ADVERTISEMENT

ಆರೋಗ್ಯ ತಪಾಸಣಾ ಶಿಬಿರ

ಕ್ಲಾಥಿಂಗ್‌ ಗಾರ್ಮೆಂಟ್ಸ್‌ನಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 8 ಮೇ 2022, 4:13 IST
Last Updated 8 ಮೇ 2022, 4:13 IST
ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ನಾಗರಿಕರು
ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡಿದ್ದ ನಾಗರಿಕರು   

ಕನಕಪುರ: ‘ಹಳ್ಳಿಗಾಡಿನ ಜನತೆಗೆ ಉಚಿತ ಆರೋಗ್ಯ ಸೇವೆ ದೊರಕಿಸಿಕೊಡುವ ಉದ್ದೇಶದಿಂದ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ವೈದ್ಯಕೀಯ ತಪಾಸಣೆಯೊಂದಿಗೆ ಉಚಿತ ಸರ್ಜರಿ ಮತ್ತು ಔಷಧಿ ನೀಡಲಾಗುತ್ತಿದೆ’ ಎಂದು ಲಗುನಾ ಕ್ಲಾಥಿಂಗ್‌ಗಾರ್ಮೆಂಟ್ಸ್‌ನ ಎಚ್‌.ಆರ್‌. ವಿಭಾಗದ ಮುಖ್ಯಸ್ಥ ಸದಾಶಿವ ತಿಳಿಸಿದರು.

ತಾಲ್ಲೂಕಿನ ಕಬ್ಬಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಲಗುನಾ ಕ್ಲಾಥಿಂಗ್‌ ಗಾರ್ಮೆಂಟ್ಸ್‌ನಿಂದ ಡಾ.ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯ ಸಹಭಾಗಿತ್ವದಡಿ ಶನಿವಾರ ಏರ್ಪಡಿಸಿದ್ದ ಬೃಹತ್‌ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.

ಸಂಸ್ಥೆಯಿಂದ ಮೂರು ತಿಂಗಳಿಗೊಮ್ಮೆ ಆರೋಗ್ಯ ಶಿಬಿರ ನಡೆಸಲಾಗುತ್ತದೆ. ಆ ಶಿಬಿರದ ಲಾಭವು ಗ್ರಾಮೀಣ ಜನತೆಗೆ ಸಿಗಲಿ ಎಂಬ ಕಾರಣಕ್ಕೆ ಇಲ್ಲಿ ಆಯೋಜಿಸಲಾಗಿದೆ. ಪಂಚಾಯಿತಿ ವ್ಯಾಪ್ತಿ ಬರುವ 27 ಹಳ್ಳಿಗಳ ಜನತೆಗೆ ಇದರಿಂದ ಅನುಕೂಲವಾಗುತ್ತಿದೆ ಎಂದು
ಹೇಳಿದರು.

ADVERTISEMENT

ಶಿಬಿರಕ್ಕೆ ಜನರನ್ನು ಕರೆತರಲು ಪಂಚಾಯಿತಿ ಮತ್ತು ಗಾರ್ಮೆಂಟ್ಸ್‌ನಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. ದಯಾನಂದ ಸಾಗರ್‌ ಆಸ್ಪತ್ರೆಯಿಂದ 35 ವೈದ್ಯರ ತಂಡ ಬಂದಿದ್ದು ಶಿಬಿರ ನಡೆಸಿಕೊಡುತ್ತಿದೆ ಎಂದರು.

ಶಿಬಿರದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೇಂದ್ರ ತೆರೆದು ತಪಾಸಣೆ ನಡೆಸಲಾಯಿತು. 1,500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಯಿತು.

ಬಿಎಂಐಸಿ ಮಾಜಿ ಅಧ್ಯಕ್ಷ ಎಚ್‌.ಕೆ. ಶ್ರೀಕಂಠು, ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಎಂ.ಡಿ. ವಿಜಯದೇವು ಆರೋಗ್ಯ ಶಿಬಿರ ಉದ್ಘಾಟಿಸಿದರು. ಲಗುನಾ ಗಾರ್ಮೆಂಟ್ಸ್‌ ಸಿಇಒ ರಾಜೇಶ್‌ಕುಮಾರ್‌, ಸಿಒಒ ಸಂದೀಪ್‌, ಉತ್ಪಾದನಾ ವಿಭಾಗದ ಮುಖ್ಯಸ್ಥ ಮನೀಶ್‌, ಲಂಡನ್‌ನ ಮಾರ್ಟಿನ್‌, ಪಂಚಾಯಿತಿ ಸದಸ್ಯರು, ಸ್ಥಳೀಯ ಮುಖಂಡರು
ಉಪಸ್ಥಿತರಿದ್ದರು.

ದೇಗುಲ ಮಠದ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು, ಗಾರ್ಮೆಂಟ್ಸ್‌ ನೌಕರರು, ಕಬ್ಬಾಳು ಗ್ರಾಮ ಪಂಚಾಯಿತಿ ಸಿಬ್ಬಂದಿ ಆರೋಗ್ಯ ಶಿಬಿರದಲ್ಲಿ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.