಂತ್ರದ ಬೆಳವಣಿಗೆಗಳು ಬಗ್ಗೆ ಮುಂದಿನ ದಿನಗಳಲ್ಲಿ ಅವರಿಗೆ ಉತ್ತರ ದೊರೆಯಲಿದೆ ಎಂದು ಕಿಡಿಕಾರಿದರು.

ಶಿವಸೇನೆ ನಾಯಕ ಏಕನಾಥ್ ಶಿಂಧೆ ಶಿವಸೇನೆ ನಮ್ಮದೆಂದು ಕ್ಲೈಮ್ ಮಾಡಬಹುದು ಎಂದು ಹೇಳಿದರು.

‘ಸಂಖ್ಯಾಬಲದ ಆಧಾರದ ಮೇಲೆ ಅವರು ಕ್ಲೈಮ್ ಮಾಡಬಹುದು. ಚುನಾವಣೆಗೆ ಹೋದಾಗ ಬೆಳವಣಿಗೆ ನಡೆಯುತ್ತದೆ. ಅಂದು ಚರ್ಚೆಯಾಗುತ್ತದೆ. ಶಿವಸೇನೆಯ ಸಂಸ್ಥಾಪಕರು ಮತ್ತು ಯಾಯ‍್ಯಾರು ದೇಣಿಗೆ ನೀಡಿದ್ದಾರೆ, ಕಾರ್ಯಕರ್ತರು ಯಾರ ಜೊತೆಗೆ ನಿಲ್ಲುತ್ತಾರೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಯ ತೀರ್ಮಾನವಾಗುತ್ತದೆ ಎಂಬುದು ನನ್ನ ಅಭಿಪ್ರಾಯ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.