
ಬಿಡದಿ (ರಾಮನಗರ): ‘ರೈತರ ಒಂದಿಂಚೂ ಭೂಮಿ ವಶಪಡಿಸಿಕೊಳ್ಳಲು ಬಿಡುವುದಿಲ್ಲ. ನಿಮ್ಮ ಭೂಮಿ ಉಳಿಸುವುದು ನನ್ನ ಜವಾಬ್ದಾರಿ. ಯಾರು ಏನೇ ಒತ್ತಡ ಹಾಕಿದರೂ ಬಾಗಬೇಡಿ. ಸಾಯುವವರೆಗೆ ನಿಮ್ಮ ಜೊತೆಗಿದ್ದು ಹೋರಾಡುವೆ’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ರೈತರಿಗೆ ಅಭಯ ನೀಡಿದ್ದಾರೆ.
ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ (ಜಿಬಿಐಟಿ) ಯೋಜನೆ ವಿರೋಧಿಸಿ ಭೈರಮಂಗಲದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾನುವಾರ ಪಾಲ್ಗೊಂಡು ಮಾತನಾಡಿದರು.
‘ಅಧಿಕಾರಿಗಳು ಮತ್ತು ಪೊಲೀಸರನ್ನು ಮುಂದಿಟ್ಟುಕೊಂಡು ದಬ್ಬಾಳಿಕೆ ಮಾಡುವುದು ಡಿಕೆ ಸಹೋದರರ ಹುಟ್ಟು ಗುಣ. ಅಧಿಕಾರ ಯಾರಿಗೂ ಶಾಶ್ವತವಲ್ಲ. 2028ರಲ್ಲಿ ನಮ್ಮ ಸರ್ಕಾರ ಬರಲಿದೆ. ಆಗ ಜನರನ್ನು ಕಣ್ಣೀರು ಹಾಕಿಸಿದವರಿಗೆ ಏನು ಮಾಡಬೇಕೆಂಬುದು ಗೊತ್ತಿದೆ’ ಎಂದು ಎಚ್ಚರಿಕೆ ನೀಡಿದರು.
‘ಯೋಜನೆಗೆ ಸರ್ಕಾರದ ಬಳಿ ಹಣವಿಲ್ಲ. ರೈತರಿಂದ ವಶಪಡಿಸಿಕೊಳ್ಳುವ ಜಮೀನು ಮಾರಿ ಹಣ ತರುವ ಆಲೋಚನೆ ಇವರದ್ದು. ಜನರಿಗೆ ಅನ್ಯಾಯವಾದಾಗ ಅವರ ಪರ ಮಾತನಾಡುವುದು ನನ್ನ ಗುಣ. ಡಿಕೆ ಸಹೋದರರಿಗೆ ಲೂಟಿ ಹೊಡೆಯುವ ಚಪಲ. ಇವರು ಮನೆಹಾಳರೇ ಹೊರತು ಉದ್ಧಾರ ಮಾಡುವ ವರಲ್ಲ’ ಎಂದು ವಾಗ್ದಾಳಿ ನಡೆಸಿದರು.
ಅಧಿಕಾರ ಯಾರಿಗೂ ಶಾಶ್ವತವಲ್ಲ. ರಾಜ್ಯದಲ್ಲಿ ಜೆಡಿಎಸ್–ಬಿಜೆಪಿ ಮೈತ್ರಿಕೂಟದ ನೇತೃತ್ವದಲ್ಲಿ 2028ರಲ್ಲಿ ನಿಜವಾದ ರಾಮರಾಜ್ಯದ ಸರ್ಕಾರ ತರಬೇಕು ಎಂದೇ ಆ ದೇವರು ಐದು ಸಲ ನನ್ನ ಉಳಿಸಿದ್ದಾನೆ– ಎಚ್.ಡಿ. ಕುಮಾರಸ್ವಾಮಿ ಕೇಂದ್ರ ಸಚಿವ
‘ಉಪನಗರ ಯೋಜನೆ ತಮ್ಮ ಕೂಸು ಎಂದು ಡಿಕೆ ಸಹೋದರರು ಹೇಳುತ್ತಿದ್ದಾರೆ. ಯೋಜನೆ ರೂಪಿಸಿದ್ದು ನಾನು. ಆದರೆ, ರೈತರು ಬೇಡ ಎಂದು ಮನವಿ ಮಾಡಿದ್ದಕ್ಕೆ ಕೈ ಬಿಟ್ಟೆ. ಈ ಬಗ್ಗೆ ಚರ್ಚಿಸಲು ಅಣ್ಣ–ತಮ್ಮ ಇಬ್ಬರೂ ಇದೇ ಜಾಗಕ್ಕೆ ಚರ್ಚೆಗೆ ಬರಲಿ’ ಎಂದು ಕುಮಾರಸ್ವಾಮಿ, ಡಿಕೆ ಸಹೋದರರಿಗೆ ಸವಾಲು ಹಾಕಿದರು.
ಚರ್ಚೆಗೆ ನಾನೂ ಬರುವೆ:
ಎಚ್‌ಡಿಕೆ ಪಂಥಾಹ್ವಾನಕ್ಕೆ ಕನಕಪುರ ತಾಲ್ಲೂಕಿನ ದೊಡ್ಡ ಆಲಹಳ್ಳಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ‘ಕುಮಾರಸ್ವಾಮಿ ಅವರು ಚರ್ಚೆಗೆ ದಿನ ನಿಗದಿಪಡಿಸಿದರೆ ನಾನು ಬರುವೆ. ಅವರು ಸಿ.ಎಂ ಆಗಿದ್ದಾಗಲೇ ಇಂತಹ ಸವಾಲು ಸ್ವೀಕರಿಸಿದವನು ನಾನು. ಇಂದು ರಾಮಮಂದಿರದ ಸನ್ನಿಧಿಯಲ್ಲಿ ಹೇಳುತ್ತಿದ್ದೇನೆ. ಅವರು ಮೂರು ದಿನ ಮುಂಚೆ ನನಗೆ ತಿಳಿಸಲಿ. ಯೋಜನೆ ಕುರಿತು ಅವರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವೆ’ ಎಂದು ಪ್ರತಿ ಸವಾಲು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.